ವರ್ಷಕ್ಕೊಂದು ರೋಗ: ಮುಗಿಯದ ರಾಗ

7

ವರ್ಷಕ್ಕೊಂದು ರೋಗ: ಮುಗಿಯದ ರಾಗ

Published:
Updated:
ವರ್ಷಕ್ಕೊಂದು ರೋಗ: ಮುಗಿಯದ ರಾಗ

ಗುಲ್ಬರ್ಗ: ಬರ ಬಂದರೆ ಒಂದು, ನೆರೆಗೆ ಇನ್ನೊಂದು, ನೆರೆ-ಬರ ಇಲ್ಲದಿದ್ದರೆ ಮತ್ತೊಂದು. ಒಟ್ಟಾರೆ ಗುಲ್ಬರ್ಗದಲ್ಲಿ ಕಾಯಿಲೆಗೆ ಬರವಿಲ್ಲ. ಅದು ಪ್ರವಾಹದಂತೆ. ವರ್ಷಂಪ್ರತಿ ಬಂದರೂ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಎಚ್ಚೆತ್ತುಕೊಳ್ಳುವುದೇ ಇಲ್ಲ! ಕಳೆದ ವರ್ಷ ಮಲೇರಿಯಾ, ಅದಕ್ಕೆ ಹಿಂದೆ ಚಿಕೂನ್ ಗುನ್ಯಾ, ಈ ಬಾರಿ ಕಾಮಲೆ...ಬ್ರಹ್ಮಪುರ, ಶಹಾಬಜಾರ್, ರೋಜಾ, ಯಾದುಲ್ಲಾ, ಬಸವೇಶ್ವರ ನಗರ, ಮಹಾಲಕ್ಷ್ಮೀ ಲೇಔಟ್, ವಸಂತ ನಗರ, ರೈಲ್ವೆ ಪರಿಸರ, ಕೇಂದ್ರೀಯ ಬಸ್ ನಿಲ್ದಾಣ ಪರಿಸರ, ದರ್ಗಾ ಪರಿಸರ ಮತ್ತಿತರ ಕಡೆಗಳಲ್ಲಿ ‘ಹಳದಿ ಕಾಮಲೆ’ ಹಬ್ಬುತ್ತಿದೆ. ದಿನೇ ದಿನೇ ಪ್ರಕರಣಗಳು ಹೆಚ್ಚುತ್ತಿವೆ. ಹೆಪಿಟೈಟಸ್-ಎ ವೈರಾಣುನಿಂದ ಬಾಯಿಯಲ್ಲಿ ಸೇವಿಸುವ ಆಹಾರದ ಮೂಲಕ ಕಾಮಲೆ ಬರುತ್ತದೆ. ಇದನ್ನು ಕಾಮಲೆ, ಹಳದಿ ರೋಗ, ಜಾಂಡಿಸ್, ಕಾಮಣಿ... ಹೀಗೆ ಹಲವು ಹೆಸರಿನಿಂದ ಕರೆಯುತ್ತಾರೆ. ಸೂರ್ಯನಗರಿ ವೈಭವಕ್ಕೆ ಕಾಮಲೆಯ ಮುಸುಕು ಆವರಿಸುತ್ತಿದೆ.ವೈದ್ಯರು : ‘ತಿಂಗಳಿಗೆ 2-3ರಷ್ಟಿದ್ದ ಕಾಮಲೆ, ಈಗ ದಿನಕ್ಕೆ 4-5 ಪತ್ತೆಯಾಗುತ್ತಿದೆ’ ಎಂದು ವೆಂಕಟೇಶ್ ಕ್ಲಿನಿಕ್‌ನ ವೈದ್ಯ ಡಾ. ಎಸ್.ವಿ. ಓಂಕಾರ್ ಹೇಳುತ್ತಾರೆ. ಅವರ ಪ್ರಕಾರ ಗುಲ್ಬರ್ಗದಲ್ಲಿ 120 ನೋಂದಾಯಿತ ವೈದ್ಯರು ಸೇರಿದಂತೆ ಸುಮಾರು 500 ವೈದ್ಯರಿದ್ದಾರೆ. ಪ್ರತಿ ವೈದ್ಯರ ಬಳಿ ದಿನಕ್ಕೆ 4-5 ರೋಗ ಲಕ್ಷಣಗಳು ಪತ್ತೆಯಾಗುತ್ತಿವೆ.ಅಂದು:

‘1974-75ರಲ್ಲಿ ಗುಲ್ಬರ್ಗದಾದ್ಯಂತ ಕಾಮಲೆ ವ್ಯಾಪಿಸಿತ್ತು. ಆ ಬಳಿಕ 80ರ ದಶಕದಲ್ಲೊಮ್ಮೆ ಕಂಡು ಬಂತು. ಆದರೆ ಇತ್ತೀಚೆಗೆ ಸಾರ್ವತ್ರಿಕವಾಗಿ ಕಂಡುಬರುತ್ತಿರುವುದು ಇದೇ ಮೊದಲು’ ಎಂದು ತಮ್ಮ 35 ವರ್ಷಗಳ ಅನುಭವವನ್ನು ಅವರು ದಾಖಲಿಸುತ್ತಾರೆ.‘ಕುಟುಂಬದ 2-3 ಜನರಲ್ಲಿ ಕಾಮಲೆ ಸೋಂಕು ಕಂಡುಬರುತ್ತಿದೆ. ನೀರು ಸರಬರಾಜು ಮತ್ತು ತೆರೆದ ಆಹಾರದ ತೊಂದರೆಯೇ ಕಾರಣ ಎಂದು ಹೇಳಬಹುದು. ಒಳಚರಂಡಿಯ ನೀರು ಕುಡಿಯುವ ನೀರಿಗೆ ಮಿಶ್ರಿತವಾಗುವ ಬಗ್ಗೆ ಶಂಕೆ ಮೂಡುತ್ತದೆ. ನೀರಿನ ಮೂಲ, ಶೇಖರಣೆ ಮತ್ತು ಪೂರೈಕೆಯನ್ನು ಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು.‘ಇದು ಗುಣಮುಖವಾಗುವ ರೋಗ. ಭಯಪಡಬೇಕಾಗಿಲ್ಲ. ನಿರ್ಲಕ್ಷ್ಯದಿಂದಾಗಿ ಸಾವಿರಕ್ಕೆ ಒಂದು ಸಾವು ಸಂಭವಿಸುತ್ತದೆ. ಮುನ್ನೆಚ್ಚರಿಕೆ ಅವಶ್ಯ’ ಎಂದರು. ಕಳೆದ ವರ್ಷ: 2010ರಲ್ಲಿ ಗುಲ್ಬರ್ಗದಲ್ಲಿ ಮಲೇರಿಯಾ ವ್ಯಾಪಕವಾಗಿ ಕಂಡು ಬಂದಿತ್ತು. ಅದರೊಂದಿಗೆ ಡೆಂಗೆ, ಕರುಳು ಬೇನೆ, ಎಚ್1ಎನ್1, ಚಿಕೂನ್ ಗುನ್ಯಾ ಕಾಣಿಸಿಕೊಂಡಿತ್ತು. ಪಾಲಿಕೆ ಕಚೇರಿಯ ಮುಂಭಾಗದಲ್ಲೇ ಧರಣಿ ಕುಳಿತಿದ್ದ ಪೌರಕಾರ್ಮಿಕ ಮಹಿಳೆ ಅಂಬುಜಾ ಮೃತಪಟ್ಟಿದ್ದಳು.ಕುಡಿಯುವ ನೀರು ಪೂರೈಕೆ, ತ್ಯಾಜ್ಯ ವಿಲೇವಾರಿ, ತೆರೆದಿಟ್ಟ ಆಹಾರಗಳ ಅವ್ಯವಸ್ಥೆ ರೋಗಕ್ಕೆ ಮೂಲ.  ವಲಸೆಯು ರೋಗ ವೃದ್ಧಿಗೆ ಕಾರಣ. ಕಳೆದ ವರ್ಷ ಮಳೆಯ ಬಳಿಕ ರೋಗ ಉಲ್ಬಣಿಸಿತ್ತು. ಈ ಬಾರಿ ಮಳೆಗಿಂತಲೂ ಮೊದಲೇ ಬಂದಿದೆ. ವರ್ಷಂಪ್ರತಿ ಸಾಂಕ್ರಾಮಿಕ ರೋಗ ಬರುತ್ತಿರುವುದು ಜನತೆಯಲ್ಲಿ ಆತಂಕವನ್ನು ಉಂಟು ಮಾಡಿದೆ. ಪದೇ ಪದೇ ಸಾಂಕ್ರಾಮಿಕ ರೋಗ ಬಂದರೆ ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗುತ್ತದೆ. ಅಭಿವೃದ್ಧಿಯ ಅಬ್ಬರದಲ್ಲಿ ಆಡಳಿತವು ‘ಆರೋಗ್ಯ’ವನ್ನು ಮರೆಯಬಾರದು... 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry