ಯಾದಗಿರಿ: ಕಾಂಗ್ರೆಸ್ ಕಚೇರಿ ರಣಾಂಗಣ

7

ಯಾದಗಿರಿ: ಕಾಂಗ್ರೆಸ್ ಕಚೇರಿ ರಣಾಂಗಣ

Published:
Updated:

ಯಾದಗಿರಿ: ಚುನಾವಣೆಯ ಸಿದ್ಧತೆಗಳು ನಡೆಯುತ್ತಿರುವಂತೆಯೇ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಸ್ಫೋಟಗೊಳ್ಳುತ್ತಿದ್ದು, ಸೋಮವಾರ ಇಲ್ಲಿಯ ಜಿಲ್ಲಾ ಕಾಂಗ್ರೆಸ್ ಕಚೇರಿ ಇಂತಹ ಸನ್ನಿವೇಶಕ್ಕೆ ಸಾಕ್ಷಿ ಆಯಿತು. ಪಕ್ಷದ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಕೆಪಿಸಿಸಿ ವೀಕ್ಷಕರು ಆಗಮಿಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿ ಅಕ್ಷರಶಃ ರಣಾಂಗಣವಾಗಿ ಪರಿಣಮಿಸಿತ್ತು.ಒಂದೆಡೆ ವಿವಿಧ ಮುಖಂಡರ ಬೆಂಬಲಿಗರ ಜೈಕಾರಗಳು ಕಿವಿಗಡಚಿಕ್ಕುತ್ತಿದ್ದರೆ, ಇನ್ನೊಂದೆಡೆ ಯುವ ಕಾಂಗ್ರೆಸ್ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ವೀಕ್ಷಕರಿಗೆ ಕೆಲಕಾಲ ಏನಾಗುತ್ತಿದೆ ಎಂಬುದೇ ತಿಳಿಯದಂತಹ ವಾತಾವರಣ ನಿರ್ಮಾಣವಾಗಿತ್ತು.ವೇಳಾಪಟ್ಟಿಯ ಪ್ರಕಾರ ಕೆಪಿಸಿಸಿ ವೀಕ್ಷಕರು ಬೆಳಿಗ್ಗೆ 11 ಗಂಟೆಯಿಂದ ವಿಧಾನಸಭಾ ಕ್ಷೇತ್ರವಾರು ಪಕ್ಷದ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ಕೆಲವರು ಮಧ್ಯಾಹ್ನ 3 ಗಂಟೆಯಿಂದ ಅಭಿಪ್ರಾಯ ಸಂಗ್ರಹಣೆ ಆರಂಭವಾಗಲಿದೆ ಎಂಬ ತಪ್ಪು ಮಾಹಿತಿ ನೀಡಿದ್ದರು. ಅಲ್ಲದೇ ಕೆಪಿಸಿಸಿ ವೀಕ್ಷಕರ ಆಗಮನ ಸುದ್ದಿಯನ್ನು ಬಹುತೇಕ ವಿಭಾಗಗಳ ಕಾರ್ಯಕರ್ತರಿಗೆ ತಿಳಿಸಿರಲಿಲ್ಲ. ಇದರಿಂದ ತೀವ್ರ ಆಕ್ರೋಶಗೊಂಡ ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ಅನಪೂರ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಕಾರ್ಯಕರ್ತರು, ಕಚೇರಿಯಲ್ಲಿ ಕಾಯಿಪಲ್ಲೆ ಸುರಿದು, ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಂತರ ಯುವ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಕಳುಹಿಸುವಷ್ಟರಲ್ಲಿಯೇ ಪ್ರಮುಖ ಆಕಾಂಕ್ಷಿಗಳ ಬೆಂಬಲಿಗರು ಜೈಕಾರದೊಂದಿಗೆ ಘೋಷಣೆ ಕೂಗತೊಡಗಿದರು.ಎಷ್ಟು ಬಾರಿ ಮಾಲಕರಡ್ಡಿ: ಬೆಳಿಗ್ಗೆ 11 ಗಂಟೆಗೆ ಯಾದಗಿರಿ ಮತಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಗಾಗಿ ಅರ್ಜಿ ಸ್ವೀಕಾರ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಆಗಮಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಚೆನ್ನಾರಡ್ಡಿ ಪಾಟೀಲ ತುನ್ನೂರ, ಶಾಸಕ ಡಾ.ಎ.ಬಿ. ಮಾಲಕರಡ್ಡಿ ಹಾಗೂ ಮೌಲಾಲಿ ಅನಪೂರ ಬೆಂಬಲಿಗರು ತಮ್ಮ ನಾಯಕರ ಪರ ಜೈಕಾರ ಕೂಗತೊಡಗಿದರು.ಕಾಂಗ್ರೆಸ್ ಕಚೇರಿಯ ಒಂದು ಕೋಣೆಯಲ್ಲಿ ಕುಳಿತು ಅಭಿಪ್ರಾಯ ಸಂಗ್ರಹಣೆ ಮಾಡುತ್ತಿದ್ದ ವೀಕ್ಷಕರಿಗೆ ಏನೂ ಕೇಳಿಸದಂತಾಗಿತ್ತು. ಕೆಲ ಹೊತ್ತು ಕಚೇರಿ ಆವರಣದಲ್ಲಿ ಜೈಕಾರ ಕೂಗಿದ ಕಾರ್ಯಕರ್ತರು, ವೀಕ್ಷಕರಿದ್ದ ಕೋಣೆಗೆ ನುಗ್ಗಿ ತಮ್ಮ ನಾಯಕರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು.ಚೆನ್ನಾರೆಡ್ಡಿ ಪಾಟೀಲ ತುನ್ನೂರ ಬೆಂಬಲಿಗರು ತಮ್ಮ ನಾಯಕನಿಗೇ ಈ ಬಾರಿ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು. ಒಂದು ಹಂತದಲ್ಲಿ ಎಷ್ಟು ಬಾರಿ ಡಾ. ಮಾಲಕರಡ್ಡಿ ಅವರಿಗೇ ಟಿಕೆಟ್ ಕೊಡುತ್ತೀರಿ? ಸ್ಥಳೀಯರಾದ ಚೆನ್ನಾರಡ್ಡಿ ಪಾಟೀಲರಿಗೆ ಈ ಬಾರಿ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಇದರ ಮಧ್ಯೆ ಇನ್ನೊಂದು ಗುಂಪು ಡಾ. ಎ.ಬಿ. ಮಾಲಕರಡ್ಡಿ ಪರ ಘೋಷಣೆ ಕೂಗಲು ಆರಂಭಿಸಿತು. ಇದಾದ ನಂತರ ಮೌಲಾಲಿ ಅನಪೂರ ಬೆಂಗಲಿಗರು ಘೋಷಣೆಗಳು ಸುರಿಮಳೆಗೈದರು.ಕಾರ್ಯಕರ್ತರ ಮಧ್ಯೆ ಹೊಡೆದಾಟ:  ನಗರಕ್ಕೆ ಆಗಮಿಸಿದ ಕಾಂಗ್ರೆಸ್ ಚುನಾವಣೆ ವೀಕ್ಷಕರ ಎದುರೇ ಗುರುಮಠಕಲ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ಹಾಗೂ ಹೊಡೆದಾಡಿದ ಘಟನೆ ಸೋಮವಾರ ಜರುಗಿತು.ಮಧ್ಯಾಹ್ನ 3 ಗಂಟೆಗೆ ಗುರುಮಠಕಲ್ ಮತಕ್ಷೇತ್ರದ ಕಾಂಗ್ರೆಸ್ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಲು ಜಿಲ್ಲಾ ಕಚೇರಿಯಲ್ಲಿ ಸಭೆ ನಿಗದಿಯಾಗಿತ್ತು. ಇದಕ್ಕೂ ಮೊದಲು ಅಂಬೇಡ್ಕರ್ ವೃತ್ತದಿಂದ ನೂರಾರು ಕಾರ್ಯಕರ್ತರು ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಯಿಬಣ್ಣ ಬೋರಬಂಡಾ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ  ಲಕ್ಷ್ಮಾರಡ್ಡಿ ಅನಪೂರ ನೇತೃತ್ವದಲ್ಲಿ ಪಾದಯಾತ್ರೆಯ ಮೂಲಕ ಕಾಂಗ್ರೆಸ್ ಕಚೇರಿಗೆ ಆಗಮಿಸಿದರು.ವೀಕ್ಷಕರಿಗೆ ಮುತ್ತಿಗೆ ಹಾಕಿ ಶಾಸಕ ಚಿಂಚನಸೂರ ಅವರಿಗೆ ಟಿಕೆಟ್ ನೀಡಬಾರದು. ಸ್ಥಳೀಯ ಅಭ್ಯರ್ಥಿಗೆ ಈ ಬಾರಿ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಬಾಬುರಾವ ಚಿಂಚನಸೂರಗೆ ಜಯವಾಗಲಿ. ಅವರಿಗೇ ಟಿಕೀಟ್ ನೀಡಬೇಕು ಎಂದು ಘೋಷಣೆ ಕೂಗಿದ. ಇದರಿಂದ ಕೆರಳಿದ ಇನ್ನೊಂದು ಗುಂಪಿನ ಕಾರ್ಯಕರ್ತರು ಆತನ ಮೇಲೆ ಹಲ್ಲೆ ಮಾಡಿ ತರಾಟೆಗೆ ತೆಗೆದುಕೊಂಡರು. ಕೆಲವರು ಕುರ್ಚಿಯನ್ನೇ ಎತ್ತಿ ಬಡಿಯಲು ಮುಂದಾದರು. ಅನೇಕ ಮುಖಂಡರು ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.ಜಿಲ್ಲೆಯಾದ ನಂತರ ಹಲವು ಬಾರಿ ಕಾಂಗ್ರೆಸ್ ಕಚೇರಿಯಲ್ಲಿ ಸಭೆ, ಕಾರ್ಯಕ್ರಮಗಳು ನಡೆದಿದ್ದರೂ, ಪೊಲೀಸರ ಆಗಮನ ಆಗಿರಲಿಲ್ಲ. ಆದರೆ ಸೋಮವಾರ ವೀಕ್ಷಕರ ಭೇಟಿಯ ಸಂದರ್ಭದಲ್ಲಿ ಎಲ್ಲೆಲ್ಲೂ ಪೊಲೀಸರೇ ಕಾಣುತ್ತಿದ್ದರು. ಒಂದೆಡೆ ರಸ್ತೆಯಲ್ಲಿನ ಸಂಚಾರ ವ್ಯವಸ್ಥೆಯನ್ನು ಸರಿಪಡಿಸಲು ಹರಸಾಹಸ ಮಾಡುತ್ತಿದ್ದ ಪೊಲೀಸರು, ಒಳಗಡೆ ಕಾರ್ಯಕರ್ತರನ್ನು ಹಿಂದೆ ಸರಿಸಲು ಪ್ರಯಾಸ ಪಡುವಂತಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry