ಶುಕ್ರವಾರ, ಏಪ್ರಿಲ್ 23, 2021
23 °C

ಜಿಲ್ಲೆಗೆ ರೂ 22 ಕೋಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:ಬರದಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಜನ- ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಟ ಮಾಡುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.ಪಶುಸಂಗೋಪನಾ ಸಚಿವ ರೇವುನಾಯಕ ಬೆಳಮಗಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಇಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬರಗಾಲದ ಬಗ್ಗೆ ಹೆಚ್ಚು ಚರ್ಚೆ   ನಡೆಯಿತು.ಕುಡಿಯುವ ನೀರಿನ ತಾಪತ್ರಯ ಕುರಿತು ಪ್ರಸ್ತಾಪಿಸಿದ ಪಾಟೀಲ ಅವರಿಗೆ ಇನ್ನೊಬ್ಬ ಶಾಸಕ ಖಮರುಲ್ ಇಸ್ಲಾಂ ಬೆಂಬಲ ಸೂಚಿಸಿದರು. ಕೃಷ್ಣಾ ಹಾಗೂ ಭೀಮಾ ನದಿಯಲ್ಲಿ ನೀರಿಲ್ಲ; ಇದರಿಂದ ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಹಾರಾಷ್ಟ್ರದಿಂದ ನದಿಗಳಿಗೆ ನೀರು ಹರಿಸುವುದಾಗಿ ಸರ್ಕಾರ ಹೇಳಿತ್ತು. ಅದು ಸಾಧ್ಯವಾಗಿಲ್ಲ ಏಕೆ? ಎಂದು ಪ್ರಶ್ನಿಸಿದ ಅಲ್ಲಮಪ್ರಭು ಪಾಟೀಲ, ನೀರಿಲ್ಲದೇ ಹಳ್ಳಿಗಳಲ್ಲಿ ಹಾಹಾಕಾರ ಉಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಅಭಾವ ಪರಿಸ್ಥಿತಿಯನ್ನು ಗಮನಿಸಿ ಜಿಲ್ಲೆಗೆ ಒಟ್ಟು 22 ಕೋಟಿ ರೂಪಾಯಿಗಳನ್ನು ನೈಸರ್ಗಿಕ ವಿಕೋಪ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಲಾಗಿದೆ. ಆಯಾ ಕ್ಷೇತ್ರಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಲಾದ ಕಾರ್ಯಪಡೆಯ ನಿರ್ಣಯದಂತೆ ನೀರು ಪೂರೈಕೆ ಕಾಮಗಾರಿ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ತಿಳಿಸಿದರು.ಬರ ಪರಿಸ್ಥಿತಿಯನ್ನು ನಿಭಾಯಿಸಲು 1,094 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಒಟ್ಟು 933 ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಇವುಗಳಿಗೆ ರೂ. 8.5 ಕೋಟಿ ಬಿಡುಗಡೆಯಾಗಿದೆ. ಈಗಾಗಲೇ 490 ಕೊಳವೆಬಾವಿ ಕೊರೆದಿದ್ದು, ಈ ಪೈಕಿ 33ರಲ್ಲಿ ಸಮರ್ಪಕ ಪ್ರಮಾಣದ ನೀರು ಸಿಕ್ಕಿಲ್ಲ.

 

ಉಳಿದಂತೆ 270 ಕೊಳವೆಬಾವಿಗಳಿಗೆ ಕೈ ಪಂಪ್, 78ಕ್ಕೆ ಸಿಂಗ್‌ಲ್ ಫೇಸ್ ಮೋಟರ್, 108 ಕೊಳವೆಬಾವಿಗಳಿಗೆ ಪೈಪ್‌ಲೈನ್ ಮತ್ತು ಮೋಟರ್ ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ನೀರಿನ ಕೊರತೆ ತೀವ್ರವಾಗಿರುವ ಆಳಂದ ತಾಲ್ಲೂಕಿನ ಮೂರು ಗ್ರಾಮಗಳು ಮತ್ತು ಜೇವರ್ಗಿ ತಾಲ್ಲೂಕಿನ ಎರಡು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದೆ ಎಂದೂ ತಿಳಿಸಿದರು.`ಬಿತ್ತನೆ ಬೀಜ ಚಿಂತೆ ಬೇಡ~:

ಮುಂಗಾರು ಹಂಗಾಮಿನ ಕುರಿತು ಜಂಟಿ ಕೃಷಿ ನಿರ್ದೇಶಕ ಐ.ಇ.ಬಳತ್ಕರ್, ಈವರೆಗೆ ಆಗಬೇಕಿದ್ದ 352 ಮಿ.ಮೀ. ಮಳೆ ಪೈಕಿ 305.3 ಮಿ.ಮೀ.ನಷ್ಟು ಮಳೆಯಾಗಿದೆ. ಜೇವರ್ಗಿ, ಅಫಜಲಪುರ ಹಾಗೂ ಆಳಂದ ತಾಲ್ಲೂಕುಗಳಲ್ಲಿ ಕಡಿಮೆ ಮಳೆಯಾಗಿದ್ದು, ಇದಕ್ಕಾಗಿ ಬಿತ್ತನೆ ಪ್ರಮಾಣವೂ ಕಡಿಮೆಯಾಗಿದೆ. ಒಟ್ಟು 5.71 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಿದ್ದು, ಈವರೆಗೆ 4.63 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆಯಾಗಿದೆ ಎಂದು ಹೇಳಿದರು.ಕಳೆದ ತಿಂಗಳ ಅಂತ್ಯದವರೆಗೆ 14,950 ಕ್ವಿಂಟಲ್‌ನಷ್ಟು ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದ್ದು, ಈವರೆಗೆ 3,352 ಕ್ವಿಂಟಲ್ ಮಾರಾಟವಾಗಿದೆ. ರೈತರಿಗೆ ಅಗತ್ಯವಾಗಿ ಬೇಕಾದ ರಸಗೊಬ್ಬರವೂ ಸಾಕಷ್ಟಿದೆ ಎಂದರು.ಪಡಿತರ ಚೀಟಿಗಾಗಿ ಒಟ್ಟು 1.72 ಲಕ್ಷ ಅರ್ಜಿಗಳು ಬಂದಿವೆ. ಗ್ರಾಮೀಣ ಪ್ರದೇಶದ ಅರ್ಜಿಗಳನ್ನು ಪರಿಶೀಲನೆಗಾಗಿ ಗ್ರಾಮ ಪಂಚಾಯಿತಿಗಳಿಗೆ ಸಲ್ಲಿಸಲಾಗಿದೆ. 220ರ ಪೈಕಿ 174 ಗ್ರಾಪಂಗಳು ಅರ್ಜಿ ಪರಿಶೀಲಿಸಿ ವರದಿ ನೀಡಿವೆ. ಪಿಡಿಒ ಹಾಗೂ ಕಂದಾಯ ನಿರೀಕ್ಷಕರು ಅರ್ಜಿಗಳನ್ನು ಶೀಘ್ರ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದೀಪಕನಾಗ್ ಪುಣ್ಯಶೆಟ್ಟಿ, ಉಪಾಧ್ಯಕ್ಷ ನಿತಿನ್ ಗುತ್ತೇದಾರ, ಸಿಇಒ ಎಂ.ಜೆ.ವಿಜಯಕುಮಾರ್, ಎಚ್‌ಕೆಡಿಬಿ ಅಧ್ಯಕ್ಷ ಅಮರನಾಥ ಪಾಟೀಲ, ಶಾಸಕರಾದ ಶಶೀಲ್ ಜಿ.ನಮೋಶಿ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.