ಬುಧವಾರ, ಏಪ್ರಿಲ್ 21, 2021
27 °C

ಬಂದ್ ವಿಫಲ: ಸಹಜ ಜನಜೀವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗ ಮಹಾನಗರ ಪಾಲಿಕೆ ಆಯುಕ್ತರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ವೀರ ಕನ್ನಡಿಗರ ಸೇನೆ ಕರೆ ನೀಡಿದ್ದ ಬಂದ್‌ಗೆ ಸೋಮವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಜನಜೀವನ ಎಂದಿನಂತೆ ಸಹಜವಾಗಿದ್ದು, ಬಂದ್ ವಿಫಲವಾಯಿತು.ನಗರದ ಕೆಲವು ಚಿತ್ರಮಂದಿರ, ಪೆಟ್ರೋಲ್ ಪಂಪ್ ಹಾಗೂ ಕೆಲವು ಅಂಗಡಿಗಳನ್ನು ಬಲವಂತದಲ್ಲಿ ಬಂದ್ ಮಾಡಲಾಯಿತು. ಅಲ್ಲದೇ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಗರ ಸಂಚಾರ (ನೃಪತುಂಗ) ಬಸ್‌ಗಳನ್ನು ನಿಲ್ಲಿಸಲಾಗಿತ್ತು. ಇದರಿಂದ ಜನತೆಗೆ ಅನಾನುಕೂಲವಾಯಿತು. ಬಂದ್‌ಗೆ ಕರೆ ನೀಡುವ ಸಂಘಟನೆಗಳ ವಿರುದ್ಧ ಹಿಡಿಶಾಪ ಹಾಕಿದ ಜನತೆ ಆಟೋದ ಮೊರೆ ಹೋದರು.`ಪ್ರತಿಭಟನೆ, ಹೋರಾಟ, ಬಂದ್ ಹೆಸರಿನಲ್ಲಿ ಗುಲ್ಬರ್ಗ ಜನತೆಗೆ ಹೋರಾಟಗಾರರು ಕಿರುಕುಳ ನೀಡಬಾರದು. ಯಾವುದೇ ಆರೋಪಗಳು ಇದ್ದರೆ ಲೋಕಾಯುಕ್ತ, ನ್ಯಾಯಾಲಯ ಅಥವಾ ದೂರು ದಾಖಲಿಸುವ ಮೂಲಕ ಸಮಸ್ಯೆ ಬಗೆಹರಿಸಲಿ~ ಎಂದು ತೊಂದರೆ ಅನುಭವಿಸಿದ ನಾಗರಿಕ ರಾಜು ಮತ್ತಿತರರು ಪ್ರತಿಕ್ರಿಯಿಸಿದರು.ಸಾಬೀತು ಮಾಡಿ: ಮಹಾನಗರ ಪಾಲಿಕೆ ಆಯುಕ್ತರು ಮಾಡಿರುವ ಆರೋಪವನ್ನು ಎರಡು ದಿನಗಳ ಒಳಗೆ ಸಾಬೀತು ಪಡಿಸದಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ವೀರ ಕನ್ನಡಿಗರ ಸೇನೆ ಅಧ್ಯಕ್ಷ ಅಮೃತ ಪಾಟೀಲ ಸಿರನೂರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಕೆಲವು ಸ್ಥಾಪಿತ ಹಿತಾಸಕ್ತಿಗಳ ಜೊತೆ ಕೈ ಜೋಡಿಸಿರುವ ವೀರ ಕನ್ನಡ ಸೇನೆಯ ಅಮೃತ್ ಪಾಟೀಲ್ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಗುಲ್ಬರ್ಗ ಮಹಾನಗರ ಪಾಲಿಕೆ ಆಯುಕ್ತ ಸಿ. ನಾಗಯ್ಯ ಆರೋಪಿಸಿದ್ದರು.`ಈ ಕುರಿತು ಪತ್ರಿಕಾ ಹೇಳಿಕೆ ನೀಡುವ ಬದಲು ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕಿತ್ತು. ಅಲ್ಲದೇ ನಮ್ಮ ಜೊತೆ ಕೆಲವು ಪಾಲಿಕೆ ಸದಸ್ಯರು ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆ ಸದಸ್ಯರ ಹೆಸರನ್ನು ಬಹಿರಂಗ ಪಡಿಸಲಿ~ ಎಂದು ಆಗ್ರಹಿಸಿದರು.`ಗುಲ್ಬರ್ಗ ಉತ್ತರ ಮತ್ತು ದಕ್ಷಿಣದ ಶಾಸಕರು, ಮೇಯರ್, ಉಪಮೇಯರ್ ಹಾಗೂ ಪಾಲಿಕೆ ಸ್ಥಾಯಿಸಮಿತಿ ಸದಸ್ಯರು ವರ್ಗವಾಗಿದ್ದ ಆಯುಕ್ತರನ್ನು ಉಳಿಸಿಕೊಂಡಿದ್ದಾರೆ~ ಎಂದು ಆರೋಪಿಸಿದರು. ನಾಗಲಿಂಗಯ್ಯ ಮಠಪತಿ, ಸಚಿನ್ ಫರಹತಾಬಾದ್ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.