ಭಾನುವಾರ, ಮೇ 16, 2021
22 °C

ಶಾಲಾ ಪ್ರಾರಂಭೋತ್ಸವ: ನೀರಸ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: 2013-14ನೇ ಸಾಲಿನ ಶೈಕ್ಷಣಿಕ ವರ್ಷದ `ಶಾಲಾ ಪ್ರಾರಂಭೋತ್ಸವ'ಕ್ಕೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಬಹುತೇಕ ಶಾಲೆಗಳು ಮಕ್ಕಳ ಹಾಜರಾತಿ ಇಲ್ಲದೇ ಬಿಕೋ ಎನ್ನುತ್ತಿದ್ದರೆ, ಕೆಲವು ಶಾಲೆಗಳಲ್ಲಿ ಸಿದ್ಧತೆಯೂ ಕಂಡುಬರಲಿಲ್ಲ.ಗಂಗಾ ನಗರ, ಸುಂದರ ನಗರ, ಜಗತ್ ಬಡಾವಣೆ, ಬ್ರಹ್ಮಪುರ, ನಾಟೀಕಾರ್ ಓಣಿ, ಸೂಪರ್ ಮಾರುಕಟ್ಟೆ, ಬಡಾವಣೆಗಳು ಸೇರಿದಂತೆ ಬಹುತೇಕ ಎಲ್ಲ ಶಾಲೆಗಳು ಆರಂಭಗೊಂಡಿದ್ದರೂ ಮಕ್ಕಳ ಸಂಖ್ಯೆ ಕಡಿಮೆ ಇತ್ತು. ಶಾಲೆಗೆ ಬಂದ ಮಕ್ಕಳಿಗೆ ಸಿಹಿ ನೀಡಿ ಶಿಕ್ಷಕರು ಸ್ವಾಗತಿಸಿದರು.ಶಾಲಾ ಆರಂಭೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲೂ ಯಾವುದೇ ಜಾಥಾ- ಮೆರವಣಿಗೆಗಳು ಕಂಡು ಬರಲಿಲ್ಲ. ಇನ್ನೊಂದೆಡೆ ಖಾಸಗಿ ಶಾಲೆಗಳು ಈಗಾಗಲೇ ಆರಂಭಗೊಂಡಿರುವ ಕಾರಣ ಬಹುತೇಕ ಜನರಿಗೆ `ಶಾಲಾ ಪ್ರಾರಂಭೋತ್ಸವ'ವು ಅರಿವಿಗೇ ಬರಲಿಲ್ಲ. ಉಳಿದಂತೆ ಬಡ ಕುಟುಂಬದಿಂದ ಶಾಲೆಗೆ ಬರುವ ಮಕ್ಕಳು ಆರಂಭಕ್ಕೆ ಜೂನ್‌ಗಾಗಿ ಕಾಯುತ್ತಿದ್ದಾರೆ. ಜಿಲ್ಲೆಯಲ್ಲಿ 1,138 ಪ್ರಾಥಮಿಕ, 1,596 ಹಿರಿಯ ಪ್ರಾಥಮಿಕ, 696 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 3,430 ಶಾಲೆಗಳಿವೆ.ಸ್ವಲ್ಪ ಹಿನ್ನಡೆ: `ಈ ಬಾರಿ ಮೇ ಆರಂಭದಲ್ಲಿ ಚುನಾವಣೆ ಕೆಲಸ ಇದ್ದ ಕಾರಣ ಶಾಲೆ ಪ್ರಾರಂಭೋತ್ಸವದ ಸಿದ್ಧತೆಯಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಮೇ 24ರಂದು ಸಭೆ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉಳಿದಂತೆ ಸಮವಸ್ತ್ರಗಳು ಬಂದಿವೆ. ಶೇ 80ರಷ್ಟು ಪುಸ್ತಕಗಳು ಬಂದಿವೆ. ಕೆಲವು ಹೊಸ ಪಠ್ಯಕ್ರಮದ ಪುಸ್ತಕಗಳು ಮಾತ್ರ ಬರಬೇಕಾಗಿವೆ.ಬಿಸಿಲು, ವಲಸೆ ಕಾರ್ಮಿಕರು ಮತ್ತಿತರ ಕಾರಣದಿಂದ ಗುಲ್ಬರ್ಗದಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಒಂದೆರಡು ದಿನ ತಡವಾಗಿ ಶಾಲೆಗೆ ಬರುತ್ತಾರೆ. ಸೋಮವಾರ (ಜೂ.3) ಹೆಚ್ಚಿನ ಹಾಜರಾತಿ ಇರುವ ನಿರೀಕ್ಷೆ ಇದೆ. ಇಲಾಖೆಯ ಪ್ರಕರಣಗಳು ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಕಾರಣ ನಾನು ವೈಯಕ್ತಿಕ `ಶಾಲಾ ಪ್ರಾರಂಭೋತ್ಸವ'ದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.' ಎಂದು ಸಾರ್ವಜನಿಕ ಶಿಕ್ಷಣ ಇಲಾಖಾ ಉಪನಿರ್ದೇಶಕ ಟಿ. ಜಯರಾಮ ಹೇಳಿದರು.  `ಜಿಲ್ಲೆಯಲ್ಲಿ 1,112 ಪ್ರಾಥಮಿಕ ಹಾಗೂ 237 ಪ್ರೌಢ ಶಿಕ್ಷಕರ ಕೊರತೆ ಇದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಕಳುಹಿಸಿದ್ದೇವೆ. ಶಿಕ್ಷಕರ ಹೊಂದಾಣಿಕೆ ಹಾಗೂ ತಾತ್ಕಾಲಿಕ ನೇಮಕಾತಿ ಮೂಲಕ ಶಿಕ್ಷಕರ ಕೊರತೆಯ ಈ ವರ್ಷದ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.