ಗುರುವಾರ , ಏಪ್ರಿಲ್ 22, 2021
22 °C

ಕಾಗದರಹಿತ ವಹಿವಾಟು; ಶೀಘ್ರ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಗದರಹಿತ ವಹಿವಾಟು; ಶೀಘ್ರ ಸೇವೆ

ಗುಲ್ಬರ್ಗ: ಬ್ಯಾಂಕ್ ಶಾಖೆಗಳಲ್ಲಿ ಕಾಗದ ಬಳಕೆಯನ್ನು ತೆಗೆದುಹಾಕುವ ಉದ್ದೇಶದಿಂದ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ನಗರದ ಒಂಬತ್ತು ಶಾಖೆಗಳಲ್ಲಿ `ಗ್ರೀನ್ ಚಾನೆಲ್ ಕೌಂಟರ್~ (ಜಿಸಿಸಿ) ಆರಂಭಿಸಿದೆ.“ಕಾಗದ ಬಳಕೆ ಮಾಡದೇ ಇರುವುದರಿಂದ ಇದೊಂದು ಪರಿಸರಪೂರಕ ವಹಿವಾಟು. ಮತ್ತೊಂದು ಪ್ರಮುಖ ಪ್ರಯೋಜನವೆಂದರೆ, ಗ್ರಾಹಕರು ಶೀಘ್ರವಾಗಿ ತಮ್ಮ ಕೆಲಸ ಪೂರೈಸಿಕೊಳ್ಳಲು ಇದು ನೆರವಾಗಲಿದೆ” ಎಂದು ಡೆಪ್ಯುಟಿ ಜನರಲ್ ಮ್ಯಾನೇಜರ್ ಎಲ್.ವಿ.ರವೀಂದ್ರಕುಮಾರ್ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಗ್ರಾಹಕರ ಬಳಿಯಿರುವ ಎಟಿಎಂ ಕಾರ್ಡ್ ಇಲ್ಲೂ ಬಳಕೆ ಮಾಡಬಹುದು. ಕೌಂಟರ್‌ನಲ್ಲಿರುವ ಕಿರುಯಂತ್ರದಲ್ಲಿ ಕಾರ್ಡ್ ಹಾಕಿ- ಎಳೆದು (ಸ್ವೈಪ್) ಅನೇಕ ಬಗೆಯ ವಹಿವಾಟು ನಡೆಸಬಹುದು. ಇದರಿಂದ ಸಾಕಷ್ಟು ಸಮಯ ಉಳಿತಾಯವಾಗಲಿದೆ ಎಂದು ವಿವರಿಸಿದರು. ನಗರದ ಸೂಪರ್ ಮಾರ್ಕೆಟ್ ಜಿಲ್ಲೆಯ 40 ಶಾಖೆಗಳಲ್ಲಿ ಮಂಗಳವಾರದಿಂದಲೇ ಈ ಸೌಲಭ್ಯ ಜಾರಿಗೆ ಬಂದಿದೆ. ಕರ್ನಾಟಕದ ಒಟ್ಟು 96 ಶಾಖೆಗಳ ಗ್ರಾಹಕರು `ಜಿಸಿಸಿ~ ಕೌಂಟರ್ ಸೇವೆಯನ್ನು ಪಡೆಯಬಹುದು ಎಂದು ಹೇಳಿದರು.“ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನ ಹಂತಹಂತವಾಗಿ ಬಂದಂತೆಲ್ಲ ಗ್ರಾಹಕ- ಬ್ಯಾಂಕ್ ಸಿಬ್ಬಂದಿ ಮಧ್ಯೆ ಮಾನವೀಯ ಸಂಬಂಧವೇ ಕಣ್ಮರೆಯಾಗುತ್ತಿದೆ. ಈಗ ಜಿಸಿಸಿ ಕೌಂಟರ್ ಸ್ಥಾಪನೆಯಿಂದ ಮತ್ತೆ ಈ ಬಾಂಧವ್ಯ ಮರುಸ್ಥಾಪಿಸಬಹುದು” ಎಂದು ರವೀಂದ್ರಕುಮಾರ್ ಅಭಿಪ್ರಾಯಪಟ್ಟರು.ಎಟಿಎಂ ಕಾರ್ಡ್ ಸಾಕು

`ಗ್ರೀನ್ ಬ್ಯಾಂಕಿಂಗ್~ ಎಂದೇ ಕರೆಯಲಾಗುವ `ಜಿಸಿಸಿ~ಯಲ್ಲಿ ಹಣ ತುಂಬುವ ಹಾಗೂ ವರ್ಗಾಯಿಸುವ ಸೌಲಭ್ಯ ಸಿಗಲಿದೆ. 40,000 ರೂಪಾಯಿವರೆಗೆ ನಗದು ಜಮಾ, ತೆಗೆಯುವುದು ಹಾಗೂ ಇತರ ಎಸ್‌ಬಿಎಚ್ ಶಾಖೆಗಳಿಗೆ ಹಣ ವರ್ಗಾಯಿಸುವ ಸೇವೆ ಲಭ್ಯವಾಗಲಿದೆ. ಪಾಸ್‌ಬುಕ್ ಬೇಕಿಲ್ಲ; ಖಾತೆಸಂಖ್ಯೆ ನೆನಪಿಡಬೇಕಿಲ್ಲ; ನಗದು ಜಮಾ- ಹಣ ತೆಗೆಯುವುದು ಹಾಗೂ ವರ್ಗಾವಣೆಯ ಫಾರ್ಮ್ ಭರ್ತಿ ಮಾಡುವ ಗೋಜೂ ಇಲ್ಲ. ಗ್ರಾಹಕರಲ್ಲಿನ ಎಟಿಎಂ ಕಾರ್ಡ್ ಇವೆಲ್ಲವನ್ನೂ ನಿರ್ವಹಿಸಲಿದೆ. ವಹಿವಾಟು ನಡೆದ ಬಳಿಕ ಗ್ರಾಹಕರಿಗೆ ವಹಿವಾಟಿನ ವಿವರಗಳುಳ್ಳ ಚಿಕ್ಕ ರಸೀದಿ ಕೊಡಲಾಗುತ್ತದೆ.ಎಸ್‌ಬಿಎಚ್-1500

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಗ್ರಾಹಕ ಸೇವೆಗೆ ಖ್ಯಾತಿ ಪಡೆದ ಎಸ್‌ಬಿಎಚ್ ತನ್ನ 1500ನೇ ಖಾತೆಯನ್ನು ಇದೇ 8ರಂದು ಹೈದರಾಬಾದಿನಲ್ಲಿ ಆರಂಭಿಸಲಿದೆ. ಈ ಸಂಭ್ರಮದ ಹಿನ್ನೆಲೆಯಲ್ಲಿ `ಎಸ್‌ಬಿಎಚ್-1500~ ಎಂಬ ಹೊಸ ಠೇವಣಿ ಯೋಜನೆಯನ್ನು ರಿಚಯಿಸಲಿದ್ದು, ಇದು 22ರವರೆಗೆ ಮಾತ್ರ ಲಭ್ಯವಾಗಲಿದೆ. ಕನಿಷ್ಠ ರೂ. 15,000ದಿಂದ ಗರಿಷ್ಠ 1 ಕೋಟಿ ರೂಪಾಯಿವರೆಗೆ ಇಡುವ ಠೇವಣಿಗೆ ಶೇ. 9.5ರಷ್ಟು ಬಡ್ಡಿ ಹಾಗೂ ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇ. 0.5ರಷ್ಟು ಬಡ್ಡಿ ನೀಡಲಾಗುವುದು ಎಂದು ರವೀಂದ್ರಕುಮಾರ್ ವಿವರಿಸಿದರು.ಗೃಹ, ಚಿನ್ನಾಭರಣ ಹಾಗೂ ವಾಹನ ಖರೀದಿಗೆ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಸಾಲ ನೀಡುವ `ಸಾಲಮೇಳ~ಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಗ್ರಾಹಕರಿಗೆ ಇನ್ನಷ್ಟು ಸೇವೆ ನೀಡಲು ರಾಜ್ಯದಲ್ಲಿ 14 ಶಾಖೆಗಳನ್ನು ನೂತನವಾಗಿ ಆರಂಭಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಪೂರಕವಾಗಿ ಸಿಬ್ಬಂದಿ ನೇಮಕಾತಿ ಕೂಡ ನಡೆಯುತ್ತಿದೆ ಎಂದು ಹೇಳಿದರು.ಎಜಿಎಂ ಹೇಮಂತಕುಮಾರ್ ಮಿಶ್ರಾ, ಮುಖ್ಯ ಮ್ಯಾನೇಜರ್ ಶಂಕರ್, ಶರಣಪ್ಪ, ವ್ಯವಸ್ಥಾಪಕ ಅನಿರುದ್ಧ ಅಗ್ನಿಹೋತ್ರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.