ಶನಿವಾರ, ಏಪ್ರಿಲ್ 10, 2021
32 °C

ಹಣ ಗುಳುಂ: ತನಿಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಪಶುಸಂಗೋಪನಾ ಸಚಿವ ರೇವುನಾಯಕ ಬೆಳಮಗಿ ಅವರ ಸ್ವಗ್ರಾಮ ಬೆಳಮಗಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳಲ್ಲಿ ಅಪಾರ ಪ್ರಮಾಣದ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಫಲಾನುಭವಿಗಳಿಗೆ ಗೊತ್ತಿಲ್ಲದಂತೆ ಅವರ ಖಾತೆ ತೆರೆದು ಹಣ ನುಂಗಿ ಹಾಕಲಾಗಿದೆ.“ಈ ಅವ್ಯವಹಾರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಸುತಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಯಾನಂದ ಜಾಧವ, ಅಂಚೆ ಕಚೇರಿಯ ಲೋಕೇಶ ಹಾಗೂ ಕಿರಿಯ ಎಂಜಿನಿಯರ್‌ಗಳು ಭಾಗಿಯಾಗಿದ್ದಾರೆ. ಹಗರಣ ಬಯಲಾಗುತ್ತಿದ್ದಂತೆ ನಾಪತ್ತೆಯಾದ ಈ ಆರೋಪಿಗಳು ಈಚೆಗಷ್ಟೇ ಜಾಮೀನು ಪಡೆದಿದ್ದಾರೆ.ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮ ಜರುಗಿಸಬೇಕು” ಎಂದು ಗ್ರಾಮ ಪಂಚಾಯಿತಿ ಸದಸ್ಯ ಧನರಾಜ ಮರೂಡ, ಗ್ರಾಮದ ಯುವಕರಾದ ಕುಪೇಂದ್ರ ತೌಡೆ ಹಾಗೂ ಕಲ್ಯಾಣರಾವ ತೊಳಜಿ ಒತ್ತಾಯಿಸಿದ್ದಾರೆ.

ಮಾಜಿ ಸಚಿವ ಎಸ್.ಕೆ.ಕಾಂತಾ ಅವರ ನೇತೃತ್ವದಲ್ಲಿ ಭಾನುವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿದ ಗ್ರಾಮಸ್ಥರು, ಹಗರಣಕ್ಕೆ ಸಂಬಂಧಿಸಿದ ಹಲವು ದಾಖಲೆಗಳನ್ನು ಪ್ರದರ್ಶಿಸಿದರು. ಬಡ ಜನರಿಗೆ ಅನುಕೂಲವಾಗಲು ರೂಪಿಸಿದ ಉದ್ಯೋಗ ಖಾತರಿ ಯೋಜನೆಯ 2011-12ನೇ ಸಾಲಿನ ಕಾಮಗಾರಿಗಳನ್ನು ಯಂತ್ರ ಬಳಸಿ ಮಾಡಲಾಗಿದೆ. ಅದೂ ಬಹುತೇಕ ಕಾಮಗಾರಿಗಳು ಉಳ್ಳವರ ಪಾಲಾಗಿವೆ. ಇದರ ಜತೆಗೆ ಇನ್ನಷ್ಟು ಅವ್ಯವಹಾರ ನಡೆದಿದ್ದು, ಎಲ್ಲ ದಾಖಲೆಗಳೂ ತಮ್ಮಲ್ಲಿವೆ ಎಂದು ಅವರು ವಿವರಿಸಿದರು.ಸತ್ತವರು, ಮಕ್ಕಳ ಹೆಸರಲ್ಲಿ!: ಧನರಾಜ್‌ಗೆ ಗೊತ್ತಿಲ್ಲದಂತೆ ಅವರ ಕುಟುಂಬದ ಆರು ಜನರ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲಾಗಿದೆ. ನಂತರ ಕಾಮಗಾರಿ ಹೆಸರಿನಲ್ಲಿ ವೇತನ ಜಮಾ ಮಾಡಿ, ತೆಗೆದುಕೊಳ್ಳಲಾಗಿದೆ. ಇದೇ ಮಾದರಿಯಲ್ಲಿ ಕುಪೇಂದ್ರ ಹಾಗೂ ಕಲ್ಯಾಣರಾವ ಅವರ ಕುಟುಂಬದವರ ಹೆಸರಿನಲ್ಲೂ ಖಾತೆ ತೆರೆದು ಹಣ ಪಡೆಯಲಾಗಿದೆ. ನಕಲಿ ಜಾಬ್‌ಕಾರ್ಡ್‌ಗಳನ್ನು ಸೃಷ್ಟಿಸಿ, ಕಾಮಗಾರಿ ನಡೆಸದೇ ಬೋಗಸ್ ಬಿಲ್ ಮೂಲಕ ಲಕ್ಷಾಂತರ ಹಣ ಎತ್ತಿ ಹಾಕಲಾಗಿದೆ.ಗ್ರಾಮ ಪಂಚಾಯಿತಿ ಅಧ್ಯಕ್ಷರ ಹೊಲದಲ್ಲಿ ಕೆಲಸ ಮಾಡಿದ ಫಲಾನುಭವಿಗಳ ಸಾಲಿನಲ್ಲಿ ಮೃತಪಟ್ಟವರೂ ಸೇರಿದ್ದಾರೆ! ಚಂದ್ರಾಮಪ್ಪ ಪಾಟೀಲ ಹಾಗೂ ಶರಣಪ್ಪ ಢೋಲೆ ಎಂಬುವವರು ಈಗಾಗಲೇ ಸಾವನ್ನಪ್ಪಿದ್ದು, ಅವರ ಹೆಸರಿನಲ್ಲಿ ಖಾತೆ ತೆರೆದು, ಹಣ ಪಡೆಯಲಾಗಿದೆ. 7ನೇ ತರಗತಿ ಓದುತ್ತಿರುವ ಚನ್ನಬಸವ ದೇವರಾಜ ಹಾಗೂ 2ನೇ ತರಗತಿಯಲ್ಲಿರುವ ಶಿವಕುಮಾರ ಮಲ್ಲಣ್ಣ ಎಂಬ ಮಕ್ಕಳ ಹೆಸರಲ್ಲಿ ಖಾತೆ ತೆರೆಯಲಾಗಿದೆ. ಇನ್ನು, ದುಬೈನಲ್ಲಿ ಉದ್ಯೋಗದಲ್ಲಿರುವ ಬಸವರಾಜ ಸಿಂಗೆ ಹಾಗೂ ಪರಶುರಾಮ ಬಸನಾಥ ಎಂಬುವವರ ಹೆಸರಲ್ಲೂ ಹಣ `ಗುಳುಂ~ ಮಾಡಲಾಗಿದೆ ಎಂದು ದಾಖಲೆಗಳ ಸಮೇತ ವಿವರಿಸಿದರು.“ಈ ಅವ್ಯವಹಾರದ ಬಗ್ಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಕಾರ್ಮಿಕರ ಬದಲಿಗೆ ಯಂತ್ರ ಬಳಸಿ ಕೆಲಸ ಮಾಡಿರುವುದು ಕಾಯ್ದೆ ಉಲ್ಲಂಘನೆ ಎಂದು ಅದು ಸ್ಪಷ್ಟವಾಗಿ ತಿಳಿಸಿದೆ. ಈ ಬಗ್ಗೆ ಈಗಾಗಲೇ ನರೋಣ ಪೊಲೀಸ್ ಠಾಣೆಯಲ್ಲಿ ಧನರಾಜ್ ಅವರು ದೂರು ದಾಖಲಿಸಿದ್ದು, ಇನ್ನಷ್ಟು ದೂರುಗಳನ್ನು ದಾಖಲಿಸಲಾಗುವುದು” ಎಂದು ಎಸ್.ಕೆ.ಕಾಂತಾ ಹೇಳಿದರು.ನಾಪತ್ತೆ- ಜಾಮೀನು: ಅವ್ಯವಹಾರದ ವಿರುದ್ಧ ದನಿ ಎತ್ತಿರುವ ಗ್ರಾಮದ ಯುವಕರಿಗೆ ಬೆದರಿಕೆ ಹಾಗೂ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿವೆ. ಭ್ರಷ್ಟಾಚಾರ ಬಯಲಾಗುತ್ತಿದ್ದಂತೆ ಗ್ರಾಪಂ ಅಧ್ಯಕ್ಷ, ಪಿಡಿಒ, ಅಂಚೆಪೇದೆ ನಾಪತ್ತೆಯಾಗಿದ್ದು, ಈಚೆಗಷ್ಟೇ ಜಾಮೀನು ಪಡೆದು ವಾಪಸಾಗಿದ್ದಾರೆ. ಇಷ್ಟೆಲ್ಲ ನಡೆದರೂ ಜಿಲ್ಲಾಡಳಿತ ಕಣ್ಮುಚ್ಚಿ ಕೂತಿದೆ. ಕೃಷಿ ಕಾರ್ಮಿಕರಿಗೆ ವರದಾನವಾಗಬೇಕಿದ್ದ ಈ ಯೋಜನೆಯಲ್ಲಿ ಅಪಾರ ಭ್ರಷ್ಟಾಚಾರ ನಡೆದಿದ್ದು, ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕಾಂತಾ ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.