ಕೈಗಾರಿಕಾ ವಲಯ ಮತ್ತಷ್ಟು ವಿಸ್ತಾರ

ಬುಧವಾರ, ಜೂಲೈ 17, 2019
25 °C

ಕೈಗಾರಿಕಾ ವಲಯ ಮತ್ತಷ್ಟು ವಿಸ್ತಾರ

Published:
Updated:

ಗುಲ್ಬರ್ಗ: ನಗರ ಹೊರವಲಯದಲ್ಲಿ `ಕಪನೂರು ಕೈಗಾರಿಕಾ ವಲಯ 1 ಹಾಗೂ 2' ಹಾಗೂ `ನಂದೂರು-ಕೆಸರಟಗಿ ಕೈಗಾಗಿಕಾ ವಲಯ-1' ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಇವುಗಳೊಂದಿಗೆ `ಕಪನೂರು 3ನೇ ಕೈಗಾರಿಕಾ ವಲಯ' ಹಾಗೂ `ನಂದೂರು-ಕೆಸರಟಗಿ 2ನೇ ಕೈಗಾರಿಕಾ ವಲಯ' ಹೊಸದಾಗಿ ನಿರ್ಮಾಣಗೊಳ್ಳುತ್ತಿವೆ.ಮೂಲ ಸೌಕರ್ಯಗಳ ಕೊರತೆ ಅನುಭವಿಸುತ್ತಿರುವ ಸದ್ಯದ ಕೈಗಾರಿಕಾ ವಲಯಗಳಿಗೆ ತದ್ವಿರುದ್ಧವಾಗಿ ಹೊಸ  ಕೈಗಾರಿಕೆಗಳು ತಲೆ ಎತ್ತಲಿವೆ. ರಸ್ತೆಗಳು, ಕೈಗಾರಿಕೆಗಳಿಗೆ ಅಗತ್ಯ ನೀರು, ವಸತಿ ಪ್ರದೇಶಗಳು, ಸಂಗ್ರಹಗಾರಗಳು, ವಾಹನ ನಿಲುಗಡೆ ತಾಣ, ಉದ್ಯಾನ ಹಾಗೂ ಇನ್ನಿತರೆ ನಾಗರಿಕ ಅಗತ್ಯಗಳನ್ನು ನಿವೇಶನ ಹಂಚಿಕೆ ಮೊದಲೇ ನಿರ್ಮಿಸುವ ಕಾರ್ಯದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ತೊಡಗಿದೆ.ಈಗಿರುವ ಕಪನೂರು 2ನೇ ಹಂತದ ಕೈಗಾರಿಕೆ ವಲಯದ ಹಿಂಭಾಗದಲ್ಲೆ 86.87 ಎಕರೆ ಪ್ರದೇಶದಲ್ಲಿ 3ನೇ ಹಂತದ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಗೊಳಿಸಲಾಗುತ್ತಿದೆ. ಸರ್ಕಾರದ ಹೊಸ ನಿಯಮದ ಪ್ರಕಾರ ಈ ಕೈಗಾರಿಕಾ ಪ್ರದೇಶದಲ್ಲಿ ಶೇ 10ರಷ್ಟು (8.69 ಎಕರೆ) ಜಾಗವನ್ನು ವಾಸದ ಮನೆ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಬೇರೆ ಬೇರೆ ಅಳತೆಯ 67 ಕೈಗಾರಿಕಾ ನಿವೇಶನಗಳನ್ನು ನಿರ್ಮಿಸಲಾಗುತ್ತಿದೆ.ನಂದೂರ ಕೆಸರಟಗಿ ಕೈಗಾರಿಕಾ ವಲಯ: ಸದ್ಯದ 620 ಎಕರೆ ವಿಸ್ತಾರದ ನಂದೂರ ಕೆಸರಟಗಿ ಕೈಗಾರಿಕಾ ವಲಯದೊಂದಿಗೆ 2ನೇ ಹಂತದ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ 200 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೆಐಎಡಿಬಿ ಮುಂದುವರಿಸಿದೆ. ಈಗಾಗಲೇ ಕೆಲವು ಭೂ ಮಾಲೀಕರಿಗೆ ಪರಿಹಾರ ಧನವನ್ನು ವಿತರಿಸಲಾಗಿದೆ.`ನೂತನ ಕೈಗಾರಿಕಾ ವಲಯದ ಸಮಗ್ರ ರೂಪುರೇಷೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಯೋಜನೆಗೆ ಅನುಮೋದನೆ ದೊರೆಯಬೇಕಿದೆ. ಅದರಲ್ಲೆ ಐಟಿ-ಬಿಟಿ ಪಾರ್ಕ್‌ಗೆ ಜಾಗ ಮೀಸಲಿಡುವ ಬಗ್ಗೆಯೂ ಪ್ರಸ್ತಾಪವಾಗಿದೆ. ಹೀಗಾಗಿ ನಂದೂರ-ಕೆಸರಟಗಿ 2ನೇ ಹಂತದ ಕೈಗಾಲಯ ಎಷ್ಟು ವಿಸ್ತಾರದಲ್ಲಿ ಬರುತ್ತದೆ ಎನ್ನುವುದು ಇನ್ನೂ ಖಚಿತವಾಗಿಲ್ಲ' ಎನ್ನುತ್ತಾರೆ ಕೆಐಎಡಿಬಿ ಅಧಿಕಾರಿಗಳು.3ನೇ ಹಂತದ ಕೈಗಾರಿಕೆ ವಲಯದ ವಿಶೇಷತೆಗಳು

ಕಪನೂರು 3ನೇ ಹಂತದ ಕೈಗಾರಿಕಾ ವಲಯದ ಒಟ್ಟು 86.87 ಎಕರೆ ಪ್ರದೇಶದಲ್ಲಿ ಶೇ 45 (38.79 ಎಕರೆ)ರಷ್ಟು ಕೈಗಾರಿಕೆಗಳ ನಿವೇಶನ ಅಭಿವೃದ್ಧಿಗೆ ಮೀಸಲಾಗಿದೆ. ಅದರಲ್ಲಿ 7.9 ಎಕರೆ ಪ್ರದೇಶ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ, 8.8 ಎಕರೆ ಪ್ರದೇಶ ಎಸ್‌ಸಿ/ಎಸ್‌ಟಿ ಕೈಗಾರಿಕೆಗಳಿಗೆ, 21.65 ಎಕರೆ ಪ್ರದೇಶ ಇತರೆ ಕೈಗಾರಿಕೆಗಳಿಗೆ ಹಾಗೂ 0.44 ಎಕರೆ ಪ್ರದೇಶವನ್ನು ಗ್ಯಾರೇಜ್, ಅಂಗಡಿ, ಕ್ಯಾಂಟಿನ್‌ಗಳಿಗೆ ತೆಗೆದಿರಿಸಲಾಗುತ್ತಿದೆ.ಕೈಗಾರಿಕಾ ನಿವೇಶನ ಹಾಗೂ ವಾಸದ ಮನೆ ನಿವೇಶನಗಳನ್ನು ಹೊರತುಪಡಿಸಿ ಉದ್ಯಾನಕ್ಕಾಗಿ 8.69 ಎಕರೆ, ಸಂಗ್ರಹಗಾರಕ್ಕಾಗಿ 7.84 ಎಕರೆ, ವಾಹನ ನಿಲುಗಡೆಗಾಗಿ 4.34 ಎಕರೆ, ರಸ್ತೆಗಳ ನಿರ್ಮಾಣಕ್ಕೆ 12.48 ಎಕರೆ, ವಾಣಿಜ್ಯ ಉದ್ದೇಶಕ್ಕೆ 0.18 ಎಕರೆ, ಇತರೆ ಬಳಕೆಗಾಗಿ 1.52 ಎಕರೆ, ನಾಗರಿಕ ಅನುಕೂಲಕ್ಕಾಗಿ 4.34 ಎಕರೆ ಪ್ರದೇಶವನ್ನು ಹಂಚಿಕೆ ಮಾಡಲಾಗಿದೆ.ವರ್ಷಾಂತ್ಯಕ್ಕೆ ನಿವೇಶನ ಹಂಚಿಕೆ

ಹೊಸ ಕೈಗಾರಿಕಾ ವಲಯದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಕಾರ್ಯ ಬರದಿಂದ ನಡೆಯುತ್ತಿದೆ. ನೀರು ಪೂರೈಕೆಗಾಗಿ ಏಳು ಕೊಳವೆಬಾವಿ ಕೊರೆದಿದ್ದೇವೆ. ತುಂಬಾ ಚೆನ್ನಾಗಿ ನೀರು ಬಂದಿದೆ. ಇದಲ್ಲದೆ 25 ಕಿ.ಮೀ. ದೂರದ ಬೆಣ್ಣೆತೋರಾದಿಂದ ನೀರು ತರುವ ಬಗ್ಗೆ ಸಮೀಕ್ಷೆಯಾಗಿದೆ.ಈ ವರ್ಷದ ಅಂತ್ಯಕ್ಕೆ ನಿವೇಶನ ಹಂಚಿಕೆಗಾಗಿ ಅರ್ಜಿ ಆಹ್ವಾನಿಸುವ ಯೋಜನೆ ಮಾಡಿಕೊಳ್ಳಲಾಗಿದೆ. ಕೈಗಾರಿಕಾ ಪ್ರದೇಶವೆಂದರೆ `ಹೀಗಿರಬೇಕು' ಎಂದು ನಿಂತು ನೋಡಬೇಕು. ಆ ರೀತಿಯಲ್ಲಿ ಸುಂದರವಾಗಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇವೆ.

- ಕೆ.ಎಸ್. ಬೀದರಕರ್, ಜಿಲ್ಲಾ ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry