ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | KKR vs PBKS: ಪಂಜಾಬ್‌ಗೆ ಗೆಲುವಿನ ಅನಿವಾರ್ಯತೆ

Published 26 ಏಪ್ರಿಲ್ 2024, 0:14 IST
Last Updated 26 ಏಪ್ರಿಲ್ 2024, 0:14 IST
ಅಕ್ಷರ ಗಾತ್ರ

ಕೋಲ್ಕತ್ತ: ಈ ಋತುವಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಡಲು ವಿಫಲವಾಗಿರುವ ಪಂಜಾಬ್ ಕಿಂಗ್ಸ್ ತಂಡ ಶುಕ್ರವಾರ ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ಪ್ರಬಲ ಕೋಲ್ಕತ್ತ ನೈಟ್‌ ರೈಡರ್ಸ್ ತಂಡವನ್ನು ಎದುರಿಸಲಿದೆ. ದುಬಾರಿ ಮೊತ್ತಕ್ಕೆ ಬಿಡ್‌ ಆಗಿರುವ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲೂ  ದುಬಾರಿ ಆಗಿದ್ದು, ಸುಧಾರಿತ ಪ್ರದರ್ಶನಕ್ಕೆ ಸರ್ವಪ್ರಯತ್ನ ನಡೆಸಲಿದ್ದಾರೆ.

ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕೆಕೆಆರ್ 10 ಪಾಯಿಂಟ್ಸ್‌ ಹೊಂದಿದೆ. ಅಗ್ರ ಬ್ಯಾಟರ್‌ಗಳ ಅಮೋಘ ಪ್ರದರ್ಶನದಿಂದಷ್ಟೇ ಅದು ಹೆಚ್ಚಿನ ಪಂದ್ಯಗಳನ್ನು ಗೆದ್ದುಕೊಂಡಿದೆ.

ಪಂಜಾಬ್‌ ಕಿಂಗ್ಸ್‌ ಆರಂಭದಿಂದಲೇ ಅಸ್ಥಿರ ಪ್ರದರ್ಶನ ನೀಡುತ್ತಿದ್ದು, ಪ್ಲೇ ಆಫ್‌ ಪೈಪೋಟಿಯಿಂದ ಹೊರಬೀಳುವ ಅಪಾಯದಲ್ಲಿದೆ. ಈ ತಂಡದಲ್ಲಿ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಮಾತ್ರ ಉತ್ತಮ ನಿರ್ವಹಣೆಯಿಂದ ಗಮನ ಸೆಳೆದಿದ್ದಾರೆ.

ಸುನಿಲ್ ನಾರಾಯಣ್ (286 ರ‌ನ್‌) ಫಿಲ್‌ ಸಾಲ್ಟ್‌ (249 ರನ್‌) ಉತ್ತಮ ಸ್ಟ್ರೈಕ್‌ ರೇಟ್‌ನಲ್ಲಿ ರನ್ ಗಳಿಸುತ್ತಿದ್ದಾರೆ. ಆಂಡ್ರೆ ರಸೆಲ್‌ (155) ಮತ್ತು ನಾಯಕ ಶ್ರೇಯಸ್‌ ಅಯ್ಯರ್ (190) ಮಧ್ಯಮ ಕ್ರಮಾಂಕಕ್ಕೆ ಬಲ ನೀಡಿದ್ದಾರೆ. ರಿಂಕು ಸಿಂಗ್‌ ಮಾತ್ರ ವಿಫಲರಾಗಿದ್ದಾರೆ. ಆದರೆ ಬ್ಯಾಟರ್‌ಗಳ ಕೊಡುಗೆಯಿಂದ ಶಾರೂಕ್‌ ಖಾನ್ ಒಡೆತನದ ತಂಡ ನಾಲ್ಕು ಬಾರಿ 200ಕ್ಕಿಂತ ಹೆಚ್ಚಿನ ಮೊತ್ತ ದಾಖಲಿಸಿದೆ. ವೆಂಕಟೇಶ್ ಅಯ್ಯರ್‌ ಮಾತ್ರ ಲಯಕಂಡುಕೊಂಡಿಲ್ಲ. 

ಆದರೆ ಬೌಲಿಂಗ್ ಪಡೆಯ ಬಗ್ಗೆ ಇದೇ ಮಾತು ಹೇಳುವಹಾಗಿಲ್ಲ. ಸುನಿಲ್ ನಾರಾಯಣ್  ಮಾತ್ರ ರನ್‌ ಬಿಚ್ಚುತ್ತಿಲ್ಲ. ಇಕಾನಮಿ ದರ 7.10 ಇದೆ. ಆದರೆ ಟ್ರಿನಿಡಾಡಿನ ಬೌಲರ್‌ಗೆ ಈ ಹಿಂದಿನ ಪಂದ್ಯದಲ್ಲಿ ರಜತ್ ಪಾಟೀದಾರ್ ಎರಡು ಸಿಕ್ಸರ್ ಎತ್ತಿದ್ದರು. ಇದು ಪಂಜಾಬಿನ ಯಶಸ್ವಿ ಆಟಗಾರರಾದ ಅಶುತೋಷ್‌, ಶಶಾಂಕ್ ಅವರಿಗೆ ಧೈರ್ಯ ನೀಡುವ ಅಂಶವಾಗಬಹುದು.

ಆದರೆ ಸ್ಟಾರ್ಕ್ ಅವರು ನಿರೀಕ್ಷಿತ ಮಟ್ಟ ಮುಟ್ಟಿಲ್ಲ. ವೇಗಕ್ಕೆ ಹೆಚ್ಚು ಆದ್ಯತೆ ನೀಡಿದಂತೆ ಕಾಣುತ್ತಿದೆ. ಅವರು ಆರು ವಿಕೆಟ್‌ ಅಷ್ಟೇ ಪಡೆದಿದ್ದಾರೆ. ಅವರ ಇಕಾನಮಿ ದರ (11.48) ತಂಡದ ಬೌಲರ್‌ಗಳ ಪೈಕಿ ಅತ್ಯಧಿಕವಾಗಿದೆ. ₹25.75 ಕೋಟಿಗೆ ಬಿಡ್‌ ಆದ ಸ್ಟಾರ್ಕ್‌ ಅವರಿಗೆ ಹೋಲಿಸಿದರೆ ಹರ್ಷಿತ್‌ ರಾಣಾ, ವೈಭವ್ ಆರೋರಾ ಸುಧಾರಿತ ಪ್ರದರ್ಶನ ನೀಡಿದ್ದಾರೆ.

ಗೆಲುವಿನ ಹಳಿಗೆ ಮರಳಲು ಪಂಜಾಬ್‌ ಕಿಂಗ್ಸ್ ತಂಡವು, ಎದುರಾಳಿಗಳ ಬೌಲಿಂಗ್ ದೌರ್ಬಲ್ಯ ಬಳಸಿಕೊಳ್ಳಬೇಕಾಗಿದೆ. ಕೆಕೆಆರ್‌ಗೆ ಅಗ್ರ ಆಟಗಾರರು ಕೊಡುಗೆ ನೀಡಿದರೆ, ಪಂಜಾಬ್‌ಗೆ ಕೆಳಕ್ರಮಾಂಕದ ಆಟಗಾರರಿಂದಲೇ ಹೆಚ್ಚು ರನ್‌ ಬರುತ್ತಿದೆ. ಅದರ ಪ್ರಮುಖ ಬ್ಯಾಟರ್‌ಗಳಾದ ಪ್ರಭಸಿಮ್ರನ್ ಸಿಂಗ್‌, ಲಿವಿಂಗ್‌ಸ್ಟೋನ್‌, ರೀಲಿ ರೊಸೊ ಮತ್ತು ಜಾನಿ ಬೇಸ್ಟೊ ರನ್‌ ಬರ ಎದುರಿಸುತ್ತಿದ್ದಾರೆ. ಅಶುತೋಷ್‌ ಮತ್ತು ಶಶಾಂಕ್ ಅವರು ಒತ್ತಡದ ನಡುವೆಯೂ ಆಮೋಘ ಪ್ರದರ್ಶನ ನೀಡಿದ್ದರಿಂದ ತಂಡ ಹೋರಾಟ ನೀಡಲು ಸಾಧ್ಯವಾಗಿದೆ.

ಮೂರು ಪಂದ್ಯಗಳನ್ನು ಕಳೆದುಕೊಂಡಿರುವ ಶಿಖರ್ ಧವನ್ ಬುಧವಾರ ತಂಡದ ಅಭ್ಯಾಸದ ವೇಳೆ  ಕಾಣಿಸಿದ್ದು, ಅವರು ಆಡುವ ಬಳಗಕ್ಕೆ ಸೇರ್ಪಡೆಯಾದರೆ ತಂಡದ ಮನೋಸ್ಥೈರ್ಯ ವೃದ್ಧಿಯಾಗಬಹುದು.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್‌ ನೆಟ್‌ವರ್ಕ್ ಮತ್ತು ಜಿಯೊ ಸಿನಿಮಾ ಆ್ಯಪ್‌.

ಮುಖಾಮುಖಿ:

ಆಡಿದ ಪಂದ್ಯಗಳು: 32

ಕೆಕೆಆರ್‌ ಗೆಲುವು: 21

ಪಂಜಾಬ್ ಗೆಲುವು 11

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT