ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡ್ಯ ಆಯ್ಕೆ ಸಮರ್ಥಿಸಿ, ರಾಹುಲ್ ಕೈಬಿಟ್ಟಿದ್ದಕ್ಕೆ ಕಾರಣ ಕೊಟ್ಟ ಅಜಿತ್ ಅಗರ್ಕರ್

Published 2 ಮೇ 2024, 13:46 IST
Last Updated 2 ಮೇ 2024, 13:46 IST
ಅಕ್ಷರ ಗಾತ್ರ

ಮುಂಬೈ: ಟಿ20 ವಿಶ್ವಕಪ್ ಟೂರ್ನಿಗೆ ಫಾರ್ಮ್‌ನಲ್ಲಿಲ್ಲದ ಮತ್ತು ಐಪಿಎಲ್‌ನ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ನಾಯಕತ್ವ ನಿಭಾಯಿಸಲು ಹೆಣಗಾಡುತ್ತಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಆಯ್ಕೆಯನ್ನು ಬಿಸಿಸಿಐನ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತಂತೆ ಟೀಕೆಗಳಿಗೆ ಉತ್ತರಿಸಿರುವ ಅವರು, ‘ತಂಡದಲ್ಲಿದ್ದುಕೊಂಡು ಹಾರ್ದಿಕ್ ಏನು ಮಾಡಬಲ್ಲರೋ ಅದಕ್ಕೆ ಪರ್ಯಾಯವೇ ಇಲ್ಲ’ ಎಂದು ಹೇಳಿದ್ದಾರೆ.

2023ರ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯ ಆಡಿದ್ದೇ ಹಾರ್ದಿಕ್ ಕೊನೆ ಪಂದ್ಯವಾಗಿದೆ.

‘ಉಪನಾಯಕ ಸ್ಥಾನದ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಟೂರ್ನಿಯಲ್ಲಿ ನಮ್ಮ ಮೊದಲ ಪಂದ್ಯಕ್ಕೆ ಇನ್ನೂ ಒಂದು ತಿಂಗಳಿಗೂ ಅಧಿಕ ಸಮಯವಿದೆ. ಅವರು ಫಿಟ್ ಆಗಿರುವವರೆಗೆ, ಅವರು ಏನು ಮಾಡಬಲ್ಲರೋ ಅದಕ್ಕೆ ಪರ್ಯಾಯವೇ ಇಲ್ಲ’ಎಂದು ಅವರು ಹೇಳಿದ್ದಾರೆ.

‘ದೀರ್ಘ ವಿರಾಮದ ಬಳಿಕ ಹಾರ್ದಿಕ್ ತಂಡಕ್ಕೆ ಮರಳಿದ್ದಾರೆ. ಅವರು ತಮ್ಮ ಫಾರ್ಮ್ ಕಂಡುಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ. ಅದರಲ್ಲೂ ಬೌಲಿಂಗ್ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ. ನಾಯಕ ರೋಹಿತ್ ಅವರಿಗೆ ಸಾಕಷ್ಟು ಆಯ್ಕೆಗಳನ್ನು ಅವರು ಒದಗಿಸುತ್ತಾರೆ’ ಎಂದೂ ಅಗರ್ಕರ್ ಹೇಳಿದ್ದಾರೆ.

ಹಿಮ್ಮಡಿ ಗಾಯದಿಂದ ಚೇತರಿಸಿಕೊಂಡ ಹಾರ್ದಿಕ್ ಅವರನ್ನು ಐಪಿಎಲ್‌ನ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಆಯ್ಕೆ ಮಾಡಲಾಗಿತ್ತು. ಈ ನಿರ್ಧಾರ ಬಹಳಷ್ಟು ಟೀಕೆಗೆ ಕಾರಣವಾಗಿತ್ತು.

ಕೆ.ಎಲ್. ರಾಹುಲ್ ಅವರನ್ನು ಕೈಬಿಟ್ಟ ಬಗ್ಗೆಯೂ ಉತ್ತರಿಸಿದ ಅಗರ್ಕರ್, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ವಿಕೆಟ್ ಕೀಪರ್‌ಗಾಗಿ ಹುಡುಕಾಟದಲ್ಲಿ ತೊಡಗಿದ್ದೆವು. ಹಾಗಾಗಿ, ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಲಾಯಿತು. ರಾಹುಲ್ ಅಗ್ರ ಕ್ರಮಾಂಕದ ಬ್ಯಾಟರ್ ಎಂದು ಅಗರ್ಕರ್ ಹೇಳಿದ್ದಾರೆ.

ಭಾರತ ತಂಡದ 15ರ ಬಳಗದಲ್ಲಿ ಪ್ರತಿಭಾನ್ವಿತ ಆಟಗಾರ ರಿಂಕು ಸಿಂಗ್ ಅವರನ್ನು ಕೈಬಿಟ್ಟಿದ್ದು ಕಠಿಣ ನಿರ್ಧಾರವಾಗಿತ್ತು ಎಂದೂ ಅಗರ್ಕರ್ ಹೇಳಿದ್ದಾರೆ.

‘ರಿಂಕು ಅವರನ್ನು ಕೈಬಿಡುವ ವಿಷಯಕ್ಕೆ ಸಂಬಂಧಿಸಿ ಗಹನವಾದ ಚರ್ಚೆಯಾಯಿತು. ಶುಭಮನ್ ಗಿಲ್ ಅವರದ್ದೂ ಸಹ. ರೋಹಿತ್ ಅವರಿಗೆ ಹೆಚ್ಚಿನ ಆಯ್ಕೆ ನೀಡಲು ಕೆಲವು ಸ್ಪಿನ್ನರ್‌ಗಳಿಗೆ ಅವಕಾಶ ನೀಡಲಾಯಿತು. ಅವಕಾಶವಂಚಿತರಾಗಿದ್ದು ರಿಂಕು ಅವರ ತಪ್ಪಲ್ಲ.‌‌ ನಮಗೆ ಹೆಚ್ಚುವರಿ ಬೌಲರ್‌ ಅಗತ್ಯವಿತ್ತು. ತಂಡಕ್ಕೆ 15 ಆಟಗಾರರನ್ನಷ್ಟೇ ಆಯ್ಕೆ ಮಾಡಲು ಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT