ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ರಾಜಸ್ಥಾನ ವಿರುದ್ಧ 1 ರನ್‌ನಿಂದ ಗೆದ್ದ ಸನ್‌ರೈಸರ್ಸ್

ಬೌಲರ್‌ಗಳ ಬಿಗಿ ದಾಳಿ l ಟ್ರಾವಿಸ್‌, ನಿತೇಶ್‌ ಮಿಂಚು l ರಾಜಸ್ಥಾನ ತಂಡಕ್ಕೆ ಎರಡನೇ ಸೋಲು
Published 2 ಮೇ 2024, 14:01 IST
Last Updated 2 ಮೇ 2024, 18:14 IST
ಅಕ್ಷರ ಗಾತ್ರ

ಹೈದರಾಬಾದ್‌: ಕೊನೆಯ ಎಸೆತದವರೆಗೆ ಬೆಳೆದ ರೋಚಕ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಒತ್ತಡವನ್ನು ಮೆಟ್ಟಿನಿಂತು 1 ರನ್‌ನಿಂದ ರಾಜಸ್ಥಾನ ರಾಯಲ್‌ ವಿರುದ್ಧ ಗೆಲುವು ಸಾಧಿಸಿತು.

ಗುರುವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಟ್ರಾವಿಸ್ ಹೆಡ್‌ (58; 44 ಎ, 4x6, 6x3) ಮತ್ತು ನಿತೀಶ್ ಕುಮಾರ್ ರೆಡ್ಡಿ (ಔಟಾಗದೇ 76; 42 ಎ, 4x3, 6x8) ಅವರ ಅರ್ಧ ಶತಕಗಳ ನೆರವಿನಿಂದ ಸನ್‌ರೈಸರ್ಸ್‌ ಮೂರು ವಿಕೆಟ್‌ಗೆ 201 ರನ್‌ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ತಂಡಕ್ಕೆ ಭುವನೇಶ್ವರ ಕುಮಾರ್‌ ಆರಂಭದಲ್ಲೇ ಪೆಟ್ಟು ನೀಡಿದ್ದರು. ತಂಡವು ಒಂದು ರನ್‌ ಗಳಿಸುವಷ್ಟರಲ್ಲಿ ಜೋಸ್‌ ಬಟ್ಲರ್‌ ಮತ್ತು ನಾಯಕ ಸಂಜು ಸ್ಯಾಮ್ಸನ್‌ ಅವರನ್ನು ಶೂನ್ಯಕ್ಕೆ ವಾಪಸ್‌ ಕಳುಹಿಸಿದರು. ನಂತರದಲ್ಲಿ ಯಶಸ್ವಿ ಜೈಸ್ವಾಲ್‌ (67; 40ಎ, 4x7, 6x2) ಮತ್ತು ರಿಯಾನ್‌ ಪರಾಗ್‌ (77; 49ಎ, 4x8, 6x4) ಮೂರನೇ ವಿಕೆಟ್‌ ಜೊತೆಯಾಟದಲ್ಲಿ 134 ರನ್‌ ಸೇರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಯತ್ನಿಸಿದರು.

ಅವರಿಬ್ಬರು ನಿರ್ಗಮಿಸಿದ ಬಳಿಕ ಮತ್ತೆ ಸನ್‌ರೈಸರ್ಸ್‌ ಬೌಲರ್‌ಗಳು ಮತ್ತೆ ಹಿಡಿತ ಸಾಧಿಸಿದರು. ಶಿಮ್ರಾನ್ ಹೆಟ್ಮೆಯರ್ (13) ಮತ್ತು ಧ್ರುವ್‌ ಜುರೇಲ್‌ (1) ನಿರಾಸೆ ಮೂಡಿಸಿದರು. ಆದರೆ, ರೋವ್ಮನ್ ಪೊವೆಲ್‌ (ಔಟಾ ಗದೇ 27; 15ಎ) ಕೊನೆಯಲ್ಲಿ ಹೋರಾ ಟ ನಡೆಸಿದರೂ ತಂಡಕ್ಕೆ ಗೆಲುವನ್ನು ದಕ್ಕಿಸಿಕೊಡಲು ಸಾಧ್ಯವಾಗಲಿಲ್ಲ.

ಕೊನೆಯ ಎರಡು ಓವರ್‌ಗಳಲ್ಲಿ ರಾಜಸ್ಥಾನ ತಂಡದ ಗೆಲುವಿಗೆ 20 ರನ್‌ ಅಗತ್ಯವಿತ್ತು. 19 ಓವರ್‌ನಲ್ಲಿ ಬೌಲಿಂಗ್‌ ದಾಳಿಗಿಳಿದ ಪ್ಯಾಟ್‌ ಕಮಿನ್ಸ್‌ ಮೊದಲ ಎಸೆತದಲ್ಲಿ ಧ್ರುವ್‌ ಅವರ ವಿಕೆಟ್‌ ಪಡೆಯುವುದರೊಂದಿಗೆ 6 ಎಸೆತದಲ್ಲಿ ಕೇವಲ 7 ರನ್‌ ನೀಡಿದರು. ಕೊನೆಯ ಓವರ್‌
ನಲ್ಲಿ 13 ರನ್‌ ಬೇಕಿದ್ದಾಗ, ಭುವನೇಶ್ವರ್‌ ಬಿಗಿ ದಾಳಿ ನಡೆಸಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 2 ರನ್ ಬೇಕಿದ್ದಾಗ ಸ್ಟ್ರೈಕ್‌ನಲ್ಲಿದ್ದ ರೋವ್ಮನ್, ಲೋ ಫುಲ್​ಟಾಸ್ ಬಾಲ್‌ಗೆ ಎಲ್‌ಬಿಡಬ್ಲ್ಯು ಆದರು. ಅಂಪೈರ್​ಗೆ ಮೇಲ್ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ.  ಭುವನೇಶ್ವರ್‌ ಮೂರು ವಿಕೆಟ್‌ ಪಡೆದರೆ, ಕಮಿನ್ಸ್‌ ಮತ್ತು ಟಿ. ನಟರಾಜನ್‌ ತಲಾ ಎರಡು ವಿಕೆಟ್‌ ಪಡೆದರು.

ಆಡಿರುವ 10 ಪಂದ್ಯಗಳಲ್ಲಿ ಆರರಲ್ಲಿ ಗೆಲುವು ಸಾಧಿಸಿ 12 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿದೆ. 10 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಸೋತಿರುವ ರಾಜಸ್ಥಾನ ತಂಡವು 16 ಅಂಕದೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಟ್ರಾವಿಸ್‌, ನಿತೀಶ್ ಮಿಂಚು: ಟಾಸ್‌ ಗೆದ್ದು ಬ್ಯಾಟ್‌ ಮಾಡಲು ನಿರ್ಧರಿಸಿದ ಸನ್‌ರೈಸರ್ಸ್‌ ಒಂದು ಹಂತದಲ್ಲಿ 35 ರನ್‌ಗಳಾಗುವಷ್ಟರಲ್ಲಿ 2 ವಿಕೆಟ್‌ ಕಳೆದುಕೊಂಡಿತ್ತು. ಆದರೆ, ಆರಂಭ ಆಟಗಾರ ಟ್ರಾವಿಸ್‌ ಮತ್ತು ನಿತೀಶ್ ಕುಮಾರ್ ತಂಡಕ್ಕೆ ಚೇತರಿಕೆ ನೀಡಿದರು.

ಟ್ರಾವಿಸ್ ಹೆಡ್‌ ತಮಗೆ ಆರಂಭದಲ್ಲೇ ದೊರೆತ ಜೀವದಾನದ ಲಾಭ ಪಡೆದು, ಈ ಬಾರಿಯ ಲೀಗ್‌ನಲ್ಲಿ ನಾಲ್ಕನೇ ಅರ್ಧ ಶತಕ ಗಳಿಸಿದರು. ನಿತೀಶ್ ರೆಡ್ಡಿ ಎರಡನೇ ಅರ್ಧ ಶತಕ ಗಳಿಸಿದರಲ್ಲದೇ ಹೆಡ್‌ ಜೊತೆ ಮೂರನೇ ವಿಕೆಟ್‌ಗೆ ಕೇವಲ 57 ಎಸೆತಗಳಲ್ಲಿ 96 ರನ್ ಜೊತೆಯಾಟದಲ್ಲಿ ಭಾಗಿಯಾದರು.‌ನಿತೀಶ್ ಮತ್ತು ಕ್ಲಾಸೆನ್ ಮುರಿಯದ ನಾಲ್ಕನೇ ವಿಕೆಟ್‌ಗೆ ಬರೇ 32 ಎಸೆತಗಳಲ್ಲಿ 70 ರನ್ ಸೇರಿಸಿದ್ದರಿಂದ ತಂಡ ಈ ಋತುವಿನಲ್ಲಿ ಐದನೇ ಬಾರಿ 200ರ ಗಡಿ ದಾಟಿತು.

ಯಜುವೇಂದ್ರ ಚಾಹಲ್ ಅವರಿಗೆ 300ನೇ ಐಪಿಎಲ್‌ ಪಂದ್ಯ ಸ್ಮರಣೀಯವಾಗಲಿಲ್ಲ. ಅವರು ತೀವ್ರ ದಂಡನೆಗೆ ಒಳಗಾಗಿ, ನಾಲ್ಕು ಓವರುಗಳಲ್ಲಿ 62 ರನ್‌ ತೆತ್ತರು.‌

ಅಪಾಯಕಾರಿ ಆಟಗಾರ ಅಭಿಷೇಕ್‌ ಶರ್ಮಾ ವಿಕೆಟ್‌ ಪಡೆಯುವ ಮೂಲಕ ಆವೇಶ್‌ ಖಾನ್ (39ಕ್ಕೆ2) ತಂಡಕ್ಕೆ ಮೊದಲ ಯಶಸ್ಸು ದೊರಕಿಸಿಕೊಟ್ಟರು. ಸಂದೀಪ್‌ ಶರ್ಮಾ ಮೊದಲ ಎಸೆತದಲ್ಲೇ ಅನ್ಮೋಲ್‌ಪ್ರೀತ್ ಸಿಂಗ್ (5) ಅವರ ವಿಕೆಟ್‌ ಪಡೆದಾಗ ಹೈದರಾಬಾದ್ ಮೊತ್ತ 2 ವಿಕೆಟ್‌ಗೆ 35. ಇದು ಈ ಬಾರಿಯ ಐಪಿಎಲ್‌ನಲ್ಲಿ ತಂಡ ಪವರ್‌ಪ್ಲೆ ಅವಧಿಯಲ್ಲಿ ಗಳಿಸಿದ ಅತಿ ಕಡಿಮೆ ಮೊತ್ತ.

ವೇಗಿಗಳು ಕಡಿವಾಣ ಹಾಕಿದರೂ ಸ್ಪಿನ್ನರ್‌ಗಳಾದ ಚಾಹಲ್ ಮತ್ತು ಅಶ್ವಿನ್‌ (ವಿಕೆಟ್‌ ಇಲ್ಲದೇ 36) ಅವರು ರನ್‌ ವೇಗ ತಡೆಯಲು ವಿಫಲರಾದರು. ಮಧ್ಯಮ ಹಂತದ ಓವರುಗಳು ಸನ್‌ರೈಸರ್ಸ್‌ ಚೇತರಿಕೆಗೂ ನೆರವಾದವು.

15ನೇ ಓವರ್‌ನಲ್ಲಿ ಹೆಡ್‌, ಆವೇಶ್‌ ಖಾನ್‌ಗೆ ಬೌಲ್ಡ್‌ ಆಗಿ ನಿರ್ಗಮಿಸಿದಾಗ ತಂಡ 131 ರನ್ ಗಳಿಸಿತ್ತು. ಬಳಿಕ ನಿತೀಶ್‌ 30 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದರು. ಕ್ರೀಸಿಗಿಳಿದ ಕ್ಲಾಸೆನ್‌ ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿ ಮೂರು ಬೌಂಡರಿ, ಮೂರು ಸಿಕ್ಸರ್‌ಗಳನ್ನು ಬಾರಿಸಿದರು.

ಸಂಕ್ಷಿಪ್ತ ಸ್ಕೋರು: ಸನ್‌ರೈಸರ್ಸ್ ಹೈದರಾಬಾದ್‌: 20 ಓವರುಗಳಲ್ಲಿ 3 ವಿಕೆಟ್‌ಗೆ 201 (ಟ್ರಾವಿಸ್‌ ಹೆಡ್‌ 58, ನಿತೀಶ್ ಕುಮಾರ್ ರೆಡ್ಡಿ ಔಟಾಗದೇ 76, ಹೆನ್ರಿಚ್‌ ಕ್ಲಾಸೆನ್ ಔಟಾಗದೇ 42; ಆವೇಶ್ ಖಾನ್ 39ಕ್ಕೆ2, ಸಂದೀಪ್ ಶರ್ಮಾ 31ಕ್ಕೆ1) ವಿರುದ್ಧ ರಾಜಸ್ಥಾನ್ ರಾಯಲ್ಸ್‌. ರಾಜಸ್ಥಾನ ರಾಯಲ್ಸ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 200 (ಯಶಸ್ವಿ ಜೈಸ್ವಾಲ್‌ 67, ರಿಯಾನ್‌ ಪರಾಗ್‌ 77, ರೋವ್ಮನ್ ಪೊವೆಲ್ 27; ಭುನವೇಶ್ವರ್‌ ಕುಮಾರ್‌ 41ಕ್ಕೆ 3, ಪ್ಯಾಟ್‌ ಕಮಿನ್ಸ್‌ 34ಕ್ಕೆ 2, ಟಿ. ನಟರಾಜನ್‌  35ಕ್ಕೆ 2)

ಪಂದ್ಯದ ಆಟಗಾರ: ಭುನನೇಶ್ವರ ಕುಮಾರ್‌, ಫಲಿತಾಂಶ: ಸನ್‌ರೈಸರ್ಸ್‌ ಹೈದರಾಬಾದ್‌ಗೆ 1 ರನ್‌ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT