ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ವಲ್‌ ರೇವಣ್ಣ ಬಗ್ಗೆ ಸಹನೆ ಬೇಕಿಲ್ಲ: ಪ್ರಧಾನಿ ಮೋದಿ

Published : 6 ಮೇ 2024, 16:29 IST
Last Updated : 6 ಮೇ 2024, 16:29 IST
ಫಾಲೋ ಮಾಡಿ
Comments

ನವದೆಹಲಿ: ಪ್ರಜ್ವಲ್ ರೇವಣ್ಣ ಅವರಂಥವರ ವಿಚಾರದಲ್ಲಿ ಒಂದಿನಿತೂ ಸಹನೆ ತೋರಬೇಕಾದ ಅಗತ್ಯ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಜ್ವಲ್ ಅವರಿಗೆ ದೇಶದಿಂದ ಹೊರಗಡೆ ಹೋಗಲು ಕರ್ನಾಟಕದಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರವು ಅನುವು ಮಾಡಿಕೊಟ್ಟಿದೆ ಎಂದು ಮೋದಿ ಆರೋಪಿಸಿದ್ದಾರೆ.

ಇದು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿರುವ ಕಾರಣ, ಕ್ರಮ ಜರುಗಿಸುವ ಹೊಣೆಯು ರಾಜ್ಯ ಸರ್ಕಾರದ ಮೇಲೆ ಇದೆ ಎಂದು ಅವರು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಸಹಸ್ರಾರು ವಿಡಿಯೊಗಳು ಇವೆ ಎಂದಾದರೆ, ಅವು ಜೆಡಿಎಸ್ ಪಕ್ಷವು ಕಾಂಗ್ರೆಸ್ಸಿನ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಅವಧಿಗೆ ಸೇರಿವೆ ಎಂಬುದು ಗೊತ್ತಾಗುತ್ತದೆ. ಅವರು ಅಧಿಕಾರದಲ್ಲಿ ಇದ್ದಾಗ ಈ ವಿಡಿಯೊಗಳನ್ನು ಒಟ್ಟುಗೂಡಿಸಿಕೊಂಡಿದ್ದರು, ಒಕ್ಕಲಿಗರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ ನಂತರದಲ್ಲಿ, ಚುನಾವಣೆಯ ಸಂದರ್ಭದಲ್ಲಿ ಈ ವಿಡಿಯೊಗಳನ್ನು ಬಿಡುಗಡೆ ಮಾಡಿದರು ಎಂದು ಮೋದಿ ಅವರು ಹೇಳಿದ್ದಾರೆ.

ಪ್ರಜ್ವಲ್ ಅವರನ್ನು ದೇಶದಿಂದ ಹೊರಗೆ ಕಳುಹಿಸಿದ ನಂತರ ವಿಡಿಯೊಗಳನ್ನು ಬಿಡುಗಡೆ ಮಾಡಲಾಯಿತು ಎಂದಿರುವ ಮೋದಿ ಅವರು, ಈ ಬೆಳವಣಿಗೆಗಳು ಬಹಳ ಅನುಮಾನಾಸ್ಪದ ಎಂದಿದ್ದಾರೆ. ರಾಜ್ಯ ಸರ್ಕಾರದ ಬಳಿ ಮಾಹಿತಿ ಇದ್ದಿದ್ದರೆ ಅದು ಒಂದು ಕಣ್ಣಿರಿಸಬೇಕಿತ್ತು, ವಿಮಾನ ನಿಲ್ದಾಣಗಳಲ್ಲಿ ನಿಗಾ ಇರಿಸಬೇಕಿತ್ತು ಎಂದಿದ್ದಾರೆ.

‘ನೀವು ಏನನ್ನೂ ಮಾಡಲಿಲ್ಲ, ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಿಲ್ಲ. ಇದರ ಅರ್ಥ, ಇವೆಲ್ಲ ಒಂದು ರಾಜಕೀಯ ಆಟವಾಗಿತ್ತು, ಅವರು ಹೊಂದಾಣಿಕೆ ಮಾಡಿಕೊಂಡಿದ್ದ ಅವಧಿಗೆ ಸೇರಿದ ವಿಡಿಯೊಗಳು ಇವು ಎಂಬುದು ಅವರಿಗೆ ಗೊತ್ತಿತ್ತು, ಅವರೇ ವಿಡಿಯೊಗಳನ್ನು ಒಗ್ಗೂಡಿಸಿ ಇಟ್ಟುಕೊಂಡಿದ್ದರು. ಆದರೆ, ಅಪರಾಧಿಗಳನ್ನು ಬಿಡಬಾರದು. ನಮ್ಮ ದೇಶದಲ್ಲಿ ಇಂತಹ ಆಟಗಳನ್ನು ಕೊನೆಗೊಳಿಸಬೇಕು’ ಎಂದು ಅವರು ಹೇಳಿರುವುದಾಗಿ ವಾಹಿನಿ ಬಿಡುಗಡೆ ಮಾಡಿರುವ ಸಂದರ್ಶನದ ಪಠ್ಯದಲ್ಲಿ ಉಲ್ಲೇಖವಾಗಿದೆ.

‘ಮೋದಿಗೆ ಸಂಬಂಧಿಸಿದಂತೆ, ಬಿಜೆಪಿಗೆ ಸಂಬಂಧಿಸಿದಂತೆ, ನಮ್ಮ ಸಂವಿಧಾನಕ್ಕೆ ಸಂಬಂಧಿಸಿದಂತೆ ನನ್ನ ದೃಷ್ಟಿಕೋನ ಬಹಳ ಸ್ಪಷ್ಟವಾಗಿದೆ. ಇಂತಹ ವ್ಯಕ್ತಿಗಳ ವಿಚಾರದಲ್ಲಿ ತುಸುವೂ ಸಹನೆ ತೋರಿಸಬೇಕಿಲ್ಲ. ಕಾನೂನಿನ ಅಡಿಯಲ್ಲಿ ಲಭ್ಯವಿರುವ ಎಲ್ಲ ಆಯ್ಕೆಗಳನ್ನು ಬಳಸಿಕೊಂಡು ಕಠಿಣ ಶಿಕ್ಷೆಯನ್ನು ಕೊಡಬೇಕು’ ಎಂದಿದ್ದಾರೆ.

‘ಅವರನ್ನು ನಾವು ವಾಪಸ್ ಕರೆತರಬೇಕು. ಅವರ ವಿರುದ್ಧ ಬಹಳ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲಿ ಆದರೆ, ಹೋದರೆ ಎಂಬ ಮಾತುಗಳು ಬರಬಾರದು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು 2018ರ ವಿಧಾನಸಭಾ ಚುನಾವಣೆಯ ನಂತರ ಮೈತ್ರಿ ಸರ್ಕಾರ ರಚಿಸಿದ್ದವು. 

ಪಿತ್ರಾರ್ಜಿತ ಆಸ್ತಿ ತೆರಿಗೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಮಾಡಿರುವ ಆರೋಪಗಳ ಕುರಿತ ಪ್ರಶ್ನೆಗೆ ಮೋದಿ ಅವರು, ತಾವು ಕಾಂಗ್ರೆಸ್ ಪಕ್ಷದ ಭಾಷೆ, ಪದಗಳು ಹಾಗೂ ಲಿಖಿತ ಭರವಸೆಗಳನ್ನು ಉಲ್ಲೇಖಿಸಿ ತಮ್ಮ ವಿಚಾರವನ್ನು ಮಂಡಿಸಿರುವುದಾಗಿ ಉತ್ತರಿಸಿದ್ದಾರೆ. ‘ಈ ಬಾರಿ ನಾನು ಅವರನ್ನು ಸಂಪೂರ್ಣವಾಗಿ ಬಯಲುಗೊಳಿಸುವ ಕೆಲಸ ಮಾಡಿದ್ದೇನೆ. ಒಂದು ಸಮುದಾಯದ ಮತಗಳನ್ನು ಕೇಳಲು ಹೋಗುವಾಗ ಅವರು ಭಿನ್ನ ರೀತಿಯಲ್ಲಿ ಮಾತನಾಡುತ್ತಾರೆ. ಇನ್ನೊಂದು ಸಮುದಾಯದ ಮತ ಯಾಚಿಸುವಾಗ ಅವರು ತಟಸ್ಥ ನಿಲುವು ಹೊಂದಿರುತ್ತಾರೆ. ಇದು ಅವರ ಇಬ್ಬಂದಿತನವನ್ನು ತೋರಿಸುತ್ತದೆ’ ಎಂದು ದೂರಿದ್ದಾರೆ.

ಬಿಜೆಪಿ ವಿರುದ್ಧ ಮಾತನಾಡುವ ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷವು ಸುಳ್ಳುಗಳನ್ನು ಹೇಳುತ್ತಿದೆ, ಬಿಜೆಪಿಯು ಸಂವಿಧಾನವನ್ನು ಬದಲಾಯಿಸುತ್ತದೆ ಎನ್ನುತ್ತದೆ. ಬಿಜೆಪಿಯ ಕೆಲವರು ಆಡಿದ ಮಾತನ್ನು ಕಾಂಗ್ರೆಸ್ ಪಕ್ಷವು ವಿಪರೀತದ ಮಟ್ಟದಲ್ಲಿ ಚಿತ್ರಿಸುತ್ತಿದೆ ಎಂದು ಮೋದಿ ದೂರಿದ್ದಾರೆ.

‘ಅವರು ನಮ್ಮ ಮಾತುಗಳನ್ನು ಆಲಿಸಲು ಸಿದ್ಧರಿಲ್ಲ. ಈಗ ಕಾಂಗ್ರೆಸ್ ಪಕ್ಷವು, ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸಂಪತ್ತಿನ ಹಂಚಿಕೆ ಹಾಗೂ ಪಿತ್ರಾರ್ಜಿತ ಆಸ್ತಿ ತೆರಿಗೆ ಬಗ್ಗೆ ಉಲ್ಲೇಖ ಎಲ್ಲಿದೆ ಎಂದು ಕೇಳುತ್ತಿದೆ. ಕಾಂಗ್ರೆಸ್ ಇಬ್ಬಂದಿತನ ತೋರಿಸಬಾರದು. ಆ ಪಕ್ಷವು ಉತ್ತರ ನೀಡಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT