ವಿಜ್ಞಾನ ಕೇಂದ್ರ:ಕೀಟ ನಿರ್ವಹಣೆ- ರೈತರಿಗೆ ಸಲಹೆ

6

ವಿಜ್ಞಾನ ಕೇಂದ್ರ:ಕೀಟ ನಿರ್ವಹಣೆ- ರೈತರಿಗೆ ಸಲಹೆ

Published:
Updated:

ಗುಲ್ಬರ್ಗ: ಜಿಲ್ಲೆಯಲ್ಲಿ ತೊಗರಿ ಈಗಾಗಲೆ ಹೂವಾಡುವ ಹಂತಕ್ಕೆ ಬಂದಿದೆ. ಎಲ್ಲ ತಾಲ್ಲೂಕುಗಳಲ್ಲಿ ಭಾಗಶಃ ಹಸಿರು ಕೀಟ ಬಾಧೆ ಕಂಡುಬಂದಿದೆ. ರೈತರು ಈ ಕೀಟ ನಿಯಂತ್ರಣಕ್ಕಾಗಿ ಔಷಧ ಸಿಂಪರಣೆ ಮಾಡುವ ಮೊದಲು ಹಸಿರು ಕೀಟದ ಸಮೀಕ್ಷೆ ಮಾಡಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕರು ತಿಳಿಸಿದ್ದಾರೆ.



ಮೊದಲಿಗೆ ಎಕರೆಗೆ ಎರಡು ಮೋಹಕ ಬಲೆಗಳನ್ನು ನೆಡಬೇಕು. ಪ್ರತಿ ಬಲೆಯಲ್ಲಿ 4-5 ಪತಂಗಗಳು ಬಿದ್ದಾಗ ಅಥವಾ ಪ್ರತಿ ಗಿಡಕ್ಕೆ ಎರಡು ತತ್ತಿ ಅಥವಾ ಒಂದು ಕೀಟ ಕಂಡುಬಂದಾಗ ಹತೋಟಿ ಕ್ರಮ ತೆಗೆದುಕೊಳ್ಳಲು ಮುನ್ಸೂಚನೆ ನೀಡಲಾಗಿದೆ.



ತೊಗರಿಯು ಹೂವಾಡುವ ಹಂತದಲ್ಲಿದ್ದಾಗ ತತ್ತಿನಾಶಕಗಳಾದ ಪ್ರೊಫೆನೋಫಾಸ್ 50 ಇ.ಸಿ.-2.0 ಮಿ.ಲೀ. ಅಥವಾ ಮೆಥೋಮಿಲ್ 40 ಎಸ್.ಪಿ.-0.6 ಗ್ರಾಂ ಅಥವಾ ಥಯೋಡಿಕಾರ್ಬ್ 75 ಎಸ್.ಸಿ.-0.6 ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.



ತೊಗರಿ ಹೊಲದಲ್ಲಿ ಅಲ್ಲಲ್ಲಿ ಮರದ ಕವಲು ಇಡುವುದರಿಂದ ಪಕ್ಷಿಗಳು (ಹಸಿರು ಪಕ್ಷಿ, ನೀಲಿಜಾಯಿ ಪಕ್ಷಿ ಮತ್ತು ಕಪ್ಪು ಕಾಜಾಣ ಇತರೆ) ಅದರ ಮೇಲೆ ಕುಳಿತು ಹಸಿರು ಕೀಟ ಭಕ್ಷಿಸುತ್ತವೆ. ಹಸಿರು ಕೀಟ ತಿನ್ನುವ ನೈಸರ್ಗಿಕ ಶತ್ರುಗಳಾದ ರಿಡುವಿಡ್ ತಿಗಣೆ, ಶಿವನ ಕುದುರೆ, ಮಳ್ಳಿ ಹುಳು, ಪುಟಾಣಿದುಂಬಿ, ರಾಬರ್‌ನೊಣ, ಡ್ರಾಗನ್ ನೊಣ ಮತ್ತು ಜೇಡರನೊಣ ಸಂಖ್ಯೆ ಹೆಚ್ಚಾಗುವಂತೆ ನೋಡಿಕೊಂಡರೆ ಹಸಿರು ಕೀಟದ ಹಾವಳಿ ಕಡಿಮೆಯಾಗುತ್ತದೆ.



ಎರಡನೇ ಸಿಂಪರಣೆಯನ್ನು ತೊಗರಿಯ ಸಂಪೂರ್ಣವಾಗಿ ಹೂವಾಡುವ ಹಂತದಲ್ಲಿದ್ದಾಗ ಶೇ 5ರ ಬೇವಿನ ಬೀಜದ ಕಷಾಯ ಅಥವಾ ಬೇವಿನ ಮೂಲದ ಅಜಾರಡೆಕ್ಟಿನ್ 1500 ಪಿಪಿಎಮ್ 2 ಮಿ.ಲೀ. ಅಥವಾ ಮೆಣಸಿನಕಾಯಿ ಮತ್ತು ಬಳ್ಳೊಳ್ಳಿ ಕಷಾಯ (ಶೇ 0.5 ಹಾಗೂ ಶೇ 0.2) ಅಥವಾ ರಿನಾಕ್ಸಿಪಿಯರ್ 18.5 ಎಸ್.ಸಿ.-0.15 ಮಿ.ಲೀ.ಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ತೊಗರಿಗೆ ಬಲೆಕಟ್ಟುವ ಕೀಟ, ಜೊಂಡಿ ಕೀಟ ಕಂಡುಬಂದಿದ್ದು ಇದರ ಹತೋಟಿಗೆ ಮೇಲೆ ತಿಳಿಸಿದ ಯಾವುದಾದರು ತತ್ತಿನಾಶಕಗಳ ಜೊತೆಗೆ ಡಿ.ಡಿ.ವಿ.ಪಿ. 76 ಇ.ಸಿ.-0.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.



ಹತ್ತಿ ಕೆಂಪಾಗುವಿಕೆ ನಿಯಂತ್ರಣಕ್ಕಾಗಿ ಮ್ಯಾಗ್ನೇಷಿಯಂ ಸಲ್ಫೇಟ್ 10 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಎಲೆಗೆ ಸಿಂಪಡಿಸಬೇಕು. ಜೋಳ ಬಿತ್ತಲು ರೈತರು ಎಂ-35-1 ಮತ್ತು ಡಿಎಸ್‌ವಿ-4 ತಳಿಗಳನ್ನು ಬಿತ್ತಬೇಕು.

ಜೋಳ ಬಿತ್ತನೆಗೆ ಮುನ್ನ ಪ್ರತಿ ಎಕರೆಗೆ ಅಜೋಸ್ಟೇರಿಲಂ (200 ಗ್ರಾಂ) ಮತ್ತು ಗಂಧಕ (12 ಗ್ರಾಂ) ಬಳಸಿ ಬೀಜಕ್ಕೆ ಉಪಚರಿಸಿ ಬಿತ್ತಬೇಕು.ಹೆಚ್ಚಿನ ಮಾಹಿತಿಗಾಗಿ ರೈತರು ಗುಲ್ಬರ್ಗ ಕೃಷಿ ವಿಜ್ಞಾನ ಕೇಂದ್ರ (ಫೋನ್ 08472-274596, 94806 96315) ಸಂಪರ್ಕಿಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry