ಮಂಗಳವಾರ, ಮೇ 18, 2021
22 °C
ವೃತ್ತಕ್ಕೆ ಮದರ್ ತೆರೇಸಾ ನಾಮಕರಣಕ್ಕೆ ವಿರೋಧ

ಸಮಾರಂಭಕ್ಕೆ ಅಡ್ಡಿ: ಕ್ರೈಸ್ತರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಿಲ್ಲಾ ಕೋಟ್ ಸಂಕೀರ್ಣ, ಎಸ್‌ವಿಪಿ ವೃತ್ತ ಹಾಗೂ ಆಳಂದ ರಸ್ತೆ ಸೇರುವ ವೃತ್ತಕ್ಕೆ `ಮದರ್ ತೆರೇಸಾ ವೃತ್ತ' ಎಂದು ನಾಮಕರಣ ಮಾಡಲು ಮಂಗಳವಾರ ಸಂಜೆ ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ (ಎಕೆಯುಸಿಎಫ್‌ಎಚ್) ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಕೆಲವು ಅಡ್ಡಿಪಡಿಸಿ, ಬ್ಯಾನರ್ ಹರಿದು ದಾಂಧಲೆ ನಡೆಸಿದರು.ಇದನ್ನು ಪ್ರತಿಭಟಿಸಿ ಎಕೆಯುಸಿಎಫ್‌ಎಚ್ ಸದಸ್ಯರು ಸ್ಥಳದಲ್ಲಿ ಮಾನವ ಸರಪಳಿ ನಿರ್ಮಿಸಿದರು.ರಸ್ತೆಗಳು ಸೇರುವ ಮಧ್ಯದಲ್ಲಿ ಸಣ್ಣ ಕಟ್ಟೆ ನಿರ್ಮಿಸಿ ನಾಮಫಲಕ ಇರಿಸಲಾಗಿತ್ತು. ಸಮಾರಂಭ ನಡೆಸುವ ಸಲುವಾಗಿ ಪಕ್ಕದಲ್ಲಿಯೇ ಶಾಮಿಯಾನ ಹಾಕಲಾಗಿತ್ತು. ಆದರೆ, ಸಂಜೆ 5.30 ರ ಸುಮಾರಿಗೆ ಕೆಲವರು ಏಕಾಏಕಿ ಬಂದು ದಾಳಿ ಮಾಡಿ ಕಟ್ಟೆಯನ್ನು ಒಡೆದು, ನಾಮಫಲಕವನ್ನು ಕಿತ್ತು ಹಾಕಿ ದಾಂಧಲೆ ನಡೆಸಿದ್ದಾರೆ. ಬಳಿಕ ಕಲ್ಲು ಎಸೆದಿದ್ದಾರೆ. ಇದನ್ನು ಖಂಡಿಸಿ ಸ್ಥಳದಲ್ಲಿದ್ದ ಎಕೆಯುಸಿಎಫ್‌ಎಚ್‌ನ ಸದಸ್ಯರು ಮಾನವ ಸರಪಳಿ ರಚಿಸಿ, ರಸ್ತೆ ತಡೆ ನಡೆಸಿದರು.ಮನವಿ: ಘಟನೆ ಬಳಿಕ ವಕೀಲರ ಬಳಿ ತೆರಳಿದ ಬಿಷಪ್ ರಾಬರ್ಟ್ ಮಿರಾಂಡಾ ಹಾಗೂ ಇತರ ಧರ್ಮಗುರುಗಳು `ದೇಶದ ಬಡವರಿಗೆ ಸೇವೆ ಸಲ್ಲಿಸಿದ ಮದರ್ ತೆರೇಸಾ ಹೆಸರು ಇಡುತ್ತಿದ್ದೇವೆ. ಯಾವ ಕಾರಣಕ್ಕೆ ದಾಳಿ ನಡೆಸಿದ್ದೀರಿ?' ಎಂದು ಪ್ರಶ್ನಿಸಿದರು.`ಈ ವೃತ್ತ ಕೋರ್ಟ್ ಮುಂದೆ ಇದೆ. ಹೀಗಾಗಿ ಯಾವುದೇ ಹೆಸರನ್ನು ಇಡಬಾರದು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಯಾವುದೇ ಮೂರ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸಬಾರದು' ಎಂದು ವಕೀಲರ ಸಂಘದ ಪದಾಧಿಕಾರಿಗಳು ಉತ್ತರಿಸಿದರು.`ಮೂರ್ತಿ ಸ್ಥಾಪಿಸ ಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಾಲಯದ ಆದೇಶದ ಅನ್ವಯ ನಾವು ಮೂರ್ತಿ ಪ್ರತಿಷ್ಠಾಪಿಸಲಿಲ್ಲ. ಕೋರ್ಟ್ ಮತ್ತು ಕಾನೂನಿಗೆ ಬದ್ಧರಾಗಿದ್ದೇವೆ' ಎಂದು ಬಿಷಪ್ ರಾಬರ್ಟ್ ಮಿರಾಂಡಾ ಪ್ರತಿಕ್ರಿಯಿಸಿದರು.`ನಾವು ಕಾನೂನು ಬದ್ಧವಾಗಿ ರಾಜ್ಯ ಸರ್ಕಾರ ಮತ್ತು ಗುಲ್ಬರ್ಗ ಮಹಾನಗರ ಪಾಲಿಕೆಯ ಅನುಮತಿ ಪಡೆದಿದ್ದೇವೆ. ಈ ಹೆಸರಿಡುವ ಕುರಿತು ಸಾರ್ವಜನಿಕರ ಪರ-ವಿರೋಧವನ್ನು ಜಾಹೀರಾತು ಮೂಲಕ  ಆಹ್ವಾನಿಸಲಾಗಿತ್ತು. ಕಾನೂನು ರೀತಿಯಲ್ಲಿ ನೀವು ವಿರೋಧ ವ್ಯಕ್ತಪಡಿಸಲಿಲ್ಲ.

ನ್ಯಾಯಾಲಯದ ಮೂಲಕವೂ ವಿರೋಧ ತರಲಿಲ್ಲ. ವಕೀಲರೇ ಕಾನೂನು ಗೌರವಿಸದೇ ದಾಂಧಲೆ ನಡೆಸಿದರೆ ಹೇಗೆ?' ಎಂದು ಧರ್ಮಗುರು ವಿಕ್ಟರ್ ಪ್ರಶ್ನಿಸಿದರು. `ಹಕ್ಕು ಇದೆ?' ಎಂದಷ್ಟೇ ವಕೀಲರು ಉತ್ತರಿಸಿದರು. ಸಮಸ್ಯೆ ಇತ್ಯರ್ಥ ಕಾಣದೇ ಬಿಷಪ್ ಹಾಗೂ ಧರ್ಮಗುರುಗಳು ತೆರಳಿದರು.ಅನುಮತಿ: `ಈ ವೃತ್ತಕ್ಕೆ ಮದರ್ ತೆರೇಸಾ ವೃತ್ತ ಎಂದು ಹೆಸರಿಡುವ ಸಲುವಾಗಿ ಕ್ರೈಸ್ತ ಧರ್ಮದ ರೋಮನ್ ಕ್ಯಾಥೊಲಿಕ್ ಪಂಗಡಕ್ಕೆ ಸೇರಿದ ಎಕೆಯುಸಿಎಫ್‌ಎಚ್ ಮುಖ್ಯಸ್ಥ ಬಿಷಪ್ ರಾಬರ್ಟ್ ಮಿರಾಂಡಾ ಅವರು  ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಗುಲ್ಬರ್ಗ ಮಹಾನಗರ ಪಾಲಿಕೆ ಸೂಚಿಸಿದ್ದು, 27 ಸೆಪ್ಟೆಂಬರ್ 2012ರಂದು ವೃತ್ತಕ್ಕೆ ಹೆಸರಿಡಲು ಅನುಮತಿ ದೊರೆತಿತ್ತು.12 ಜೂನ್ 2013ರಂದು ಮತ್ತೆ ಪಾಲಿಕೆಗೆ ಪತ್ರ ಬರೆದು ಸ್ಥಳ ಗುರುತಿಸಲು ಅನುಮತಿ ಪಡೆದಿದ್ದರು' ಎಂದು ಹೇಳಿದ ಧರ್ಮಗುರು ವಿಕ್ಟರ್ ಅನುಮತಿ ಪತ್ರವನ್ನು ಪ್ರದರ್ಶಿಸಿದರು.ಗುಲ್ಬರ್ಗ, ಬೀದರ್, ವಿಜಾಪುರ ಹಾಗೂ ಯಾದಗಿರಿ ಜಿಲ್ಲೆಗಳ ವ್ಯಾಪ್ತಿ ಒಳಗೊಂಡ ಗುಲ್ಬರ್ಗ ಕ್ಯಾಥೋಲಿಕ್ ಧರ್ಮ ಪ್ರಾಂತ್ಯಕ್ಕೆ ಸೇರಿದ ಸಂತ ಮರಿಯಮ್ಮ ಪ್ರಧಾನಾಲಯದ ನೂತನ ಚರ್ಚ್ ಇಂದು (ಜೂ. 19) ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ 5 ಗಂಟೆಗೆ ವೃತ್ತ ನಾಮಕರಣ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಶಾಸಕ ದತ್ತಾತ್ರೇಯ ಪಾಟೀಲ ರೇವೂರ ವೃತ್ತವನ್ನು ಉದ್ಘಾಟಿಸಬೇಕಿತ್ತು.ಪ್ರತಿಕ್ರಿಯೆ: `ಕೆಲ ದುಷ್ಕರ್ಮಿಗಳು ನಮ್ಮ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ್ದಾರೆ. ದಾಂಧಲೆ ನಡೆಸಿ, ಹಲ್ಲೆ ನಡೆಸಿದ್ದಾರೆ. ನಾಮಫಲಕ ಕಿತ್ತುಕೊಂಡು ಹೋಗಿದ್ದಾರೆ' ಎಂದು ಬಿಷಪ್ ರಾಬರ್ಟ್ ಮಿರಾಂಡಾ ಆರೋಪಿಸಿದರು.`ನ್ಯಾಯಾಲಯ ಮುಂಭಾಗದ ವೃತ್ತಕ್ಕೆ ಯಾವುದೇ ಹೆಸರು ಇಡಬಾರದು. ಮುಖ್ಯ ರಸ್ತೆ ಇರುವ ಕಾರಣ ಮಧ್ಯದಲ್ಲಿ ಯಾವುದೇ ರಚನೆ ಮಾಡಬಾರದು ಎಂದು ಎಂದು ವಿನಂತಿಸಿದ್ದೆವು. ಹೀಗಾಗಿ ಪ್ರತಿಭಟಿಸಿದ್ದೇವೆ. ಆದರೆ ಆ ವೇಳೆಯಲ್ಲಿ ಕೆಲವು ದುಷ್ಕರ್ಮಿಗಳು ದಾಂಧಲೆ ನಡೆಸಿದ್ದಾರೆ. ನಾವು ಯಾವುದೇ ರೀತಿಯಲ್ಲಿ ಕಾನೂನು ಕೈಗೆತ್ತಿಕೊಂಡಿಲ್ಲ' ಎಂದು ಗುಲ್ಬರ್ಗ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಪಾಟೀಲ್ ಹೇಳಿದರು.`ಘಟನೆ ಬಗ್ಗೆ ಈ ತನಕ ಯಾವುದೇ ದೂರುಗಳು ಬಂದಿಲ್ಲ. ಕಲ್ಲು ತೂರಾಟ ನಡೆದಿಲ್ಲ. ದೂರು ನೀಡಿದರೆ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ' ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾಶಿನಾಥ ತಳಕೇರಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.