ಮಂಗಳವಾರ, ಡಿಸೆಂಬರ್ 10, 2019
26 °C

ಅಫಜಲಪುರ: ಬರಪೀಡಿತ ಘೋಷಣೆಗೆ ಆಗ್ರಹ

Published:
Updated:
ಅಫಜಲಪುರ: ಬರಪೀಡಿತ ಘೋಷಣೆಗೆ ಆಗ್ರಹ

ಅಫಜಲಪುರ: `ಸಮರ್ಪಕ ಮಳೆಯಾಗದ ಪರಿಣಾಮ ತಾಲ್ಲೂಕಿನ ಸುಮಾರು 6 ಕೆರೆಗಳಲ್ಲಿ ಇನ್ನೂ ನೀರಿಲ್ಲ. ಕೊಳವೆಬಾವಿಗಳು ಮತ್ತು ತೆರೆದ ಬಾವಿಗಳು ಬತ್ತಿ ಹೋಗಿವೆ. ಜನ ಗುಳೆ ಹೋಗುವ ಮೊದಲೇ ಅಫಜಲಪುರ ತಾಲ್ಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಪರಿಹಾರ ನೀಡಬೇಕು' ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ ಜಮಾದಾರ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, `ಹತ್ತು ವರ್ಷಗಳಿಂದ ತಾಲ್ಲೂಕಿನ ರೈತರು ಅನಾವೃಷ್ಟಿಯಿಂದ ಕಂಗಾಲಾಗಿದ್ದಾರೆ. ಪಕ್ಕದ ಜೇವರ್ಗಿ ತಾಲ್ಲೂಕಿನ ರೈತರು ಪ್ರತಿ ವರ್ಷ ಬೆಳೆ ವಿಮೆ ಪಡೆಯುತ್ತಾರೆ. ಆದರೆ ಅಫಜಲಪುರ ರೈತರು ಕಂತು ಕಟ್ಟಿದ್ದರೂ ಬೆಳೆ ವಿಮೆ ಮಂಜೂರು ಆಗುತ್ತಿಲ್ಲ' ಎಂದರು. `ಈ ಬಗ್ಗೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಐ.ಈ.ಬಳತ್ಕರ ಅವರನ್ನು ವಿಚಾರಿದ್ದೇವೆ. ಮಳೆ ಮಾಪನ ಕೇಂದ್ರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಮಳೆ ವರದಿ ಸರಿಯಾಗಿ ಹೋಗುತ್ತಿಲ್ಲ ಎಂದು ತಿಳಿಸಿದ್ದಾರೆ. ಆದರೆ ಅಫಜಲಪುರದಲ್ಲಿ ಆಗಸ್ಟ್ 31ರ ವರೆಗೆ 100 ಮಿ.ಮೀ. ಮಳೆ ಕೊರತೆ ಇದೆ. ಒಂದು ಬಾರಿಯೂ ಜಮೀನಿನಲ್ಲಿ ನೀರು ಹರಿದಿಲ್ಲ. ಹೀಗಾಗಿ ರೈತರು ಕಂಗಾಲಾಗಿದ್ದಾರೆ. ಜಾನುವಾರುಗಳನ್ನು ಮಾರಿ ಹೊಟ್ಟೆ ಪಾಡಿಗಾಗಿ ನೆರೆ ರಾಜ್ಯಗಳಿಗೆ ಗುಳೆ ಹೋಗಲು ಮುಂದಾಗಿದ್ದಾರೆ' ಎಂದು ಅವರು ಹೇಳಿದರು.`ಸರ್ಕಾರವು ಜಿಲ್ಲೆಯಲ್ಲಿ ಕೇವಲ ಆಳಂದ ಮತ್ತು ಜೇವರ್ಗಿ ತಾಲ್ಲೂಕುಗಳು ಬರಗಾಲ ಎಂದು ಘೋಷಣೆ ಮಾಡಿದೆ. ಆದರೆ ಅವುಗಳಿಗಿಂತ ಭೀಕರ ಬರಗಾಲ ಅಫಜಲಪುರದಲ್ಲಿದೆ.  ತಾಲ್ಲೂಕನ್ನು ಬರಗಾಲ ಎಂದು ಘೋಷಣೆ ಮಾಡಿ ತಕ್ಷಣ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕಾರ್ಮಿಕರಿಗೆ ಉದ್ಯೋಗ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)