ಭಾನುವಾರ, ಜೂಲೈ 12, 2020
29 °C

ಗುಣಮಟ್ಟದ ಕಾಮಗಾರಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ಪಟ್ಟಣದ ಕೆಳಗೇರಾದ ಹನುಮಾನ ದೇವರ ಮಂದಿರದ ಹಿಂದುಗಡೆಯಿಂದ ಶಹಾಬಾದ ಕೂಡು ರಸ್ತೆಯವರೆಗೆ ಕೆ.ಎಂ.ಆರ್.ಪಿ. ಯೋಜನೆಯಲ್ಲಿ ನಿರ್ಮಾಣ ಮಾಡುತ್ತಿರುವ ಸಿಮೆಂಟ್ ರಸ್ತೆ ಕಾಮಗಾರಿ ಗುಣಮಟ್ಟದಿಂದರಬೇಕು.  ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿ ಸಹಿಸುವುದಿಲ್ಲ ಎಂದು ಶಾಸಕ ವಾಲ್ಮೀಕಿ ನಾಯಕ್ ತಿಳಿಸಿದರು.ಬೆಂಗಳೂರಿನಲ್ಲಿರುವ ಶಾಸಕ ವಾಲ್ಮೀಕಿ ನಾಯಕ್ ಗುರುವಾರ ದೂರವಾಣಿ ಮೂಲಕ ಸಿಮೆಂಟ್ ರಸ್ತೆ ಕಾಮಗಾರಿ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿ, ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಬಳಸುತ್ತಿರುವ ಸಿಮೆಂಟ್ ಉತ್ತಮ ಗುಣಮಟ್ಟದ್ದಾಗಿರಬೇಕು. ಅದರ ಬಗ್ಗೆ ಸ್ವಲ್ಪವೂ ಅನುಮಾನ ಬಂದರೆ ಸಿಮೆಂಟಿನ ಗುಣಮಟ್ಟ ಮತ್ತು ಗ್ರೇಡ್ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿ ಪರೀಕ್ಷಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಎಚ್ಚರಿಸಿದ್ದಾರೆ.ನಿರ್ಮಾಣ ಮಾಡುತ್ತಿರುವ ರಸ್ತೆ ಕಾಮಗಾರಿ ಕಳಪೆಯಾಗಿ ನಿರ್ಮಿಸಲಾಗುತ್ತಿದೆ. ಕಳಪೆ ಸಿಮೆಂಟ್ ಬಳಕೆ ಮಾಡಲಾಗುತ್ತಿದೆ. ಬುಧವಾರ ಕಾಮಗಾರಿ ಮಾಡುವ ಸ್ಥಳಕ್ಕೆ ಹೋಗಿ ನೋಡಿದಾಗ ಬಳಸುತ್ತಿರುವ ಸಿಮೆಂಟ್ ಚೀಲದ ಮೇಲೆ ಐ.ಎಸ್.ಐ ಮಾರ್ಕ ಇರದಿರುವುದು ಕಂಡು ಬಂದಿದೆ. ಇದರ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗೆ ಕೇಳಿದರೆ ಹಾರಿಕೆ ಉತ್ತರ ನೀಡಿ, ಕಾಮಗಾರಿ ಮಾಡಿಸುತ್ತಿರುವ ಗುತ್ತಿಗೆದಾರರ ಪರವಾಗಿ ವಕಾಲತ್ತು ಮಾಡುತ್ತಿದ್ದಾರೆ ಎಂದು ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಾಜಿ ಬುರಬುರೆ ಆರೋಪಿಸಿದ್ದಾರೆ.ಕಾಮಗಾರಿಗೆ ಬಳಸುತ್ತಿರುವ ಸಿಮೆಂಟ್ ಬಗ್ಗೆ ಮೊದಲು ಪರೀಕ್ಷೆ ಮಾಡಿರಲಿಲ್ಲ. ಇದರ ಬಗ್ಗೆ ತಕರಾರು ಬಂದಾಗ ಸಿಮೆಂಟ್ ಪರೀಕ್ಷಿಸಿದಾಗ 54 ಗ್ರೇಡ್ ಇರುವ ಬಗ್ಗೆ ವರದಿ ಬಂದಿದೆ. ಉತ್ತಮ ಗುಣಮಟ್ಟದ ಸಿಮೆಂಟ್ ಬಳಸಲಾಗುತ್ತಿದೆ ಎಂದು ಕಾಮಗಾರಿ ಮಾಡಿಸುವ ಸ್ಥಳದಲ್ಲಿದ್ದ ಸಹಾಯಕ ಅಭಿಯಂತರ ರಾಜಕುಮಾರ ತಿಳಿಸಿದರು.ಸಿಮೆಂಟ್ ರಸ್ತೆ ಕಾಮಗಾರಿಗೆ ಬಳಸುತ್ತಿರುವ ಸಿಮೆಂಟ್ ಹೇಗಿದೆ ಎನ್ನುವುದು ಮುಖ್ಯವಲ್ಲ. ಗುಣಮಟ್ಟದ ಕಾಮಗಾರಿ ಮಾಡಿಸಿದರೆ ಸಾಕು. ಅದನ್ನು ನೋಡಲೆಂದೇ ಸಂಬಂಧಿಸಿದ ಇಲಾಖೆಯ ಎಂಜಿನೀಯರ್ ಇರುತ್ತಾರೆ. ಒಂದು ವೇಳೆ ಮೂರನೇ ಪಾರ್ಟಿ ಕಾಮಗಾರಿ ಗುಣಮಟ್ಟ ಪರೀಕ್ಷೆ ಮಾಡುವಾಗ ಕಳಪೆ ಮಟ್ಟದ್ದು ಎಂದು ಸಾಭೀತಾದರೆ ಮಾಡಿರುವ ಕಾಮಗಾರಿಯ ಹಣ ಕೊಡುವುದು ತಡೆಹಿಡಿಯಲಾಗುತ್ತದೆ. ಆಗ ಗುತ್ತಿಗೆದಾರ ಮತ್ತೇ ಉತ್ತಮ ರಸ್ತೆ ನಿರ್ಮಾಣ ಮಾಡಲೇಬೇಕಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಹಣಮಂತಗೌಡ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.