ಶನಿವಾರ, ಡಿಸೆಂಬರ್ 7, 2019
24 °C
ಬಸರಕೋಡದ ಶ್ರೀಶೈಲ ಮಲಕಾಜಪ್ಪ ಸೂಳಿಭಾವಿ ಕೊಡುಗೆ

ಭಾರತೀಯ ಸಂಸ್ಕೃತಿ ಉತ್ಸವಕ್ಕೆ 1 ಲಕ್ಷ ರೊಟ್ಟಿ..!

ಮಹಾಬಲೇಶ್ವರ ಶಿ.ಗಡೇದ Updated:

ಅಕ್ಷರ ಗಾತ್ರ : | |

Deccan Herald

ಮುದ್ದೇಬಿಹಾಳ: ದೊಡ್ಡ ಮನೆಯ ಆವರಣದೊಳಗೆ ಕಾಲಿಡುತ್ತಿದ್ದಂತೆಯೇ ಟಪ್, ಟಪ್, ಟಪಾ, ಟಪಾ ಟಪ್ ಟಪ್... ಸದ್ದು ಕಿವಿಗೆ ಬಿತ್ತು. ಕೋಣೆಯೊಂದನ್ನು ಹೊಕ್ಕಾಗ ಸಹಸ್ರ, ಸಹಸ್ರ ಸಜ್ಜೆ ರೊಟ್ಟಿ ಸಾಲೇರಿಸಿದ್ದರು... ಈ ದೃಶ್ಯ ಗೋಚರಿಸಿದ್ದು ತಾಲ್ಲೂಕಿನ ಬಸರಕೋಡದ ಶ್ರೀಶೈಲ ಮಲಕಾಜಪ್ಪ ಸೂಳಿಭಾವಿ ಅವರ ಮನೆಯಲ್ಲಿ.

ಕಗ್ಗೋಡದಲ್ಲಿ ಇದೇ 24ರಿಂದ ಎಂಟು ದಿನ ನಡೆಯಲಿರುವ ಐದನೇ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಲಿರುವ ಯಾತ್ರಿಕರಿಗೆ ತಮ್ಮದು ಅಳಿಲು ಸೇವೆ ಇರಲಿ ಎಂದು ಶ್ರೀಶೈಲ ರೊಟ್ಟಿ ತಯಾರಿಕೆಯಲ್ಲಿ ತಲ್ಲೀನರಾಗಿದ್ದಾರೆ.

ಇವರೊಬ್ಬರೇ ಉತ್ಸವಕ್ಕೆ ಒಂದು ಲಕ್ಷ ರೊಟ್ಟಿ ನೀಡುವ ಸಂಕಲ್ಪದೊಂದಿಗೆ ಅಗತ್ಯ ತಯಾರಿ ನಡೆಸಿದ್ದಾರೆ. ಇದಕ್ಕಾಗಿಯೇ ಸಮೀಪದ ಸಿದ್ದಾಪುರ ಪಿ.ಟಿ. ಗ್ರಾಮದಲ್ಲಿ 15 ಕ್ವಿಂಟಲ್ ಸಜ್ಜೆ ಖರೀದಿಸಿದ್ದಾರೆ. ಸಜ್ಜೆ ಸ್ವಲ್ಪ ದಪ್ಪ ಇದ್ದರೆ, ರೊಟ್ಟಿ ಇನ್ನೂ ರುಚಿಕರ ಆಗುತ್ತವೆ ಎಂದು ಅನುಭವಿಕರು ಹೇಳಿದ್ದರಿಂದ, ಲಿಂಗಸುಗೂರ ಪಟ್ಟಣದಿಂದ ಮತ್ತೆ 20 ಕ್ವಿಂಟಲ್ ಸಜ್ಜೆ ಖರೀಸಿದ್ದಾರೆ.

ಒಟ್ಟು 35 ಕ್ವಿಂಟಲ್ ಸಜ್ಜೆಗೆ ಖಡಕ್ ಆಗಲಿ ಹಾಗೂ ದೀರ್ಘಕಾಲ ಕೆಡದಿರಲಿ ಎಂದು 10 ಕ್ವಿಂಟಲ್ ಉತ್ತಮ ದರ್ಜೆಯ ಅಕ್ಕಿಯನ್ನು ಕೂಡಿಸಿದ್ದಾರೆ. ಕಳೆದ ನ.25ರಿಂದಲೇ ಶುರುವಾಗಿರುವ ಈ ರೊಟ್ಟಿ ಬಡಿಯುವ ಅಭಿಯಾನದಲ್ಲಿ ಆರಂಭದಲ್ಲಿ 10 ಜನ ಬರುತ್ತಿದ್ದ ಮಹಿಳೆಯರ ಸಂಖ್ಯೆ ಇದೀಗ (ಸ್ವಯಂ ಪ್ರೇರಿತರಾಗಿ ಬರುವವರು) ಇಪ್ಪತ್ತೈದಕ್ಕೆ ಏರಿದೆ.

ಮನೆಯ ಹೊರಗಡೆಯ ವಿಶಾಲವಾದ ಆವರಣದಲ್ಲಿ ಆವರಣಗೋಡೆಗೆ ಹೊಂದಿಕೊಂಡಂತೆ ಆ ಕಡೆ, ಈ ಕಡೆ ಒಲೆಗಳನ್ನು ಜೋಡಿಸಲಾಗಿದೆ. ಚಾಟಿಗೆಂದು ಒಂದು ಬದಿಯಲ್ಲಿ ದೊಡ್ಡ ತಾಡಪತ್ರಿಯ ರಕ್ಷಣೆ ಹೊದಿಸಲಾಗಿದೆ.

ದೊಡ್ಡ ಮೂರು ಮೂರು ಇಟ್ಟಂಗಿಗಳನ್ನು ತಾವೇ ಜೋಡಿಸಿಕೊಂಡು, ತಮ್ಮ ಮನೆಯಿಂದಲೇ ಹೆಂಚು ತಂದು ರೊಟ್ಟಿ ಮಾಡುತ್ತಿದ್ದಾರೆ ಮಹಿಳೆಯರು. ಒಟ್ಟು ಮೂರು ಹಂತಗಳಲ್ಲಿ ಅಂದರೇ ಮುಂಜಾನೆ 7ರಿಂದ 11 ಗಂಟೆ, 11ರಿಂದ ಮಧ್ಯಾಹ್ನ 3ಗಂಟೆ ತನಕ, ಮೂರರಿಂದ ಸಂಜೆ ಏಳರ ತನಕ ಬಂದು ರೊಟ್ಟಿ ಬಡಿಯುವ ಕೆಲಸ ನಿರಂತರವಾಗಿ ಇಲ್ಲಿ ನಡೆದಿದೆ.

ಮೂರು ಗಂಟೆಯ ಸಮಯದಲ್ಲಿ ಒಬ್ಬ ಮಹಿಳೆ ಸರಾಸರಿ 250 ರೊಟ್ಟಿ ಬಡಿಯುತ್ತಿದ್ದಾರೆ. ಇನ್ನೂ ಒಂದು ವಾರ ನಿರಂತರವಾಗಿ ರೊಟ್ಟಿ ತಯಾರಿಸಿ, ನಂತರ ಅವುಗಳನ್ನು ಐದು ಟ್ರ್ಯಾಕ್ಟರ್‌ಗಳಲ್ಲಿ ಕಗ್ಗೋಡಿಗೆ ಮುಟ್ಟಿಸುವ ಉದ್ದೇಶ ಇದೆ.

ರೊಟ್ಟಿ ಮಾಡುವ ಕೆಲಸದಲ್ಲಿ ಶ್ರೀಶೈಲ ಅವರ ಪತ್ನಿ ಮಾಲತಿ, ಮಗ ಆನಂದ, ಸಹೋದರರಾದ ಸಂತೋಷ ಬಸವಂತರಾಯ ಸೂಳಿಭಾವಿ, ಬಾಬು ಮಲಕಾಜಪ್ಪ ಸೂಳಿಭಾವಿ, ಅನಿಲ ಸೂಳಿಭಾವಿ, ಓಂ ಉಮೇಶ ಕೋರೆ, ರಿದ್ದಿ ಕೋರೆ ಹಾಗೂ ಭಾರತೀಯ ಸಂಸ್ಕೃತಿ ಉತ್ಸವದ ಉಸ್ತುವಾರಿ ಹೊತ್ತಿರುವ ಶ್ರೀಶೈಲ ದೊಡಮನಿ, ಸಿದ್ದು ಹೆಬ್ಬಾಳ, ಅರವಿಂದ ಕೊಪ್ಪ ಸೇರಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು