ಶನಿವಾರ, ಮೇ 8, 2021
26 °C

ಗಡಿ ಮೀರದ ಅಂಕಣ ಸಾಹಿತ್ಯ

ನಾಗರಾಜ ಚಿನಗುಂಡಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ತೊಟ್ಟಿಲು ಹೊತ್ಕೊಂಡು, ತರ್ವಬಣ್ಣ ಉಟ್ಕೊಂಡು, ಅಪ್ಪ ಕೊಟ್ಟೆಮ್ಮೆ ಹೊಡ್ಕೊಂಡು, ತೌರೂರ `ತಿಟ್ಹತ್ತಿ ತಿರುಗಿ' ನೋಡ್ಯಾಳೋ...ಈ ಗರತಿ ಪದಕ್ಕೆ ಪೂರಕವಾಗಿ `ಕಲಬುರ್ಗಿ ಸಂಕೀರ್ಣ ಸಾಹಿತ್ಯ'ವನ್ನು `13ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ'ದ 6ನೇ ಗೋಷ್ಠಿಯಲ್ಲಿ ಕೆಲವು ಲೇಖಕರು `ತಿಟ್ಹತ್ತಿ ತಿರುಗಿ..'  ಮೆಲುಕು ಹಾಕಿದರು.`ರಾಜ್ಯಮಟ್ಟದಲ್ಲಿ ಗುರುತಿಸುವ ಮಟ್ಟಕ್ಕೆ ನಿಲ್ಲಬಲ್ಲ ಅಂಕಣಗಳನ್ನು, ಜೀವನ ಚರಿತ್ರೆಗಳನ್ನು, ವಿಮರ್ಶಾ ಕೃತಿಗಳನ್ನು ಹಾಗೂ ಅಭಿನಂದನಾ ಗ್ರಂಥಗಳನ್ನು ಜಿಲ್ಲೆಯ ಯಾವುದೇ ಲೇಖಕರು, ಕವಿಗಳು ಹಾಗೂ ಪತ್ರಕರ್ತರು ಬರೆಯಲು ಸಾಧ್ಯವಾಗಿಲ್ಲ' ಎನ್ನುವ ಕಳವಳವನ್ನು ಎಲ್ಲ ಲೇಖಕರು ವ್ಯಕ್ತಪಡಿಸಿದರು. ಡಾ. ಹಾ.ಮಾ. ನಾಯಕ, ವೀರಣ್ಣ ದಂಡೆ, ಲಿಂಗಣ್ಣ ಸತ್ಯಂಪೇಟೆ, ಪಿ.ಎಂ. ಮಣ್ಣೂರ ಸೇರಿದಂತೆ ಅನೇಕರು ಪತ್ರಿಕೆಗಳಿಗೆ ಅಂಕಣಗಳನ್ನು ಬರೆದಿದ್ದಾರೆ.ಬಹುತೇಕರ ಅಂಕಣ ಬರಹಗಳು ಪುಸ್ತಕಗಳಾಗಿ ಪ್ರಕಟವಾಗಿವೆ. ಜಿಲ್ಲೆಯಲ್ಲಿ ಅಂಕಣ ಸಾಹಿತ್ಯ ವಿಫುಲವಾಗಿ ಮೂಡಿ ಬಂದಿದೆ.  ಆದರೆ ಈ ಕೃತಿಗಳೆಲ್ಲ ಗುಲ್ಬರ್ಗ ಜಿಲ್ಲಾ  ಸಾಹಿತ್ಯದತ್ತ ರಾಜ್ಯದ ಗಮನ ಸೆಳೆಯುವ ಮಟ್ಟಕ್ಕೆ ನಿಲ್ಲಲಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.ಒಬ್ಬ ವ್ಯಕ್ತಿ ತನ್ನದೇ ಆದ ಕ್ಷೇತ್ರದಲ್ಲಿ ಮಾಡಿದ ಸಾಧನೆ ಕುರಿತು ಬರೆದಾಗ, ವ್ಯಕ್ತಿಯ ಸಮಗ್ರ ಪರಿಚಯದ ಜತೆಗೆ, ಆ ವ್ಯಕ್ತಿ ಬದುಕಿದ ಕಾಲಘಟ್ಟದ ಸಮಗ್ರ ಮಾಹಿತಿ ದಾಖಲಿಸಿ ಪ್ರಕಟಿಸಿದರೆ ಮಾತ್ರ ಅದು ಪರಿಪೂರ್ಣ ಜೀವನ ಚರಿತ್ರಾ ಗ್ರಂಥ ಎನಿಸಿಕೊಳ್ಳುತ್ತದೆ. ಗುಲ್ಬರ್ಗ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಇಂತಹ ಜೀವನ ಚರಿತ್ರೆ, ಆತ್ಮ ಚರಿತ್ರೆ ಹಾಗೂ ಅಭಿನಂದನಾ ಗ್ರಂಥ ಹೊರಬಂದಿಲ್ಲ ಎನ್ನುವ ಆತಂಕವನ್ನು ಪ್ರೊ. ಶಿವಶರಣ ಮುಳೆಗಾಂವ್ ವ್ಯಕ್ತಪಡಿಸಿದರು. ಸಾಹಿತಿಗಳ ಬಗ್ಗೆ ಅಷ್ಟೆ ಅಲ್ಲದೆ ರಾಜಕಾರಣಿಗಳ ಬಗ್ಗೆ, ಉದ್ಯಮಿಗಳ ಬಗ್ಗೆ ಜೀವನ ಚರಿತ್ರೆಗಳು ಜಿಲ್ಲೆಯಲ್ಲಿ ಪ್ರಕಟವಾಗಿವೆ.ಆದರೆ ಇಡೀ ನಾಡು ತಿರುಗಿ ನೋಡುವ ಜೀವನ ಚರಿತ್ರೆ ಬರೆಯಲು ನಮಗೆ ಸಾಧ್ಯವಾಗಿಲ್ಲ. ಕುವೆಂಪು ಅವರು ಬರೆದ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯಲ್ಲಿ ಆ ಕಾಲಘಟ್ಟ ಹಾಗೂ ವ್ಯಕ್ತಿತ್ವದ ಸವಿವರ ಕಣ್ಣಮುಂದೆ               ಬರುತ್ತದೆ. ಈ ಭಾಗದಲ್ಲಿ ಡಾ. ಎಚ್.ಟಿ. ಪೋತೆ ಅವರು ಬರೆದ ಕೆಲವು ಜೀವನ ಚರಿತ್ರೆ ಕೃತಿಗಳನ್ನು ಬರೆದಿದ್ದಾರೆ.ವ್ಯಕ್ತಿಯೊಂದಿಗೆ ಕಾಲಘಟ್ಟದ ಅವಲೋಕನ ಮಾಡಲು ಅವುಗಳಲ್ಲಿ ಸಾಧ್ಯವಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಸಾಹಿತ್ಯ ಪ್ರಕಾರದಲ್ಲಿ ವಿಮರ್ಶಾ ಕೃತಿಗೆ ತನ್ನದೇ ಆದ ವೈಶಿಷ್ಯವಿದೆ. ಗುಲ್ಬರ್ಗ ಜಿಲ್ಲೆಯಲ್ಲಿ ಸಾಹಿತ್ಯ ವಿಮರ್ಶೆ ತುಂಬಾ ಬಡವಾಗಿದೆ.ಈ ಭಾಗವು ಹೈದರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದರಿಂದ ಹಾಗೂ ಕನ್ನಡ ಶಾಲೆಗಳ ಕೊರತೆಯಿಂದಾಗಿ ಸಾಹಿತಿಗಳು, ಕವಿಗಳು ಮುಖ್ಯವಾಹಿನಿಗೆ ಬರುವುದು ತುಂಬಾ ತಡವಾಗಿದ್ದು ಇದಕ್ಕೆ ಕಾರಣ  ಇರಬಹುದು.

ಯಾವುದಾದರೂ ಕೃತಿ ಪ್ರಕಟವಾದಾಗ, ಅದನ್ನು ಓದಿ ವಿಮರ್ಶಿಸುವ, ತಿದ್ದಿ ಹೇಳುವ ವಾತಾವರಣ ಮೊದಲಿನಿಂದಲೂ ಬೆಳೆದುಬಂದಿಲ್ಲ ಎನ್ನುವ ಸ್ಪಷ್ಟ ವಿಚಾರವನ್ನು ಲೇಖಕ ಪ್ರೊ.ಶಿವರಾಜ್ ಪಾಟೀಲ ಹೇಳಿದರು.ಕವಿರಾಜಮಾರ್ಗದ ಮೂಲಕ ಕಾವ್ಯ ಮತ್ತು ಕವಿ ಹೇಗಿರಬೇಕೆಂದು ಹೇಳುವ ಮೊದಲ ವಿಮರ್ಶಾ ಕೃತಿ ಈ ಭಾಗದಲ್ಲೆ ಹುಟ್ಟಿಕೊಂಡಿತು. ಆದರೂ ಸಾಹಿತ್ಯದ ಕುರಿತು ಚರ್ಚೆ, ವಿಮರ್ಶೆ ಬೆಳೆಯಲೇ ಇಲ್ಲ. ನಿಜಾಮನ ನಾಡಿನಲ್ಲಿ ಕಠೋರವಾಗಿ, ವಸ್ತುನಿಷ್ಠವಾಗಿ ಹೇಳುವುದು ದೊಡ್ಡ ಅಪರಾಧ ಎನ್ನುವಂತೆ ಭಾವಿಸಲಾಗುತ್ತದೆ. ಆದರೂ ಶೈಕ್ಷಣಿಕ ಶಿಸ್ತಿಗೆ ಒಳಪಟ್ಟು ಕೆಲವು ಉಪನ್ಯಾಸಕರು ವಿಮರ್ಶಾ ಗ್ರಂಥಗಳನ್ನು   ರಚಿಸಿದ್ದಾರೆ.ಡಾ.ಬಸವರಾಜ ಸಬರದ ಹಾಗೂ ಡಾ. ಮೀನಾಕ್ಷಿ ಬಾಳಿ ಅವರ ವಿಮರ್ಶಾ ಕೃತಿಗಳು ರಾಜ್ಯಮಟ್ಟದಲ್ಲಿ ಚರ್ಚೆ ಹುಟ್ಟುಹಾಕುವ ಮಟ್ಟದಲ್ಲಿ ಮೂಡಿ ಬಂದಿವೆ ಎಂದರು.ವಿವಿಧ ಲೇಖಕರು ವ್ಯಕ್ತಪಡಿಸಿದ ಜಿಲ್ಲೆಯ ಸಂಕೀರ್ಣ ಸಾಹಿತ್ಯ ಬಡವಾಗಿದೆ ಎನ್ನುವುದಕ್ಕೆ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ನಾಗಾಬಾಯಿ ಬುಳ್ಳಾ ಸಹಮತ ವ್ಯಕ್ತಪಡಿಸಿದರು. `ಹಾಲುಂಡ ತೌರಿಗೆ ಏನೆಂದು ಹರಸಲಿ.. ಕರ್ಕಿಯ ಕುಡಿಯಂಗ ಹಬ್ಬಲೀ ಅವರ ರಸಬಳ್ಳಿ..' ಗರತಿಯ ಪದ ಹೇಳುವ ಮೂಲಕ ಜಿಲ್ಲೆಯ ಸಾಹಿತ್ಯ ಮುಂದಿನ ದಿನದಲ್ಲಾದರೂ ಬೆಳೆಯಲಿ ಎನ್ನುವ ಆಶಾಭಾವ ವ್ಯಕ್ತಪಡಿಸಿದರು.  ಜಿಲ್ಲೆಯ ಸಾಹಿತ್ಯ ಕ್ಷೇತ್ರ ಬೆಳೆಯದಿರುವುದಕ್ಕೆ ಯುವ ಪೀಳಿಗೆಯಲ್ಲಿನ ಅಧ್ಯಯನ ಕೊರತೆಯೇ ಕಾರಣ. ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಶೀಲರಾಗಬೇಕು.ಓದಿಕೊಂಡು ಬರೆಯುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದರು. ಜಯಪ್ಪ ಚಾಪಲ್ ನಿರೂಪಿಸಿದರು. ಲೇಖಕಿ ಸಂಧ್ಯಾ ಹೊನಗುಂಟಿಕರ್ ಸ್ವಾಗತಿಸಿದರು.ಲಿಂಗರಾಜ ಸಿರಗಾಪುರ ವಂದಿಸಿದರು. ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.