ಮಂಗಳವಾರ, ನವೆಂಬರ್ 12, 2019
28 °C

ಕೋಟಿಗೊಬ್ಬ ಶರಣರ ಜಾತ್ರಾ ಮಹೋತ್ಸವ

Published:
Updated:

ಗುಲ್ಬರ್ಗ: `ಕೋಟಿಗೊಬ್ಬ ಶರಣ... ಪರಶಿವನ ಹರನ... ಕಲಬುರಗಿ ಶ್ರೀ ಶರಣಬಸವನ ಮಾಡೋ ನೀ ಸ್ಮರಣ...'

ಎನ್ನುವ ಹಾಗೆ 17ನೇ ಶತಮಾನದಲ್ಲಿ ಈ ಭಾಗದಲ್ಲಿ ನಡೆದಾಡಿದ ಶ್ರೇಷ್ಠ ಶರಣ ಗುಲ್ಬರ್ಗದ ಶರಣಬಸವೇಶ್ವರರ ನಾಮ ಸ್ಮರಣೆ ಮಾಡದವರು ವಿರಳ. ಈ ಭಾಗದಲ್ಲಿ ಯಾವುದೇ ಕಡೆ ಜಾತ್ರೆ ಧಾರ್ಮಿಕ ಕಾರ್ಯಕ್ರಮಗಳು ನಡೆದರೂ ಅಲ್ಲಿ ಶರಣಬಸವೇಶ್ವರರ ಪುರಾಣ ಸಾಮಾನ್ಯ.ಶರಣ ಬಸವೇಶ್ವರರು ಮತ್ತು ಖ್ವಾಜಾ ಬಂದೇ ನವಾಜ್‌ರು ಗುಲ್ಬರ್ಗವನ್ನು ಶಾಂತಿ ಸೌಹಾರ್ದತೆಯ ಕೇಂದ್ರವನ್ನಾಗಿಸಿದ್ದಾರೆ. ಈ ಶರಣರ ಶ್ರೇಷ್ಠ ಕಾರ್ಯಗಳಿಂದ ಧಾರ್ಮಿಕ, ಸಾಂಸ್ಕೃತಿಕವಾಗಿ ಗುಲ್ಬರ್ಗ ಶ್ರೀಮಂತಗೊಂಡಿದೆ. ಶರಣಬಸವೇಶ್ವರರ ದೇವಾಲಯ ಗುಲ್ಬರ್ಗದ ಪವಿತ್ರ ಯಾತ್ರಾಸ್ಥಳ ಹಾಗೂ ಧಾರ್ಮಿಕ ಕೇಂದ್ರ.`ಅರಳಗುಂಡಿಗೆಯ ಕಂದ ಕಲಬುರಗಿಗೆ ತಾ ಬಂದ ದೊಡ್ಡಪ್ಪ ಗೌಡರ ಮನೆಯಲಿ ಉಳಿದು ಶಿವಮತ ಕೀರ್ತಿಯ ತಂದ' ಎಂಬ ಕವಿವಾಣಿಯಂತೆ ಕ್ರಿ.ಶ. 17ನೇ ಶತಮಾನದಲ್ಲಿ ಜೇವರ್ಗಿ ತಾಲ್ಲೂಕಿನ ಅರಳಗುಂಡಗಿಯಲ್ಲಿ ಜನಿಸಿದ ಶರಣಬಸವೇಶ್ವರರು ಲೋಕ ಕಲ್ಯಾಣಕ್ಕಾಗಿ ಗುಲ್ಬರ್ಗದಲ್ಲಿ ಬಂದು ನೆಲೆಸಿದರು. ಮುಂದೆ ದೊಡ್ಡಪ್ಪ ಗೌಡರ ಮನೆಯಲ್ಲಿ ಉಳಿದುಕೊಂಡು ಸಮಾಜೋದ್ಧಾರ ಕೆಲಸದಲ್ಲಿ ತೊಡಗಿಕೊಂಡರು.ಶರಣಬಸವೇಶ್ವರರು ಜನರ ಕಲ್ಯಾಣಕ್ಕಾಗಿ `ಅಹಂ ಭಾವವನ್ನು ನೀಗಿ ದಾಸೋಹಂ' ಭಾವವೇ ತಾನಾಗಿ ಇಹ-ಪರಗಳನ್ನು ಗೆಲ್ಲಲ್ಲು ಬಂದ ಪರಮ ಶಿವಯೋಗಿ ಎಂಬುದು ನಂಬಿಕೆ. ಹೀಗಾಗಿ ಗುಲ್ಬರ್ಗದ ಶರಣಬಸವೇಶ್ವರರ ಸಂಸ್ಥಾನವು ಅನ್ನ ಮತ್ತು ಶಿಕ್ಷಣ ದಾಸೋಹ ನೀಡುತ್ತಿದೆ.ಶರಣರ ಜಾತ್ರೆ: ಪ್ರತಿವರ್ಷ ಹೋಳಿಹುಣ್ಣಿಮೆ ಬಳಿಕ ಐದನೇ ದಿನದಂದು ನಡೆಯುವ ರಥೋತ್ಸವವು ಈ ವರ್ಷ ಮಾ. 31ರ ಭಾನುವಾರ ವಿಜೃಂಭಣೆಯಿಂದ ಜರುಗಿತು. ಹರಕೆ ಹೊತ್ತ ಸಹಸ್ರಾರು ಭಕ್ತರು ಭಜನೆ ಮಾಡುತ್ತಾ ನಾಡಿನ ವಿವಿಧೆಡಗಳಿಂದ ತಂಡೋಪ ತಂಡವಾಗಿ ಬಂದು ಶರಣರ ದರ್ಶನ ಪಡೆದು ಪುನೀತರಾದರು. ದಾಸೋಹದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಎದುರಿಗೆ ವಿವಿಧ ಮಳಿಗೆಗೆಗಳನ್ನು ಹಾಕಲಾಗಿತ್ತು.ಜಾತ್ರೆಗೆ ಬಂದ ಮಕ್ಕಳು-ಪೋಷಕರು ಸೇರಿದಂತೆ ಸಾರ್ವಜನಿಕರು ತೊಟ್ಟಿಲು, ಕುದುರೆ, ಭಾರಿ ಚಕ್ರದ ತೊಟ್ಟಿಲು ಮುಂತಾದವುಗಳಲ್ಲಿ ಕುಳಿತು ಸಂತೋಷ ಪಟ್ಟರು. ವಿವಿಧ ತಿನಿಸುಗಳನ್ನು ಸವಿದರು.  ಪ್ರಸಿದ್ಧ `ವಿಜಾಪುರ ಚೆನ್ನಬಸಪ್ಪ ಚೂಡಾ', ಬೆಂಡು, ಬತಾಸ, ಅಂಗಡಿಗಳು ಇನ್ನಷ್ಟೇ ತೆರೆದುಕೊಳ್ಳುವ ಹಂತದಲ್ಲಿದ್ದವು. ಬಿಸಿಲಿನ ಬೇಗೆ ತಾಳದೆ ಜನ ತಂಪು ಪಾನೀಯ, ಕಬ್ಬಿನ ಹಾಲು, ಕಲ್ಲಂಗಡಿ, ಐಸ್‌ಕ್ರೀಮ್ ತಿಂದು ಸಂಭ್ರಮಿಸಿದರು.ಸೌಲಭ್ಯಗಳು: ಜಾತ್ರೆಯಲ್ಲಿ ಭಕ್ತರಿಗೆ ಅನಾರೋಗ್ಯ, ತೊಂದರೆ  ಇತ್ಯಾದಿ ಸಂಭವಿಸಿದರೆ ಚಿಕಿತ್ಸೆ ನೀಡಲು ಗುಲ್ಬರ್ಗದ ಚಿರಾಯು ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ವಿವಿಧ ಸಂಘ ಸಂಸ್ಥೆಗಳಿಂದ ಅಲ್ಲಲ್ಲಿ ಅರವಟಿಗೆಗಳಲ್ಲಿ ಕುಡಿಯಲು ತಂಪು ನೀರು, ಹಣ್ಣಿನ ರಸ, ಪ್ರಸಾದದ ವ್ಯವಸ್ಥೆ ಮಾಡಿದ್ದವು.ಸಂಚಾರ ವ್ಯತ್ಯಯ: ಜನರ ಸುಗಮ ಸಂಚಾರಕ್ಕೆ ದೇವಸ್ಥಾನದಿಂದ 1ಕಿ.ಮೀ ದೂರದಲ್ಲಿಯೇ ವಾಹಗಳನ್ನು ತಡೆಹಿಡಿಯಲಾಗಿತ್ತು. ಜಾತ್ರೆ ನಿಮಿತ್ತ ಗುಲ್ಬರ್ಗದ್ಲ್ಲೆಲೆಡೆ ಜನಸಂದಣಿ ಹೆಚ್ಚಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಂಜೆ ರಥೋತ್ಸವದ ನಂತರ ಗ್ರಾಮೀಣ ಭಾಗಕ್ಕೆ ತೆರಳುವ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಾಗಿ ಜನ ಪರಾದಾಡುವಂತಾಯಿತು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಈ ಬಾರಿ ಜಾತ್ರೆಗೆ ಆಗಮಿಸಿದ್ದ ವಿದೇಶಿಯರು ಇಲ್ಲಿನ ಪುರವಂತರು ಹಾಗೂ ಜೋಗತಿಯರ ಜೊತೆ ಫೋಟೊ ಕ್ಲಿಕ್ಕಿಸಿಕೊಂಡರು. ಚಂದ್ರಮಾನ ಯುಗಾದಿ ಹಿಂದಿನ ಅಮಾವಾಸ್ಯೆ (ಏ.10)ರ ತನಕ ಜಾತ್ರೆಯ ಸಂಭ್ರಮ ಮುಂದುವರಿಯಲಿದೆ.

ಪ್ರತಿಕ್ರಿಯಿಸಿ (+)