ಅಯ್ಯೋ ಈ ರಸ್ತೆಯ ಉದ್ಧಾರ ಯಾವಾಗ?

7

ಅಯ್ಯೋ ಈ ರಸ್ತೆಯ ಉದ್ಧಾರ ಯಾವಾಗ?

Published:
Updated:

ಗುಲ್ಬರ್ಗ: ನಗರದ ಬಹುತೇಕ ಪ್ರಮುಖ ರಸ್ತೆಗಳು ಇಂದಿಲ್ಲ ನಾಳೆ ಅಭಿವೃದ್ಧಿಗೊಳ್ಳುವ ಸಂಕೇತ ಸೂಚಿಸುತ್ತಿವೆ. ಆದರೆ ಜಗತ್ ವೃತ್ತದಿಂದ ಎಸ್‌ಟಿಬಿಟಿ ಬಸ್ ನಿಲ್ದಾಣದವರೆಗಿನ ರಸ್ತೆ ಮಾತ್ರ ನಿರ್ಲಕ್ಷ್ಯಕ್ಕೆ ಗುರಿಯಾದಂತಿದೆ.ಸಂತ್ರಸವಾಡಿ, ದರ್ಗಾ, ರೋಜಾ ಕಾಲೊನಿ, ಗಂಜ್ ಸೇರಿದಂತೆ ಬೀದರ್, ಹುಮನಾಬಾದ್ ಕಡೆಗೆ ಸಂಚರಿಸಲು ಇದು ಪ್ರಮುಖ ಮಾರ್ಗ. ಗಂಜ್ ಸಿಗ್ನಲ್‌ನಿಂದ ಜಗತ್‌ವರೆಗೂ ಏಕಪಥವಿದ್ದ ರಸ್ತೆಯನ್ನು ವಿಸ್ತರಿಸಿ ದ್ವಿಪಥಗೊಳಿಸಿ ರಸ್ತೆ ವಿಭಜಕಗಳನ್ನು ಹಾಕುವ ಕೆಲಸ ಆರಂಭಿಸಲಾಗಿತ್ತು. ಆದರೆ ರಸ್ತೆ ವಿಸ್ತರಣೆ ಕಾರ್ಯವನ್ನು ಎಸ್‌ಟಿಬಿಟಿ ನಗರ ಬಸ್ ನಿಲ್ದಾಣದ ಎದುರು ಸ್ಥಗಿತಗೊಳಿಸಲಾಗಿದೆ.ರಸ್ತೆ ನಿರ್ಮಾಣದ ಮೊದಲು ಎರಡು ಮಗ್ಗುಲುಗಳಲ್ಲಿ ಚರಂಡಿ ಕಾಮಗಾರಿ ನಡೆಯುತ್ತದೆ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ, ಎಸ್‌ಟಿಬಿಟಿ ಬಸ್ ನಿಲ್ದಾಣದಿಂದ ಜಗತ್ ವೃತ್ತದವರೆಗೂ ಇದ್ಯಾವುದರ ಸುಳಿವೇ ಇಲ್ಲ. ಹೀಗಾಗಿ ಸಾಯಿ ಪದವಿ ಮಹಾವಿದ್ಯಾಲಯದಿಂದ ಜಗತ್ ಕಡೆಗೆ ವಾಹನ ಸವಾರಿ ಮಾಡುವುದು ಸಾಹಸ. ಜನರು ರಸ್ತೆ ದಾಟುವುದು ಇನ್ನೊಂದು ಸಾಹಸ. ತಗ್ಗು ದಿಣ್ಣೆಗಳನ್ನು ತಪ್ಪಿಸುವ ಭರದಲ್ಲಿ ಅಪಘಾತಗಳು ತೀರಾ ಸಾಮಾನ್ಯವಾಗಿ ಸಂಭವಿಸುತ್ತಿವೆ.`ನಗರದ ಎಲ್ಲ ಕಡೆಗೂ ಚರಂಡಿ ನಿರ್ಮಿಸಿ ಅನಂತರ ರಸ್ತೆ ಅಭಿವೃದ್ಧಿಗೊಳಿಸಲಾಗುತ್ತಿದೆ. ದರ್ಗಾ ರಸ್ತೆಯಲ್ಲಿ ಕೂಡಾ ಚರಂಡಿ ನಿರ್ಮಾಣ ಕಾರ್ಯ ನಡೆದಿತ್ತು. ಎಸ್‌ಟಿಬಿಟಿ ಬಸ್ ನಿಲ್ದಾಣದಿಂದ ಜಗತ್‌ಕಡೆಗೆ ಮಾತ್ರ ರಸ್ತೆ ದುರಸ್ತಿ ಮಾಡುತ್ತಿಲ್ಲ. ಊರ ಉದ್ಧಾರ ಆದ್ರೂ, ಈ ರಸ್ತೆ ಮಾತ್ರ ಉದ್ಧಾರ ಆಗವಲ್ದು' ಎಂದು ಬೇಸರ ವ್ಯಕ್ತಪಡಿಸುತ್ತಾರೆ ಜಗತ್ ನಿವಾಸಿ ಶರಣಪ್ಪ.ಹುಂಡೈ, ಹಿರೋ, ಬಜಾಜ್ ಶೋರೂಮ್‌ಗಳು, ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆ, ಅಂಬೇಡ್ಕರ್ ಕಾಲೇಜ್ ಅಲ್ಲದೆ ವಿವಿಧ ಆಸ್ಪತ್ರೆಗಳು ಈ ರಸ್ತೆಯಲ್ಲಿವೆ. ಹಾಳಾದ ರಸ್ತೆಯಲ್ಲಿ ವಾಹನಗಳು ಎಬ್ಬಿಸುವ ದೂಳಿನ ಸಂಕಟ ಸಹಸಿಕೊಳ್ಳುವುದರೊಂದಿಗೆ ಅಡ್ಡಾದಿಡ್ಡಿ ಚಲಿಸುವ ವಾಹನಗಳ ಮಧ್ಯೆ ವಿದ್ಯಾರ್ಥಿಗಳು, ವಯೋವೃದ್ಧರು, ಮಕ್ಕಳು ಹಾಗೂ ಮಹಿಳೆಯರು ರಸ್ತೆ ದಾಟುವುದು ದುಸ್ತರವಾಗಿ ಪರಿಣಮಿಸಿದೆ.ಖಾಜಾ ಬಂದಾ ನವಾಜ್ ದರ್ಶನಕ್ಕೆ ಮೇಲಿಂದ ಮೇಲೆ ಬರುವ ಮಂತ್ರಿ, ಮಹೋದಯರು ಇದೇ ರಸ್ತೆ ಮೂಲಕ ಸಂಚರಿಸಿದರೂ ರಸ್ತೆ ಅಭಿವೃದ್ಧಿಗೊಳಿಸಲು ಜಿಲ್ಲಾಡಳಿತ  ಕ್ರಮ ಜರುಗಿಸುತ್ತಿಲ್ಲ. ಸೂಪರ್ ಮಾರ್ಕೆಟ್‌ನಂತಹ ಜನನಿಬಿಡ ಪ್ರದೇಶದಲ್ಲಿ ರಸ್ತೆ ನಿರ್ಮಿಸಲು ಸಾಧ್ಯವಾದರೆ, ಇಲ್ಲೇಕೆ ರಸ್ತೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಪ್ರಶ್ನೆ ಸಾರ್ವಜನಿಕರದ್ದು.ಜಗತ್‌ನಿಂದ ದರ್ಗಾ ಕಡೆಗೆ ಸಂಚರಿಸುವ ರಸ್ತೆ ಆರಂಭದಲ್ಲೆ ರಸ್ತೆಯನ್ನು ಸಿಕ್ಕಾಪಟ್ಟೆ ಅಗೆದು ಹಾಕಲಾಗಿದೆ. ಎರಡು ಮಗ್ಗಲುಗಳಲ್ಲಿ ಬಾಯಿ ತೆರೆದುಕೊಂಡ ರಸ್ತೆ ತಗ್ಗುಗಳ ದುರಸ್ತಿ ಕೂಡಾ ಕೈಗೊಳ್ಳುತ್ತಿಲ್ಲ. ತಿರಂದಾಸ್ ಥೇಟರ್ ವೃತ್ತ ಅಯೋಮಯ. ವಾಹನ ಸವಾರರು ಸ್ವಲ್ಪ ಯಾಮಾರಿದರೂ ಜಾರಿ ಬೀಳುವುದು ಗ್ಯಾರಂಟಿ. ರಸ್ತೆ ಓರೆಯಾಗಿರುವುದರಿಂದ ವಾಹನವನ್ನು ಅತಿ ನಿಧಾನವಾಗಿ ಚಲಿಸಬೇಕು.ನೃಪತುಂಗ ನಗರ ಬಸ್ ಸಂಚಾರ ಆರಂಭವಾದಾಗಿನಿಂದ ಈ ರಸ್ತೆಯ ಸಂಚಾರ ಮತ್ತಷ್ಟು ಹದಗೆಡುತ್ತಿದೆ. ಒಮ್ಮೆಲೆ ಎದುರಾಗುವ ಮೂರ‌್ನಾಲ್ಕು ಬಸ್‌ಗಳ ನಡುವೆ ಬೈಕ್, ಕಾರು ಸವಾರರು ದಾರಿ ಮಾಡಿಕೊಂಡು ಮುನ್ನುಗ್ಗಲು ಸಾಧ್ಯವಾಗುವುದಿಲ್ಲ. ನಿಲ್ದಾಣಗಳು ರಸ್ತೆಗೆ ಹೊಂದಿಕೊಂಡೇ ಇರುವುದರಿಂದ ತಿರಂದಾಸ್ ಬಳಿ ಬಸ್‌ಗಳು ನಿಂತುಕೊಂಡರೆ, ಅವುಗಳ ಹಿಂದೆ ಇನ್ನುಳಿದ ವಾಹನಗಳನ್ನು ನಿಲ್ಲಿಸಬೇಕಾಗುತ್ತದೆ.ನಗರ ಬಸ್ ಸಂಚಾರ ಸುಗಮಗೊಳ್ಳಲು ದ್ವಿಪಥ ರಸ್ತೆಗಳನ್ನು ಶೀಘ್ರ ಅಭಿವೃದ್ಧಿಗೊಳಿಸುವ ಅಗತ್ಯವಿದೆ. ರಸ್ತೆ ನಿರ್ಮಾಣ ಕಾರ್ಯಕ್ಕೆ ಈಗಾಗಲೇ ಸರ್ಕಾರ ಅನುದಾನವನ್ನು ನೀಡಿದೆ. ಹೀಗಾಗಿ ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿದರೆ, ಸಂಭವಿಸಬಹುದಾದ ಒಂದಿಷ್ಟು ಅವಾಹುತಗಳನ್ನು ತಪ್ಪಿಸಬಹುದು ಎನ್ನುವುದು ಪ್ರಜ್ಞಾವಂತ ನಾಗರಿಕರ ಅನಿಸಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry