ಮಂಗಳವಾರ, ನವೆಂಬರ್ 19, 2019
23 °C

ಸಂವಾದ: ಆರೋಪ-ಪ್ರತ್ಯಾರೋಪ

Published:
Updated:

ಗುಲ್ಬರ್ಗ: ಆರೋಪ-ಪ್ರತ್ಯಾರೋಪ, ಹೊಗಳಿಕೆ-ತೆಗಳಿಕೆ, ಭರವಸೆ-ಬೈಗುಳ, ಹಾಸ್ಯ-ಗಂಭೀರ, ಸಿಟ್ಟು-ನಗು... ಹೀಗೆ ಚುನಾವಣೆಯ ನವರಸ ಭಾವಗಳು ನಗರದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಗುರುವಾರ ಮಿಲನಗೊಂಡಿತ್ತು. ವಿಚಾರಕ್ಕಿಂತ ಪ್ರಚಾರದ ತುಡಿತವೇ ಹೆಚ್ಚಾಗಿತ್ತು.-ಇದು ಕಲ್ಯಾಣ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘವು ಆಯೋಜಿಸಿದ `ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರದಿಂದ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳೊಂದಿಗೆ ಮತದಾರರಿಂದ ನೇರ ಸಂವಾದ ಕಾರ್ಯಕ್ರಮ'ದಲ್ಲಿ ಕಂಡು ಬಂದ ಚಿತ್ರಣ. ನಾಲ್ಕು ಬಾರಿ ಕ್ಷೇತ್ರ ಪ್ರತಿನಿಧಿಸಿದ ಬಿಜೆಪಿ ಅಭ್ಯರ್ಥಿ ಸಚಿವ ರೇವುನಾಯಕ ಬೆಳಮಗಿ ವಿರುದ್ಧ ಹೆಚ್ಚಿನ ವಾಗ್ದಾಳಿ ನಡೆದರೆ, ಕೆಜೆಪಿಯ ಮಾಜಿ ಸಚಿವ ಬಾಬುರಾವ ಚವ್ಹಾಣ್ ನಂತರದ ಸ್ಥಾನ ಪಡೆದರು. ಸಿಪಿಎಂನ ಮಾರುತಿ ಮಾನ್ಪಡೆ ಅತಿ ಹೆಚ್ಚು ಅಭಿವೃದ್ಧಿ ವೈಫಲ್ಯಗಳನ್ನು ಎತ್ತಿ ಹಿಡಿದರು. ಮತದಾರರಿಗೆ ಮುಖಂಡರು ನೀಡಿದ ಉತ್ತರದ ತುಣುಕುಗಳು ಹೀಗಿವೆ.ಮಾರುತಿ ಮಾನ್ಪಡೆ (ಸಿಪಿಎಂ)

*ಜನರ ದುಸ್ಥಿತಿಗೆ ಕೇಂದ್ರದ ಕಾಂಗ್ರೆಸ್ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಕಾರಣ. ಜಿಲ್ಲಾ ಉಸ್ತುವಾರಿ ಸಚಿವ ಬೆಳಮಗಿ ನೇರ ಹೊಣೆ. ಕ್ಷೇತ್ರದಲ್ಲಿ ನಿವೇಶನ ಹಂಚಿಕೆಯಲ್ಲಿ ವಂಚನೆಯ ಆರೋಪವಿದೆ.*ಕುರಿಕೋಟಾ ಸೇತುವೆ, ಗ್ರಾಮೀಣ ರಸ್ತೆ ದುರಸ್ತಿಗೆ ಯತ್ನಿಸಿಲ್ಲ. ತೊಗರಿಗೆ ಬೆಂಬಲ ಬೆಲೆ ಕೊಡಿಸಲು ಪ್ರಯತ್ನಿಸಿಲ್ಲ. ಮುತ್ತ್ಯಾನ ಬಬಲಾದದ ಭಕ್ತಾದಿಗಳಿಗೆ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಮಹಿಳೆಯರಿಗೆ ಶೌಚಾಲಯಗಳಿಲ್ಲ. ಸರ್ಕಾರಿ ಸೌಲಭ್ಯಗಳು ಬಡವರಿಗೆ ತಲುಪಿಲ್ಲ.

*ಕ್ಷೇತ್ರದಲ್ಲಿ ಈ ತನಕ ಅಧಿಕಾರ ನಡೆಸಿದವರು ಜನರ ಸಮಸ್ಯೆ ಬಗೆಹರಿಸಿಲ್ಲ. ರೈತರ, ಕಾರ್ಮಿಕರ, ಅಲ್ಪಸಂಖ್ಯಾತರ ಹಿಂದುಳಿದ ವರ್ಗದವರ ಆದಾಯ ಕಡಿಮೆ ಆಗುತ್ತಿದೆ.  ಬಾಬುರಾವ ಚವ್ಹಾಣ್ (ಕೆಜೆಪಿ)

*ಕುಣಿವ, ಕಾಲಿಗೆ ಬೀಳುವ, ಕಾನೂನು ತಿಳಿಯದ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಅಭಿವೃದ್ಧಿ ಅಸಾಧ್ಯ. ಅಧ್ಯಯನ ನಡೆಸಿ ಅಧಿಕಾರಿಗಳಿಂದ ಕೆಲಸ ತೆಗೆಯುವ ಶಾಸಕರು ಬೇಕು. ಅಂಜುವವರಲ್ಲ. ಸತತ ಗೆದ್ದು ಕ್ಷೇತ್ರ ಅಭಿವೃದ್ಧಿ ಮಾಡದವರನ್ನು ಮನೆಗೆ ಕಳುಹಿಸಿ.*ರಾಜಕೀಯ ಪಕ್ಷದಲ್ಲಿನ ತುಳಿತದ ವಿರುದ್ಧ ನ್ಯಾಯ ಕೇಳಲು ಯಾವುದೇ ಕೋರ್ಟ್ ಇಲ್ಲ. ನಮಗಿರುವ ಏಕೈಕ ಕೋರ್ಟ್ ಚುನಾವಣೆ. ನೀವೇ ತೀರ್ಪುಗಾರರು. ಬಿಎಸ್‌ವೈ ಬಿಜೆಪಿ ತುಳಿತಕ್ಕೆ ಒಳಗಾಗಿ ಹೊರಬಂದಿದ್ದಾರೆ. ನಾನು ಮಕ್ಕಳನ್ನು ಬೆಳೆಸುವ ಕಾಂಗ್ರೆಸ್ ಮುಖಂಡರ ತುಳಿತಕ್ಕೆ ಒಳಗಾಗಿ ಕೆಜೆಪಿಗೆ ಬಂದಿದ್ದೇನೆ.*ಕೊಂಚಾವರಂ ಲಂಬಾಣಿ ತಾಂಡಾ ಅಭಿವೃದ್ಧಿಗೆ ಬೆಳಮಗಿ ಬಿಡಿಗಾಸು ಬಿಡುಗಡೆ ಮಾಡಿಲ್ಲ. ನಾಲ್ಕು ಬಾರಿ ಆಯ್ಕೆಯಾದರೂ ಕ್ಷೇತ್ರದಲ್ಲಿ ಜನ ಸಂಚರಿಸುವ ರಸ್ತೆ ಇಲ್ಲ.*ಗೆದ್ದು ಅಧಿಕಾರಕ್ಕೆ ಬಂದರೆ ಮಾಜಿಗಳ ಅಕ್ರಮಗಳನ್ನು ಬಯಲಿಗೆಳೆದು, ನಿವೇಶನ, ರಸ್ತೆ, ಕಾಮಗಾರಿಗಳ ಹಣ ನುಂಗಿದವರನ್ನು ಜೈಲಿಗೆ ಕಳುಹಿಸುತ್ತೇನೆ.ರೇವುನಾಯಕ ಬೆಳಮಗಿ (ಬಿಜೆಪಿ)

*ನಾನು ಕೆಜೆಪಿ ಸೇರುತ್ತೇನೆ ಎಂದು ಹೇಳಿಲ್ಲ. ಅಣ್ಣಾರಾವ್ ಹೀರಾಪಾಟೀಲ್ ಬಿಜೆಪಿ `ಬಿ' ಫಾರಂ ಕೊಟ್ಟರು. ಅವರನ್ನು ವಿರೋಧಿಸುವಂತಿಲ್ಲ.

*ನನ್ನನ್ನು ನಿಮ್ಮ ಮಗನಂತೆ ಗೆಲ್ಲಿಸಿದ್ದೀರಿ. ರಾಜಕೀಯದಲ್ಲಿ ಯಾರೂ ಹರಿಶ್ಚಂದ್ರರು ಇಲ್ಲ. ನಿಮ್ಮೆಲ್ಲರ ಆಶೀರ್ವಾದಿಂದ ಪ್ರಾಮಾಣಿಕನಾಗಿ ಇರುತ್ತೇನೆ. ನನ್ನ ವಿರುದ್ಧ ಆರೋಪಗಳಿದ್ದರೆ ದಾಖಲೆ ಸಹಿತ ದೂರು ಕೊಡಿ. *ರಾಜ್ಯದಲ್ಲೇ ಪಶುವೈದ್ಯರ ಕೊರತೆ ಇದೆ. ಹೀಗಾಗಿ ಜಿಲ್ಲೆಯ ಕೆಲವು ಪಶು ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡಲು ಸಾಧ್ಯವಾಗಿಲ್ಲ. ಕುರಿಕೋಟಾ ಸೇತುವೆ ದುರಸ್ತಿಯನ್ನು ನಿಗದಿತ ಅವಧಿಗಿಂತ ಮೊದಲೇ ಮುಗಿಸಿದ್ದೇವೆ.*ನಾನು ಎಲ್ಲ ವರ್ಗದವರನ್ನು ಸಮಾನಾಗಿ ಕಂಡಿದ್ದೇನೆ. ಕೊಂಚಾವರಂ ತಾಂಡಾ ಅಭಿವೃದ್ಧಿ ಚವ್ಹಾಣ್ ತಂದ 10 ಕೋಟಿ ರೂಪಾಯಿ ಎಲ್ಲಿ ಹೋಯಿತು? ಎಂದು ತಿಳಿಸಲಿಬಿಎಸ್‌ಆರ್ ಪಕ್ಷದ ಬಾಬು ಹೊನ್ನಾನಾಯಕ, ಎಸ್‌ಯುಸಿಐ ಅಭ್ಯರ್ಥಿ  ನಿಂಗಣ್ಣ ಎಸ್. ಜಂಬಗಿ, ಬಿ.ಪಿ.ಪಿ.ಯ  ಲಕ್ಷ್ಮಣ ಕಿಶನ ರಾಠೋಡ, ಪಕ್ಷೇತರರಾದ ನಾಗೇಂದ್ರಪ್ಪ ಹಣಮಂತ ವಡ್ಡರ ನದೀಕ್, ಟಿ.ಎನ್. ರಾಠೋಡ,  ಶಿವಶರಣಪ್ಪ ಮತ್ತು ಸತೀಶ ಬಸವರಾಜ ಸಿಂಧೆ ಹಾಜರಿದ್ದು, ಕುರಿಕೋಟಾ ಸೇತುವೆ, ಗ್ರಾಮೀಣ ರಸ್ತೆ ಅಭಿವೃದ್ಧಿ, ರೈತರಿಗೆ ನೆರವು, ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ, ಶಿಕ್ಷಣಕ್ಕೆ ಆದ್ಯತೆ, ಹಳ್ಳಿಗೆ ವಾಹನ ಸೌಕರ್ಯ, ಬೀದರ್-ಗುಲ್ಬರ್ಗ ರೈಲು ಹಳಿ ಕಾಮಗಾರಿ ಪೂರ್ಣ, ಸೂಕ್ತ ಬೆಂಬಲ ಬೆಲೆಗೆ ಯತ್ನಿಸುವ ಭರವಸೆಗಳನ್ನು ನೀಡಿದರು. ಕಾಂಗ್ರೆಸ್‌ನ  ಜಿ. ರಾಮಕೃಷ್ಣ, ಜೆಡಿಎಸ್‌ನ ಡಿ.ಜಿ. ಸಾಗರ ಮತ್ತಿತರರು ಗೈರಾಗಿದ್ದರು.

ಪ್ರತಿಕ್ರಿಯಿಸಿ (+)