ಮಾಸಿಕ ₹ 2 ಕೋಟಿ ಹೆಚ್ಚುವರಿ ಶುಲ್ಕ ಸಂಗ್ರಹದ ನಿರೀಕ್ಷೆ..!

7
ಸ್ಥಿರಾಸ್ತಿ ಮಾರುಕಟ್ಟೆ ಮೌಲ್ಯದಲ್ಲಿ ಶೂನ್ಯದಿಂದ ಶೇ 50ರವರೆಗೂ ಹೆಚ್ಚಳ; ಖರೀದಿದಾರರಿಗೆ ಬರೆ

ಮಾಸಿಕ ₹ 2 ಕೋಟಿ ಹೆಚ್ಚುವರಿ ಶುಲ್ಕ ಸಂಗ್ರಹದ ನಿರೀಕ್ಷೆ..!

Published:
Updated:

ವಿಜಯಪುರ: ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜಿಲ್ಲೆಯಲ್ಲಿನ ಸ್ಥಿರಾಸ್ತಿಗಳ ಅಂದಾಜು ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಿದ್ದು, ಜ.1ರ ಮಂಗಳವಾರದಿಂದಲೇ ಜಾರಿಗೊಂಡಿದೆ.

ಜಿಲ್ಲೆಯ ವಿವಿಧೆಡೆ ಒಂದೊಂದು ದರ ಪರಿಷ್ಕೃತಗೊಂಡಿದೆ. ಶೂನ್ಯದಿಂದ ಶೇ 50ರವರೆಗೂ ದರ ಪರಿಷ್ಕರಿಸಲಾಗಿದೆ. ವಿಜಯಪುರ ನಗರದಲ್ಲಿ ಮೂರು ವರ್ಷಗಳ ಬಳಿಕ ಬೃಹತ್ ಪ್ರಮಾಣದಲ್ಲಿ ಪರಿಷ್ಕರಣೆ ನಡೆದಿದ್ದು, ಖರೀದಿದಾರರಿಗೆ ಬರೆ ಹಾಕಿದಂತಾಗಿದೆ.

ಜಿಲ್ಲೆಯ ಮುಳುಗಡೆ ಪ್ರದೇಶದ ಕೆಲ ಹಳ್ಳಿಗಳನ್ನು ಹೊರತು ಪಡಿಸಿ, ವಿಜಯಪುರ, ಬಸವನಬಾಗೇವಾಡಿ, ಮುದ್ದೇಬಿಹಾಳ, ಇಂಡಿ, ಸಿಂದಗಿ ತಾಲ್ಲೂಕಿನ ನಗರ, ಗ್ರಾಮೀಣ, ಪಟ್ಟಣ ಪ್ರದೇಶದ ವ್ಯಾಪ್ತಿಯಲ್ಲಿ ಈ ನೂತನ ಪರಿಷ್ಕೃತ ದರ ಈಗಾಗಲೇ ಜಾರಿಗೊಂಡಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

2017ರ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ, ವಿಜಯಪುರ ತಾಲ್ಲೂಕು ಹೊರತುಪಡಿಸಿ, ಜಿಲ್ಲೆಯಾದ್ಯಂಥ ಸ್ಥಿರಾಸ್ತಿಗಳ ಅಂದಾಜು ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳನ್ನು ಈ ಹಿಂದೆ ಪರಿಷ್ಕರಿಸಲಾಗಿತ್ತು. ಇದೀಗ ಮತ್ತೊಮ್ಮೆ 20 ತಿಂಗಳ ಬಳಿಕ ಮಾರುಕಟ್ಟೆ ದರ ಪರಿಷ್ಕರಿಸಲಾಗಿದೆ ಎನ್ನಲಾಗಿದೆ.

‘ಈ ಹಿಂದಿನ ದರದಂತೆ ಜಿಲ್ಲೆಯಲ್ಲಿ ಪ್ರತಿ ತಿಂಗಳು ಕನಿಷ್ಠ ₹ 6.50 ಕೋಟಿ ಶುಲ್ಕ, ನೋಂದಣಿ ತೆರಿಗೆ ಮೂಲಕ ಸಂಗ್ರಹಗೊಳ್ಳುತ್ತಿತ್ತು. ಈ ಹಿಂದಿನ ನವೆಂಬರ್ ತಿಂಗಳಲ್ಲಿ ₹ 6.59 ಕೋಟಿ, ಡಿಸೆಂಬರ್‌ನಲ್ಲಿ ₹ 6.26 ಕೋಟಿ ತೆರಿಗೆ ಸಂಗ್ರಹವಾಗಿದೆ. ಈ ತಿಂಗಳಿಂದ ಶೇ 25ಕ್ಕೂ ಹೆಚ್ಚು ತೆರಿಗೆ ಸಂಗ್ರಹಗೊಳ್ಳಲಿದ್ದು, ಇನ್ಮುಂದೆ ಪ್ರತಿ ತಿಂಗಳು ₹ 8.5 ಕೋಟಿ ನೋಂದಣಿ ತೆರಿಗೆ ಶುಲ್ಕ ಸಂಗ್ರಹಗೊಳ್ಳಬಹುದು’ ಎಂದು ಜಿಲ್ಲಾ ನೋಂದಣಾಧಿಕಾರಿ ಜಿ.ಆರ್‌.ನಾಡಗೌಡ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪರಿಷ್ಕೃತ ದರ ಹೆಚ್ಚಳ
ವಿಜಯಪುರ ತಾಲ್ಲೂಕಿನಲ್ಲಿ, ನಗರದಲ್ಲಿ ನಿವೇಶನದ ಮಾರುಕಟ್ಟೆ ಮೌಲ್ಯ ಶೇ 20ರಿಂದ 50ರಷ್ಟು ಹೆಚ್ಚಳಗೊಂಡಿದೆ. ಕೃಷಿ ಜಮೀನಿನ ಮಾರುಕಟ್ಟೆ ಮೌಲ್ಯವನ್ನು ಸಹ ಶೇ 20ರಿಂದ 40ರಷ್ಟು ಹೆಚ್ಚಿಸಲಾಗಿದೆ. ಈ ದುಬಾರಿ ಹೆಚ್ಚಳ, ಖರೀದಿ ಆಸೆಯನ್ನೇ ಕೈ ಬಿಡುವಂತೆ ಮಾಡಿದೆ ಎಂಬ ಮಾತು ವಿಜಯಪುರ ಉಪ ನೋಂದಣಾಧಿಕಾರಿ ಕಚೇರಿಗೆ ನೋಂದಣಿಗಾಗಿ ಬಂದಿದ್ದ ಬಹುತೇಕರಿಂದ ಬುಧವಾರ ಕೇಳಿ ಬಂತು.

ಬಸವನಬಾಗೇವಾಡಿ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಪಟ್ಟಣ, ಗ್ರಾಮಗಳ ವ್ಯಾಪ್ತಿಯಲ್ಲಿ ಕೃಷಿ ಭೂಮಿ ನೋಂದಣಿಗೆ ಸೊನ್ನೆಯಿಂದ 15%ವರೆಗೂ ಅಂದಾಜು ಮಾರುಕಟ್ಟೆ ಮೌಲ್ಯ ಹೆಚ್ಚಿಸಲಾಗಿದೆ. ಇದೇ ರೀತಿ ನಿವೇಶನದ ಮಾರುಕಟ್ಟೆ ಮೌಲ್ಯವನ್ನು ಶೇ 20ರಿಂದ 25ರಷ್ಟು ಹೆಚ್ಚಿಸಲಾಗಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ಜಿ.ಆರ್.ನಾಡಗೌಡ ತಿಳಿಸಿದರು.

ಸಿಂದಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಕೃಷಿ, ನಿವೇಶನದ ಅಂದಾಜು ಮಾರುಕಟ್ಟೆ ಮೌಲ್ಯವನ್ನು 15ರಿಂದ 20%, ಇಂಡಿ ತಾಲ್ಲೂಕಿನಲ್ಲಿ 10ರಿಂದ 20%, ಮುದ್ದೇಬಿಹಾಳ ತಾಲ್ಲೂಕಿನಲ್ಲಿ 5% ಮಾರುಕಟ್ಟೆ ಮೌಲ್ಯ ಪರಿಷ್ಕರಿಸಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶ ಹೊರಡಿಸಿದ್ದು, ಇದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಊರಿಂದ ಊರಿಗೆ, ಪ್ರದೇಶದಿಂದ ಪ್ರದೇಶಕ್ಕೆ ಭಿನ್ನ
‘ಪ್ರತಿ ತಾಲ್ಲೂಕಿನ ಹಳ್ಳಿ, ಪಟ್ಟಣ, ನಗರ ಪ್ರದೇಶದಲ್ಲಿ ಒಂದೊಂದು ಪ್ರದೇಶದ ಅಂದಾಜು ಮಾರುಕಟ್ಟೆ ಮೌಲ್ಯ ಬೇರೆ ಬೇರೆಯಿದೆ. ಅಲ್ಲಿನ ಜಾಗದ ಬೇಡಿಕೆಗೆ ತಕ್ಕಂತೆ ಬದಲಿದೆ. ಇಲಾಖೆಯ ಆದೇಶದಂತೆ ಪ್ರತಿ ಪ್ರದೇಶದ ಅಂದಾಜು ಮಾರುಕಟ್ಟೆ ಮೌಲ್ಯದಂತೆ ಸ್ಥಿರಾಸ್ತಿ ಮಾರಾಟ–ಖರೀದಿ ಸಂದರ್ಭ ದರ ನಿಗದಿ ಪಡಿಸುತ್ತೇವೆ.

ಪ್ರತಿ ಎಕರೆ ಭೂಮಿ, ನಿವೇಶನಕ್ಕೆ ಆಯಾ ಸ್ಥಳದ ಮಾರುಕಟ್ಟೆ ಪ್ರದೇಶದ ಮಾರ್ಗಸೂಚಿ ದರ ಅನುಸರಿಸಿ, ನೋಂದಣಿ ನಡೆಸುತ್ತೇವೆ. ಈ ಸಂದರ್ಭ ಮುದ್ರಣ ಶುಲ್ಕವಾಗಿ 5.65%, ನೋಂದಣಿ ಶುಲ್ಕವಾಗಿ 1% ಸೇರಿದಂತೆ ಒಟ್ಟು 6.65% ತೆರಿಗೆ ಪಡೆಯುತ್ತೇವೆ. ₹ 1 ಲಕ್ಷ ಮೊತ್ತಕ್ಕೆ ₹ 6650 ತೆರಿಗೆ ಕಟ್ಟಿಸಿಕೊಳ್ಳುತ್ತೇವೆ’ ಎಂದು ನಾಡಗೌಡ ಮಾಹಿತಿ ನೀಡಿದರು.

ದರ ಹೆಚ್ಚಳಕ್ಕೆ ಜನಾಕ್ರೋಶ
ಜಿಲ್ಲೆಯಲ್ಲಿ ಸ್ಥಿರಾಸ್ತಿಗಳ ಅಂದಾಜು ಮಾರುಕಟ್ಟೆ ಮೌಲ್ಯ ದರ ಪರಿಷ್ಕರಿಸಿ, ಭಾರಿ ಪ್ರಮಾಣದ ಹೆಚ್ಚಳ ಮಾಡಿರುವುದಕ್ಕೆ ನಗರವೂ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ತೀವ್ರ ಜನಾಕ್ರೋಶ ವ್ಯಕ್ತವಾಗಿದೆ. 50%ವರೆಗೂ ಹೆಚ್ಚಿಸಿರುವುದಕ್ಕೆ ವಿಜಯಪುರದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

‘ಸ್ಥಿರಾಸ್ತಿ ಖರೀದಿ ದರ ಹೆಚ್ಚಳ ಮಾಡಿದ್ದು ಸಮಂಜಸವಲ್ಲ. ಮನೆ ಖರೀದಿಗೆ ಹಿಂದೆ ನಗರ, ಗ್ರಾಮೀಣ ಪ್ರದೇಶದ ದರ ಬೇರೆ ಬೇರೆಯಾಗಿತ್ತು. ಈಗ ಪ್ಲಾಟ್‌ ಖರೀದಿ ದರ ಶೇ ೫೦ರಷ್ಟು ಹೆಚ್ಚಳವಾಗಿದೆ. ಜನರ ಕಷ್ಟ ಅರಿಯದ ಸರ್ಕಾರದ ನೀತಿ ಇದಾಗಿದೆ. ಬೆಂಗಳೂರಿನಲ್ಲಿ ಮನೆ ಖರೀದಿಸಿದರೂ, ನಿಡಗುಂದಿಯಲ್ಲಿ ಮನೆ ಖರೀದಿಸಿದರೂ, ಒಂದೇ ದರ. ಇದು ಯಾವ ನ್ಯಾಯ ?’ ಎಂದು ನಿಡಗುಂದಿಯ ಮಲ್ಲಿಕಾರ್ಜುನ ಅಂದಾನೆಪ್ಪ ಭಾವಿಕಟ್ಟಿ ‘ಪ್ರಜಾವಾಣಿ’ ಬಳಿ ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದ ತಿಂಗಳು ಮೂರು ಎಕರೆ ಹೊಲ ಖರೀದಿ ಉದ್ದೇಶದಿಂದ ವಿಚಾರಿಸಿದಾಗ ಮಾರುಕಟ್ಟೆಯ ಅಂದಾಜು ಮೌಲ್ಯ ₹ 2.50 ಲಕ್ಷವಿತ್ತು. ಇದೀಗ ಖರೀದಿಗೆ ಬಂದಿರುವೆ. ₹ 3 ಲಕ್ಷವಾಗಿದೆ. ₹ 3300 ಹೆಚ್ಚಿಗೆ ಕಟ್ಟಬೇಕಿದೆ. ಬೆಂಗಳೂರಿನ ಎಸಿ ರೂಮಿನಲ್ಲಿ ಕುಳಿತು ದರ ಪರಿಷ್ಕರಿಸುವ ಅಧಿಕಾರಿಗಳಿಗೆ ರೈತರ ಕಷ್ಟ ಹೇಗೆ ಅರ್ಥವಾಗುತ್ತೆ’ ಎನ್ನುತ್ತಾರೆ ಕುದರಿ ಸಾಲವಾಡಗಿಯ ಅಪ್ಪಾಸಾಹೇಬಗೌಡ ಪಾಟೀಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !