ಸೋಮವಾರ, ಮೇ 17, 2021
26 °C

ಜೂ.8ರಿಂದ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗುಲ್ಬರ್ಗ ಜಿಲ್ಲಾ ಘಟಕದ ಆಶ್ರಯದಲ್ಲಿ ನಗರದ ಭಾರತೀಯ ಎಂಜಿನಿಯರ್ಸ್‌ ಸಂಸ್ಥೆಯ ವಿಶ್ವೇಶ್ವರಯ್ಯ ಭವನದ `ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನ'ವು ಜೂ. 8  ಮತ್ತು 9ರಂದು ನಡೆಯಲಿದೆ.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ ಮಾತನಾಡಿ, `ವಿಲಾಸವತಿ ಖೂಬಾ ಸರ್ವಾಧ್ಯಕ್ಷತೆ ವಹಿಸುವರು. ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು ಜೂ. 8 ರಂದು ಬೆಳಿಗ್ಗೆ 10ಕ್ಕೆ ಸಮ್ಮೇಳನದ ಉದ್ಘಾಟನೆ ಮಾಡುವರು.

ಇಳಕಲ್‌ನ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಮಹಾಂತ ಶಿವಯೋಗಿ, ಗುರುಮಹಾಂತ ಶಿವಯೋಗಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು. ಚನ್ನಬಸಪ್ಪ, ಉಪಾಧ್ಯಕ್ಷ ಚಂದ್ರಕಾಂತ ಬೆಲ್ಲದ ಪಾಲ್ಗೊಳ್ಳುವರು. ಪರಿಷತ್ತಿನ ಪ್ರಕಟಣೆ `ಶರಣ ಕಲ್ಯಾಣ'ವನ್ನು ಶಾಸಕ ಬಿ.ಆರ್.ಪಾಟೀಲ ಹಾಗೂ ಸ್ಮರಣ ಸಂಚಿಕೆಯನ್ನು ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ.ನಾಗಾಬಾಯಿ ಬುಳ್ಳಾ ಬಿಡುಗಡೆ ಮಾಡುವರು.

ಚಿತ್ರಕಲಾ ಪ್ರದರ್ಶನವನ್ನು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಶೀಲ್ ಜಿ. ನಮೋಶಿ ಹಾಗೂ ಪುಸ್ತಕ ಮಳಿಗೆಯನ್ನು ಮದರ್ ತೆರೇಸಾ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಎಂ.ವೈ.ಪಾಟೀಲ್ ಉದ್ಘಾಟಿಸುವರು. ಇದಕ್ಕೆ ಮೊದಲು ಬೆಳಿಗ್ಗೆ 9ಕ್ಕೆ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ರಾಷ್ಟ್ರಧ್ವಜ ಹಾಗೂ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಪರಿಷತ್ ಧ್ವಜ ಆರೋಹಣ ಮಾಡುವರು ಎಂದು ವಿವರ ನೀಡಿದರು.ಮಧ್ಯಾಹ್ನ 2.30ಕ್ಕೆ ಡಾ.ಕಾಶೀನಾಥ ಅಂಬಲಗೆ ಅಧ್ಯಕ್ಷತೆಯಲ್ಲಿ ಮೊದಲ ವಿಚಾರಗೋಷ್ಠಿ, ಸಂಜೆ 5 ಗಂಟೆಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಈ ನಡುವೆ ಮಧ್ಯಾಹ್ನ 2ಕ್ಕೆ ವಚನ ಸಂಗೀತ ಹಾಗೂ 4.30ಕ್ಕೆ ಸಂಗೀತ ಕಾರ್ಯಕ್ರಮ, ಸಂಜೆ 5.30ಕ್ಕೆ ನೃತ್ಯರೂಪಕ, ಹಾಸ್ಯ ಲಹರಿ, ವಚನ ಸಂಗೀತ ಆಯೋಜಿಸಲಾಗಿದೆ ಎಂದು ಹೇಳಿದರು. ಜೂ.9ರಂದು ಬೆಳಿಗ್ಗೆ 10ಕ್ಕೆ ಸಾಹಿತಿ ಸೂಗಯ್ಯ ಹಿರೇಮಠ ಅಧ್ಯಕ್ಷತೆಯಲ್ಲಿ ಎರಡನೇ ವಿಚಾರ ಗೋಷ್ಠಿ, ಬಳಿಕ ಶಂಕರ ದೇವನೂರ ಅವರಿಂದ ವಿಶೇಷ ಉಪನ್ಯಾಸ, ಮಧ್ಯಾಹ್ನ 12 ಗಂಟೆಗೆ ಆಧುನಿಕ ವಚನ ಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 2ಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ವಿ.ಜಿ. ಪೂಜಾರ ಅಧ್ಯಕ್ಷತೆಯಲ್ಲಿ ಮೂರನೇ ವಿಚಾರಗೋಷ್ಠಿ ಹಾಗೂ ಸಂಜೆ 4ಕ್ಕೆ ವಚನ ಸಂಗೀತ ನಡೆಯಲಿದೆ ಎಂದು ವಿವರಿಸಿದರು.ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಸಮಾರೋಪ ಭಾಷಣ ಮಾಡುವರು. ಸುಲಫಲ ಮಠದ ಮಹಾಂತ ಶಿವಾಚಾರ್ಯ ಸಾನಿಧ್ಯ ವಹಿಸುವರು. ಶಾಸಕರಾದ ಮಾಲೀಕಯ್ಯ ಗುತ್ತೇದಾರ್ ಹಾಗೂ ಡಾ.ಅಜಯ್‌ಸಿಂಗ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಪ್ರಿಯಾಂಕ ಖರ್ಗೆ ಎ.ಬಿ.ಕೆ. ಆಲ್ದಾಳ, ಆರ್.ಎಸ್.ಸ್ವಾಮಿ, ಮಹಾಲಿಂಗಪ್ಪ ಇಂಗಿನಶೆಟ್ಟಿ ಮತ್ತಿತರರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.ವಿಶೇಷ: ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಮಾತನಾಡಿ, `ಸಮ್ಮೇಳನದ ಅಂಗವಾಗಿ ವಚನ ಆಧರಿಸಿ ಚಿತ್ರ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತ ಐದು ಕಲಾಕೃತಿಗಳಿಗೆ ತಲಾ 2 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಈ ಎಲ್ಲ ಕಲಾಕೃತಿಗಳ ಪ್ರದರ್ಶನವನ್ನು ಸಮ್ಮೇಳನದಲ್ಲಿ ಆಯೋಜಿಸಲಾಗಿದೆ. ಪುಸ್ತಕ ಮಾರಾಟ ಮಳಿಗೆಯು ಕೇವಲ ಶರಣ ಸಾಹಿತ್ಯಕ್ಕೆ ಸೀಮಿತವಲ್ಲ. ನಾಡಿನ ಎಲ್ಲ ಸಾಹಿತ್ಯ ಕೃತಿಗಳೂ ಇರಲಿವೆ. ಅಲ್ಲದೇ 1967ರಲ್ಲಿ ಸಿದ್ದಯ್ಯ ಪುರಾಣಿಕ ಹಾಗೂ ಬಿ.ಎಸ್.ಸನದಿ ಬರೆದ ವಚನಗಳ ಮರುಮುದ್ರಿತ ಕೃತಿಗಳ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.ಫೆ.28 ಮತ್ತು 29 ರಂದು ಸಮ್ಮೇಳನ ಆಯೋಜಿಸಲಾಗಿತ್ತು. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಬೇಕಾಯಿತು ಎಂದ ಅವರು, ವಿವಿಧ ಗೋಷ್ಠಿಗಳಲ್ಲಿ ರಾಮಪುರ ಬಕ್ಕಪ್ಪ, ಐನೂಲಿ ಕರಿಸಬಸವಾಚಾರ್ಯ, ಹರ್ಡೇಕರ್ ಮಂಜಪ್ಪ, ಜಯದೇವಿತಾಯಿ ಲಿಗಾಡೆ ಅವರ ಜೀವನ ಹಾಗೂ ಸಾಧನೆ ಕುರಿತು ವಿಚಾರಗಳು ಮಂಡನೆಯಾಗಲಿವೆ ಎಂದರು.ಸ್ವಾಗತ ಸಮಿತಿ ಪದಾಧಿಕಾರಿಗಳಾದ ಡಿ.ವಿ.ಪಾಟೀಲ, ಪ್ರೊ. ಕಲ್ಯಾಣರಾವ ಜಿ. ಪಾಟೀಲ, ಕೆ.ವಿಶ್ವನಾಥ, ಶಿವರಾಜ ಅಂಡಗಿ, ಮಾರುತಿರಾವ ಡಿ. ಮಾಲೆ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.