ಬಿಜೆಪಿಗೆ ಬಿರಾದಾರ್ ರಾಜೀನಾಮೆ

7

ಬಿಜೆಪಿಗೆ ಬಿರಾದಾರ್ ರಾಜೀನಾಮೆ

Published:
Updated:

ಗುಲ್ಬರ್ಗ: ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸುಭಾಷ್ ಬಿರಾದಾರ್ ಕಮಲಾಪೂರ್ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಪ್ರಕಟಣೆ ತಿಳಿಸಿದೆ.ರಾಜೀನಾಮೆ ಪತ್ರವನ್ನು ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರಿಗೆ ಕಳಿಸಿದ್ದು, ಪ್ರತಿಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್‌ಗೂ ಸಲ್ಲಿಸಿದ್ದಾರೆ.1992ರಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿಯವರ ರಥಯಾತ್ರೆಗೂ ಮುನ್ನ ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಪರಿಚಯಿಸಿಕೊಂಡು ಬಿಜೆಪಿ ಸೇರಿ ಇಲ್ಲಿನವರೆಗೆ ಕೊಟ್ಟ ಜವಾಬ್ದಾರಿಯನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದು, ಈಗ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವೆ. ವಿಶೇಷವಾಗಿ ಪಕ್ಷದಲ್ಲಿ ತಮ್ಮ ಘನತೆ ಹೆಚ್ಚಿಸಿದ ಅನಂತಕುಮಾರ್‌ಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.ಹಾವೇರಿಯಲ್ಲಿ ಡಿಸೆಂಬರ್ 9ರಂದು ನಡೆಯಲಿರುವ ಕೆಜೆಪಿ ಪಕ್ಷದ ಬೃಹತ್ ಸಮಾವೇಶಕ್ಕೆ ಜಿಲ್ಲೆಯಿಂದ ಸುಮಾರು 10,000 ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಭಾಗವಹಿಸುವರು. ಜಿಲ್ಲೆಯಲ್ಲಿ ಎಲ್ಲೆಡೆ ಕೆಜೆಪಿಯ ಅಲೆ ಕಾಣಿಸಿಕೊಂಡಿದ್ದು, ಪಕ್ಷದ ಸದಸ್ಯತ್ವಕ್ಕೆ ಹೆಚ್ಚಿನ ಜನರು ಉತ್ಸುಕತೆ ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಸುಭಾಷ್ ಬಿರಾದಾರ್ ಈಗಾಗಲೇ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಾರ್ಟಿಯಲ್ಲಿ (ಕೆಜೆಪಿ) ಗುರುತಿಸಿಕೊಂಡಿದ್ದು, ಸದಸ್ಯತ್ವ ಅಭಿಯಾನ ಆರಂಭಿಸಿದ್ದಾರೆ. ಚಿತ್ತಾಪುರ, ಕಮಲಾಪುರ, ಗುಲ್ಬರ್ಗ ಉತ್ತರ, ಗುಲ್ಬರ್ಗ ದಕ್ಷಿಣ ಮುಂತಾದೆಡೆ ಸಂಚರಿಸಿ ಸುಮಾರು 500 ಜನ ಸದಸ್ಯರನ್ನು ನೋಂದಣಿ ಮಾಡಿದ್ದು, ಜಿಲ್ಲೆಯಲ್ಲಿ ಸಂಚರಿಸಿ ಇನ್ನೂ 1500 ಸದಸ್ಯರನ್ನು ಪಕ್ಷಕ್ಕೆ ಸೇರಿಸುವ ಉದ್ದೇಶ ಹೊಂದಿರುವುದಾಗಿ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry