ಮಂಗಳವಾರ, ಮೇ 17, 2022
23 °C

ಶೌಚಾಲಯ ನಿರ್ಮಿಸಿಕೊಳ್ಳಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಉತ್ತರ ಕರ್ನಾಟಕ ಭಾಗದಲ್ಲಿ ಜನರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದರೆ ಶೌಚಾಲಯ ನಿರ್ಮಾಣ ಹಾಗೂ ಬಳಕೆಗೆ ಹಿಂದೇಟು ಹಾಕುತ್ತಾರೆ ಎಂದು ವಿಶ್ವಬ್ಯಾಂಕ್ ಸದಸ್ಯ ಕುಳ್ಳಪ್ಪ ಬೇಸರ ವ್ಯಕ್ತಪಡಿಸಿದರು.ಗುರುವಾರ ನಗರದ ಜಿಲ್ಲಾ ಪಂಚಾಯಿತಿ ಹಳೆ ಸಭಾಂಗಣದಲ್ಲಿ ನಿರ್ಮಲ ಭಾರತ್ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.ಬಯಲು ಮುಕ್ತ ಮಲವಿಸರ್ಜನೆ ರಾಜ್ಯವನ್ನಾಗಿಸಲು ಆಯವ್ಯಯದಲ್ಲಿ ಹಣವನ್ನು ಮೀಸಲಿರಿಸಿ ಸಂಪೂರ್ಣ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ ದೇಶದ ಮೊದಲ ರಾಜ್ಯ ಕರ್ನಾಟಕ. ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಪ್ರತಿಯೊಬ್ಬರ ಸಹಕಾರ ಬೇಕು. ನಿರ್ಮಲ ಭಾರತ ಅಭಿಯಾನದಲ್ಲಿ ಹೊಸ ಮಾರ್ಗದರ್ಶಿ ಸೂತ್ರಗಳು ಬಂದಿವೆ. ಅವುಗಳನ್ನು ಅರ್ಥಮಾಡಿಕೊಳ್ಳುವಂತೆ ತಿಳಿಸಿದರು. ಸ್ವಚ್ಛತೆ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ದೇಶಕ್ಕೆ ಮಾದರಿ ಎನಿಸುವ ಜಿಲ್ಲೆಗಳಿವೆ. ಹಾಗೆಯೇ ಅದಕ್ಕೆ ವ್ಯತಿರಿಕ್ತವಾದ ಜಿಲ್ಲೆಗಳು ಇವೆ. ನಿರ್ಮಲ ಭಾರತ ಅಭಿಯಾನದಡಿಯಲ್ಲಿ ಗುಲ್ಬರ್ಗವನ್ನು ಮಾದರಿ ಜಿಲ್ಲೆಯನ್ನಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದರು.ಗುಲ್ಬರ್ಗ ಜಿಲ್ಲೆಯ 20 ಗ್ರಾಮ ಪಂಚಾಯಿತಿಗಳನ್ನು ಬಯಲು ಮುಕ್ತ ಶೌಚಾಲಯ ಗ್ರಾಮ ಪಂಚಾಯಿತಿಗಳನ್ನಾಗಿ ಮಾಡಲು ಗ್ರಾಮ ಪಂಚಾಯಿತಿಯಲ್ಲಿ ನಿರ್ಮಲ ಭಾರತ್ ಅಭಿಯಾನದಡಿಯಲ್ಲಿ ಉತ್ತಮ ಪ್ರಗತಿ ಸಾಧಿಸಲು ಮತ್ತು ಸೂಕ್ತ ಕಾರ್ಯ ತಂತ್ರಗಳನ್ನು ರೂಪಿಸಲು ಜಲನಿರ್ಮಲ ಯೋಜನೆಯ ಸಹಯೋಗದಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ರಾಜ್ಯ ನೀರು ಹಾಗೂ ನೈರ್ಮಲ್ಯ ಮಿಷನ್‌ನ ಉಪನಿರ್ದೇಶಕರಾದ ಚೇತನ ಗಂಗಾ, ಡಿ.ಸಿ.ಎಂ.ನ. ಉಪ ಕಾರ್ಯದರ್ಶಿ ಸತೀಶ್ ವೇದಿಕೆಯಲ್ಲಿದ್ದರು.ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಕೆಂಚಣ್ಣನವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಧರ ಗುತ್ತೇದಾರ ಸ್ವಾಗತಿಸಿದರು. ನಿರ್ಮಲ ಭಾರತ ಯೋಜನೆಯ ರಾಜ್ಯ ಸಂಯೋಜಕಿ ಅನ್ನಪೂರ್ಣ ಅಭಿಯಾನ ಕಾರ್ಯಕ್ರಮ ಕುರಿತು ವಿವರ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.