ತಿಂಗಳಿಗೆ ₹ 41.30 ಲಕ್ಷ ಉಳಿತಾಯ, ವಿಜಯಪುರ ಜಿಲ್ಲಾಡಳಿತದಿಂದ ವಿಶೇಷ ಅಭಿಯಾನ

7

ತಿಂಗಳಿಗೆ ₹ 41.30 ಲಕ್ಷ ಉಳಿತಾಯ, ವಿಜಯಪುರ ಜಿಲ್ಲಾಡಳಿತದಿಂದ ವಿಶೇಷ ಅಭಿಯಾನ

Published:
Updated:

ವಿಜಯಪುರ: ‘ಐದು ವರ್ಷದ ಅವಧಿಯಲ್ಲಿ ಮೃತಪಟ್ಟವರ ಮರಣ ನೋಂದಣಿ ರಿಜಿಸ್ಟರ್‌ ಆಧರಿಸಿ ಜಿಲ್ಲಾಡಳಿತ ನಡೆಸಿದ ವಿಶೇಷ ಅಭಿಯಾನ ಯಶಸ್ವಿಯಾಗಿದ್ದು; ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ತಿಂಗಳಿಗೆ ₹ 41.30 ಲಕ್ಷ ಉಳಿತಾಯವಾಗಲಿದೆ’ ಎಂದು ಜಿಲ್ಲಾಧಿಕಾರಿ ಸಂಜಯ ಬಿ.ಶೆಟ್ಟೆಣ್ಣವರ ತಿಳಿಸಿದರು.

‘ಆ. 7ರಿಂದ ಸೆ.24ರವರೆಗೆ ಈ ವಿಶೇಷ ಅಭಿಯಾನ ನಡೆಸಲಾಗಿತ್ತು. ಜಿಲ್ಲೆಯ 684 ಗ್ರಾಮಗಳಲ್ಲೂ 219 ಗ್ರಾಮ ಸೇವಕರನ್ನು ಈ ಅಭಿಯಾನಕ್ಕಾಗಿ ಬಳಸಿಕೊಳ್ಳಲಾಗಿತ್ತು. ಈ ಸಂದರ್ಭ 78853 ಮಂದಿ ಮರಣ ಹೊಂದಿರುವುದು ದಾಖಲಾಗಿದೆ. ಇವರ ಹೆಸರಿನಲ್ಲಿ ಆಯಾ ಕುಟುಂಬದ ಕೆಲವರು ಸರ್ಕಾರಿ ಸೌಲಭ್ಯ ಪಡೆಯುವುದನ್ನು ಮುಂದುವರೆಸುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ’ ಎಂದು ಸೋಮವಾರ ಸಂಜೆ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಮೃತಪಟ್ಟ 993 ಮಂದಿ ಹೆಸರಲ್ಲಿ ವೃದ್ಧಾಪ್ಯ ವೇತನ ಮಾಸಿಕ ₹ 5.95 ಲಕ್ಷ, 401 ಅಂಗವಿಕಲರ ಹೆಸರಿನಲ್ಲಿ ₹ 2.40 ಲಕ್ಷ, 692 ವಿಧವೆಯರ ಹೆಸರಿನಲ್ಲಿ ₹ 4.15 ಲಕ್ಷ ವಿಧವಾ ವೇತನ, 2670 ಜನರ ಹೆಸರಿನಲ್ಲಿ ₹ 16 ಲಕ್ಷ ಸಂಧ್ಯಾ ಸುರಕ್ಷಾ ವೇತನ ಪಡೆಯುತ್ತಿದ್ದುದನ್ನು ಪತ್ತೆ ಹಚ್ಚಲಾಗಿದೆ.

ಮೃತಪಟ್ಟರೂ ಪಡಿತರ ಚೀಟಿಗಳಲ್ಲಿದ್ದ 9600 ಜನರ ಹೆಸರುಗಳನ್ನು ಕಡಿತಗೊಳಿಸಿದ್ದು, ಇದರಿಂದ ₹ 12.77 ಲಕ್ಷ ಉಳಿತಾಯವಾಗುತ್ತಿದೆ. ಒಟ್ಟು ₹ 41.30 ಲಕ್ಷ ಮೊತ್ತ ಪ್ರತಿ ತಿಂಗಳು ಸರ್ಕಾರದ ಬೊಕ್ಕಸಕ್ಕೆ ಉಳಿತಾಯವಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಬೆಳೆ ಸಮೀಕ್ಷೆಗೆ ಸ್ಥಳೀಯರು

‘ಜಿಲ್ಲೆಯ 651 ಗ್ರಾಮಗಳಲ್ಲಿ ಮೊಬೈಲ್‌ ಆ್ಯಪ್‌ ಬಳಸಿ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಇದಕ್ಕೆ ಸ್ಥಳೀಯ ಯುವಕರನ್ನೇ ಬಳಸಿಕೊಳ್ಳಲಾಗುತ್ತಿದ್ದು, ಸದ್ಯ 801 ಯುವಕರು ಈ ಕೆಲಸ ನಡೆಸುತ್ತಿದ್ದಾರೆ. ಬೆಳೆ ನಷ್ಟದ ಸಮೀಕ್ಷೆಯನ್ನು ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ಜಂಟಿಯಾಗಿ ನಿರ್ವಹಿಸುತ್ತಿದೆ. ಯಾರೊಬ್ಬರಿಗೂ ರೈತರು ಶುಲ್ಕ ಪಾವತಿಸುವಂತಿಲ್ಲ. ಶುಲ್ಕ ಕೇಳಿದರೆ ಜಿಲ್ಲಾಡಳಿತದ ಗಮನಕ್ಕೆ ತನ್ನಿ’ ಎಂದು ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ರೈತ ಸಮುದಾಯಕ್ಕೆ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !