ವನ್ಯಜೀವಿ ದಾಳಿ: 3 ವರ್ಷಗಳಲ್ಲಿ 144 ಬಲಿ

7
ಕಾಡಾನೆ ಹಾವಳಿ ಪ್ರದೇಶಗಳಿಗೆ ಶೀಘ್ರ ಭೇಟಿ: ಸತೀಶ ಜಾರಕಿಹೊಳಿ

ವನ್ಯಜೀವಿ ದಾಳಿ: 3 ವರ್ಷಗಳಲ್ಲಿ 144 ಬಲಿ

Published:
Updated:

ಬೆಂಗಳೂರು: ಕಾಡಾನೆ ಹಾವಳಿ ಹೆಚ್ಚಾಗಿ ಕಂಡು ಬರುವ ಪ್ರದೇಶಗಳಿಗೆ ಈ ಅಧಿವೇಶನದ ಬಳಿಕ ಶೀಘ್ರ ಭೇಟಿ ನೀಡಿ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸತೀಶ ಎಲ್‌.ಜಾರಕಿಹೊಳಿ ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಜೆಡಿಎಸ್‌ನ ಕೆ.ಎ.ತಿಪ್ಪೇಸ್ವಾಮಿ ಹಾಗೂ ಬಿಜೆಪಿಯ ಎಂ.ಕೆ.ಪ್ರಾಣೇಶ ಅವರ ಪ್ರಶ್ನೆಗಳಿಗೆ ಬುಧವಾರ ಉತ್ತರಿಸಿದ ಸಚಿವರು, ‘ಮೂರು ವರ್ಷಗಳಲ್ಲಿ ವನ್ಯಜೀವಿ ದಾಳಿಯಿಂದಾಗಿ ರಾಜ್ಯದಲ್ಲಿ ಒಟ್ಟು 144 ಮಂದಿ ಮೃತಪಟ್ಟಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಇದುವರೆಗೆ ಒಟ್ಟು ₹ 7.20 ಕೋಟಿ ಪರಿಹಾರ ನೀಡಲಾಗಿದೆ’ ಎಂದರು.

‘ವನ್ಯಜೀವಿಗಳ ಚಲನವಲನದ ಮಾಹಿತಿ ಸಂಗ್ರಹಿಸಲು ದಿನದ 24  ಗಂಟೆಗಳೂ ಕಾರ್ಯನಿರ್ವಹಿಸುವ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ. ರೈತರು ಸೌರ ಬೇಲಿ ನಿರ್ಮಿಸಿಕೊಳ್ಳಲು ಮುಂದಾದರೆ, ಶೇ. 50ರಷ್ಟು ಸಹಾಯಧನ ನೀಡುತ್ತೇವೆ’ ಎಂದರು.

‘ಕಾಡಾನೆ ಹಿಂಡುಗಳ ವಯಸ್ಕ ಹೆಣ್ಣಾನೆಗೆ ರೇಡಿಯೊ ಕಾಲರ್‌ ಅಳವಡಿಸಿ ಆ ಹಿಂಡು ಯಾವ ಪ್ರದೇಶದಲ್ಲಿ ಸಾಗುತ್ತಿದೆ ಎಂಬುದರ ಬಗ್ಗೆಯೂ ನಿಗಾ ವಹಿಸಲಾಗುತ್ತದೆ’ ಎಂದು ತಿಳಿಸಿದರು.

ಎಂ.ಕೆ.ಪ್ರಾಣೇಶ್‌, ‘ನಾನು ಕಳೆದ ವರ್ಷ ಈ ಪ್ರಶ್ನೆ ಕೇಳಿದಾಗಲೂ ಸಚಿವರು ಇದೇ ಉತ್ತರ ನೀಡಿದ್ದರು. ಆ ಬಳಿಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆ ದಾಳಿಯಿಂದ ನಾಲ್ವರು ಸತ್ತಿದ್ದಾರೆ. ಅವರಿಗೆ ಇಲಾಖೆಯಿಂದ ಪರಿಹಾರವನ್ನೂ ನೀಡಲಾಗಿದೆ. ನೀವು ನೀಡಿದ ಉತ್ತರದಲ್ಲಿ ಕೇವಲ ಒಬ್ಬರು ಮಾತ್ರ ಸತ್ತಿದ್ದಾರೆ ಎಂಬ ಮಾಹಿತಿ ಇದೆ. ತಪ್ಪು ಮಾಹಿತಿ ನೀಡಿ ಸದನದ ದಾರಿ ತಪ್ಪಿಸಬೇಡಿ’ ಎಂದರು.

‘ಹಾಸನ, ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಕಾಡಿನಂಚಿನ ತೋಟದ ಮಾಲೀಕರು ಆನೆ ಹಾವಳಿಯಿಂದ ತತ್ತರಿಸಿ ಹೋಗಿದ್ದಾರೆ. ತೋಟದ ಜಾಗವನ್ನು ಸರ್ಕಾರವೇ ಖರೀದಿಸಲಿ ಎಂದು ಅವರು ಬೇಡಿಕೆ ಇಟ್ಟಿದ್ದಾರೆ. ಇಂತಹ ಜಾಗವನ್ನು ಖರೀದಿಸಲು ಕೇಂದ್ರ ಸರ್ಕಾರವೂ ಪರಿಹಾರ ಅರಣ್ಯ ನಿಧಿ ನಿರ್ವಹಣೆ ಯೋಜನೆಯಡಿ (ಕಾಂಪ) ಅನುದಾನ ಒದಗಿಸುತ್ತದೆ. ಇದನ್ನು ಬಳಸಿಕೊಳ್ಳಬೇಕು’ ಎಂದು ತಿಪ್ಪೇಸ್ವಾಮಿ ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !