ಶುಕ್ರವಾರ, ಮೇ 27, 2022
30 °C

371ನೇ ಕಲಂ ತಿದ್ದುಪಡಿ: ಮತ್ತೆ ಮನವಿ, ನಿಯೋಗ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: “ಹೈದರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಸಂವಿಧಾನದ 371ನೇ ಕಲಂ ತಿದ್ದುಪಡಿ ಮಾಡುವಂತೆ ಒತ್ತಾಯಿಸಿ ಹಲವು ಸಲ ಮನವಿ ಕೊಡಲಾಗಿದೆ. ಇನ್ನು ಉಳಿದಿರುವುದು ಹೋರಾಟದ ದಾರಿ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.ಈಗಾಗಲೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದೆಹಲಿಗೆ ಹಲವು ಬಾರಿ ನಿಯೋಗ ಕರೆದೊಯ್ಯಲಾಗಿದೆ. ಹೀಗಾಗಿ ಇನ್ನು ಮುಂದೆ ನಿಯೋಗ- ಮನವಿ ಅಗತ್ಯವೇ ಇಲ್ಲ. ಹೋರಾಟ ನಡೆಸುವುದೊಂದೇ ಉಳಿದಿರುವ ದಾರಿ ಎಂದು ಅವರು ಸ್ಪಷ್ಟಪಡಿಸಿದರು.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ನಿಯೋಗವು ಈಚೆಗೆ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಭೇಟಿ ಮಾಡಿ, 371ನೇ ಕಲಂ ತಿದ್ದುಪಡಿಗೆ ಒತ್ತಾಯಿಸಿತು.ಈ ಸಂದರ್ಭದಲ್ಲಿ ಅವರು ‘ಈ ಬೇಡಿಕೆಗೆ ಯಾರ ವಿರೋಧವಿದೆ?’ ಎಂದು ಪ್ರಶ್ನಿಸಿದರು. ಆಗ ಯಡಿಯೂರಪ್ಪ ಅವರು, ‘ಯಾರ ವಿರೋಧವೂ ಇಲ್ಲ. ಬೇಡಿಕೆ ಈಡೇರಿಸುವುದು ನಿಮ್ಮ ಕೈಯಲ್ಲೇ ಇದೆ’ ಎಂದರು. ಆಗ ಪ್ರಧಾನಿಯು ಗೃಹ ಸಚಿವರನ್ನು ಭೇಟಿ ಮಾಡುವಂತೆ ಸೂಚಿಸಿದರು ಎಂದು ಹೇಳಿದರು.“ಪ್ರಧಾನಿ ಸಲಹೆ ಮೇರೆಗೆ ಗೃಹ ಸಚಿವ ಚಿದಂಬರಂ ಅವರನ್ನು ನಿಯೋಗ ಭೇಟಿ ಮಾಡಿತು. ವಿದರ್ಭ ಹಾಗೂ ತೆಲಂಗಾಣದ ಅಭಿವೃದ್ಧಿಗೆ ಈ ಕಲಂ ಬಳಸಿದ್ದು, ಆ ಪ್ರದೇಶದಲ್ಲಿ ಅದರಿಂದ ಉಂಟಾಗಿರುವ ಪರಿಣಾಮ ಗಮನಿಸಿ ನಂತರ ಹೈ-ಕ ಪ್ರದೇಶಕ್ಕೂ ಈ ಸೌಲಭ್ಯ ನೀಡುವುದಾಗಿ ಸಚಿವ ಚಿದಂಬರಂ ಹೇಳಿದರು. ಆದರೆ ತೆಲಂಗಾಣ, ವಿದರ್ಭದಲ್ಲಿ ಉಂಟಾದ ಕೊರತೆ ಅಥವಾ ಲೋಪದ ಶಿಕ್ಷೆ ನಮಗೇಕೆ ಕೊಡಬೇಕು? ಎಂದು ನಾವು ಪ್ರಶ್ನಿಸಿದ್ದೇವೆ. ಇಷ್ಟೇ ಅಲ್ಲ; ಸಂವಿಧಾನ ಇರುವುದೇ ಜನರ ಒಳಿತಿಗಾಗಿ. ಹಾಗಾಗಿ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದೇವೆ” ಎಂದು ಬೊಮ್ಮಾಯಿ ವಿವರಿಸಿದರು.26ರಂದು ಸಭೆ: ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಳ್ಳಬೇಕಿರುವ ಯೋಜನೆಗಳ ಬಗ್ಗೆ ಚರ್ಚಿಸಲು ಪ್ರತಿಪಕ್ಷ ನಾಯಕರ ಸಭೆಯೊಂದನ್ನು ಇದೇ 26ರಂದು ಕರೆದಿರುವುದಾಗಿ ಅವರು ತಿಳಿಸಿದರು.ಸಮರ್ಥ ನಾಯಕತ್ವ: ಬಿಜೆಪಿಯಲ್ಲಿ ಯಾವುದೇ ಬಗೆಯ ಭಿನ್ನಮತ ಇಲ್ಲ. ಸಮರ್ಥ ನಾಯಕತ್ವ ಪಕ್ಷಕ್ಕೆ ಇದೆ. ಹೈಕಮಾಂಡ್ ಕೂಡ ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿಟ್ಟಿದೆ. ಹಾಗಾಗಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸಚಿವ ಬೊಮ್ಮಾಯಿ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.