ಮಂಗಳವಾರ, ಮೇ 24, 2022
27 °C

ಅಂಗಳದಲ್ಲಿ ಹೋಳಿ ಸಡಗರ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೊಂಡಗುಂಡಿ ಬಿದ್ದ ರಸ್ತೆಯಲ್ಲೂ ಚೆಲ್ಲಿದ ವರ್ಣಗಳ ಚಿತ್ತಾರ. ಮನೆ ಹೊಸ್ತಿಲಲ್ಲಿ ರಂಗೋಲಿಯ ಚೆಲುವು. ರಂಗೇರಿದ ಜನರು. ಕೆಂಪಾದ ಮೊಗ. ಮಕ್ಕಳ ಕಲರವ. ಪೂಜೆ-ಪುನಸ್ಕಾರ. ಶುಭಾಶಯಗಳ ವಿನಿಮಯ. ಎಲ್ಲೆಡೆ ಬಣ್ಣಗಳ ಸಿಂಚನ. ರಾತ್ರಿಯಾಗುತ್ತಲೇ ಹಾಲು ಬೆಳದಿಂಗಳು ಚೆಲ್ಲಿದ ದೊಡ್ಡ ಚಂದಮಾಮ. ಗುಲ್ಬರ್ಗದಲ್ಲಿ ಶನಿವಾರ-ಭಾನುವಾರ ‘ಸೂಪರ್ ಹೋಳಿ’.ವಸಂತ ಆಗಮನದ ಫಾಲ್ಗುಣ ಪೂರ್ಣಿಮೆಯಂದು ಹೋಳಿಯ ಬಣ್ಣ. ಈ ಬಾರಿ ಒಂದು ಲಕ್ಷ ಕಿ.ಮೀ.ಯಷ್ಟು ಚಂದ್ರ ಭೂಮಿಗೆ ಸಮೀಪ ಬಂದ ಕಾರಣ ‘ಪೂರ್ಣಿಮೆಯ ಪೂರ್ಣ ಚಂದ್ರನ ಬೆಳಂದಿಗಳಲ್ಲಿ ‘ಹೋಲಿಕ’ ದಹನ. ಚಂದ್ರ ದರ್ಶನವೂ ಒಂದು ಆಹ್ಲಾದ. ಪುರಾಣ: ಹೋಲಿಕ ಹಿರಣ್ಯಕಶುಪಿವಿನ ಸಹೋದರಿ. ಹಿರಣ್ಯಕಶುಪಿವಿನ ಪುತ್ರ ಪ್ರಹ್ಲಾದನನ್ನು ಬೂದಿ ಮಾಡುವ ಸಂಚಿನಲ್ಲಿ ದಹಿಸಿ ಹೋದಾಕೆ. ವಿಷ್ಣು ಭಕ್ತ ಪ್ರಹ್ಲಾದ ಅಗ್ನಿಯನ್ನು ಗೆದ್ದು ಬಂದ ಸಂಭ್ರಮ. ದುಷ್ಟ ಶಕ್ತಿ ಅಳಿಸಿ ಶಿಷ್ಟ ವಿಚಾರಗಳು ವಿಜೃಂಭಿಸಿದ ಕ್ಷಣ. ಕೆಟ್ಟ ಕಾಮನೆಗಳ ದಹನ. ಎರಡು ದಿನ ನಡೆಯುವ ಹೋಳಿ ಹುಣ್ಣಿಮೆ ಮತ್ತು ದುಲಂಡಿಯು ಜನರ ಆಚರಣೆಯ ಜೊತೆ ಆಕರ್ಷಣೆ, ಸಂತಸದ ಹಬ್ಬವಾಗಿದೆ. ಈ ಸಂದರ್ಭ ಗುಲಾಬಿ, ಕೆಂಪು, ನೀಲಿ, ಹಸಿರು, ಹಳದಿ ಬಣ್ಣಗಳ ಓಕುಳಿ.ಬಣ್ಣ ಬಣ್ಣಗಳ ಸಿಂಚನದೊಂದಿಗೆ ಸಂಭ್ರಮದ ಹೋಳಿಯನ್ನು ಶನಿವಾರ ಜಿಲ್ಲೆಯಾದ್ಯಂತ ಆಚರಿಸಲಾಯಿತು. ಜನತೆ ಬಣ್ಣಗಳನ್ನು ಎರಚಿ ಸಡಗರ ಪಟ್ಟರು. ಅಕ್ಕ-ಪಕ್ಕದವರು, ಗೆಳೆಯರು, ಗೆಳತಿಯರು, ಸಂಬಂಧಿಕರು... ಹೀಗೆ ಎಲ್ಲರನ್ನು ವರ್ಣಮಯ ಮಾಡಿದರು. ಹಲವರು ಪರಿಚಯ ಸಿಗದಷ್ಟು ಬಣ್ಣದ ವೇಷವಾದರು.ನಗರದ ಬಡಾವಣೆಗಳಲ್ಲಿ ಕಾಮದೇವನನ್ನು ಪ್ರತಿಷ್ಠಾಪನೆ ಮಾಡಿ ರಾತ್ರಿ ದಹಿಸಲಾಯಿತು. ಬ್ರಹ್ಮಪುರ, ಗಾಜೀಪುರ, ಸುಪರ್‌ಮಾರ್ಕೆಟ್, ಮುಕ್ತಾಂಪುರ ಪ್ರದೇಶಗಳಲ್ಲಿ ಕಾಮನಿಗೆ ಮಾಡಿದ್ದ ವಿವಿಧ ರೀತಿಯ ಅಲಂಕಾರ ಗಮನ ಸೆಳೆಯಿತು.ನಗರದ ಮಾರುಕಟ್ಟೆಯಲ್ಲಿ ಬಣ್ಣ, ಸಿಹಿತಿಂಡಿಗಳ ಮಾರಾ ಟದ ಭರಾಟೆ ಜೋರಾಗಿ ನಡೆದಿತ್ತು. ಸಕ್ಕರೆ ಹಾರದ ಮರಾಟ ವಿಶೇಷ ಆಕರ್ಷಣೆಯಾಗಿತ್ತು.  ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.