ತಾಜಾ-ತೇಜಸ್ಸಿನ ಬೆಳೆ ವಚನ ಸಾಹಿತ್ಯ

7

ತಾಜಾ-ತೇಜಸ್ಸಿನ ಬೆಳೆ ವಚನ ಸಾಹಿತ್ಯ

Published:
Updated:
ತಾಜಾ-ತೇಜಸ್ಸಿನ ಬೆಳೆ ವಚನ ಸಾಹಿತ್ಯ

ಗುಲ್ಬರ್ಗ: ಶ್ರಮಿಕ ಮತ್ತು ಅಸಂಘಟಿತ ಜನಸಮೂಹದಿಂದ ಕೂಡಿದ್ದ ವಚನ ಚಳವಳಿಯು ತನ್ನ ಬದ್ಧತೆಯ ದೃಷ್ಟಿಕೋನದಿಂದಾಗಿ ಇಂದಿಗೂ ಉಪ ಉತ್ಪನ್ನದಂತೆ ಉಳಿದು ಬಂದಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು. ಗುಲ್ಬರ್ಗ ವಿಶ್ವವಿದ್ಯಾಲಯ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನಪೀಠದ ಆಶ್ರಯದಲ್ಲಿ ಸೋಮವಾರ ಕನ್ನಡ ಅಧ್ಯನ ಸಂಸ್ಥೆಯಲ್ಲಿ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ ವಚನ ಚಿಂತನೆ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ನಾವು ಮಾಡುವ ವೃತ್ತಿಗೆ ಶ್ರೇಷ್ಠತೆಯ ನಿಲುವು ಒದಗಿಸಿಕೊಟ್ಟ ವಚನಕಾರರು ಸ್ವಾಭಿಮಾನದ ಸಂಕೇತ ಮಾತ್ರವಲ್ಲ, ಇಡೀ ಶ್ರಮಿಕ ಜೀವನದ ಸಂಕೇತವಾಗಿದ್ದರು. ಅವರಲ್ಲಿ ಅಂಬಿಗರ ಚೌಡಯ್ಯ ಅಗ್ರಗಣ್ಯರಾದವರು. ಅವಮಾನಮೂಲದಿಂದ ಬಂದಿದ್ದ ಚೌಡಯ್ಯನವರಿಗೆ ಅಧ್ಯಾತ್ಮಕ್ಕಿಂತ ಹಸಿವು ಮುಖ್ಯವಾದ ವಿಷಯ ಆಗಿತ್ತು. ಅಂತೆಯೇ ಅವರ ವಚನಗಳು ನೇರ ಮತ್ತು ನಿಷ್ಠುರ ಎನಿಸುತ್ತವೆ ಎಂದರು.ಬಹುತ್ವಮೂಲದ ಸಂವೇದನೆಯನ್ನು ಒಳಗೊಂಡಿರುವ ವಚನ ಸಾಹಿತ್ಯದಲ್ಲಿ ನೈತಿಕ ಸ್ಪರ್ಶ, ಬದುಕಿನ ಕಾಳಜಿ ಅಪೂರ್ವವಾಗಿವೆ. ವಚನಧರ್ಮಕ್ಕನುಗುಣವಾಗಿ ನಡೆಯದಿದ್ದವರನ್ನು ತನ್ನದೇ ಆದ ನಿಷ್ಠುರ ಶೈಲಿಯಲ್ಲಿ ಖಂಡಿಸಿದ ಅಂಬಿಗರ ಚೌಡಯ್ಯನವರು ನಂಬಿಗರ ಚೌಡಯ್ಯನವರೂ ಆಗಿದ್ದರು ಎಂದು ತಿಳಿಸಿದರು. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ವೀರಣ್ಣ ದಂಡೆ ಮಾತನಾಡಿ, ಜನಪದ ಅನುಭವವನ್ನೇ ತಮ್ಮ ವಚನಗಳ ಪ್ರಮಾಣವನ್ನಾಗಿ ಬಳಸಿಕೊಂಡ ವಚನಕಾರರಲ್ಲಿ ಅದ್ಭುತವಾದ ಜಾನಪದ ಪ್ರಜ್ಞೆಯನ್ನು ಕಾಣಬಹುದು ಎಂದು ತಿಳಿಸಿದರು.ಸಾನ್ನಿಧ್ಯ ವಹಿಸಿದ್ದ ಸತ್ತಿಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಅಂಬಿಗರ ಚೌಡಯ್ಯನವರ ಪ್ರಖರವಾದ ಧ್ವನಿಗೆ ಬಸವಾಲ್ಲಮರು ಅಂತಃಶಕ್ತಿಯಾಗಿದ್ದರು. ವೀರ ಗಣಾಚಾರಿ ಎನಿಸಿಕೊಂಡಿದ್ದ ಅಂಬಿಗರ ಚೌಡಯ್ಯನವರು ತಾತ್ವಿಕ ನೆಲೆಯಲ್ಲಿ ಗಣಾಚಾರವನ್ನು ಅನುಸರಿಸಿಕೊಂಡು ಬಂದಿರುವುದನ್ನು ಕಾಣಬಹುದಾಗಿದೆ. ವಚನ ಸಾಹಿತ್ಯ ಎನ್ನುವುದು ತಾಜಾ, ತೇಜಸ್ಸಿನ ಬೆಳೆಯಾಗಿದೆ ಎಂದು ಅವರು ತಿಳಿಸಿದರು.ಮೌಲ್ಯಮಾಪನ ಕುಲಸಚಿವ ಡಾ. ಡಿ.ಬಿ. ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿಂಡಿಕೇಟ್ ಸದಸ್ಯ ಆರ್.ಬಿ. ಮಾಲಿಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ನಿರ್ದೇಶಕಿ ಡಾ. ನಾಗಾಬಾಯಿ ಬುಳ್ಳಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮಾದೇವಿ ನಿರೂಪಿಸಿದರು. ಶಿವಶರಣ ಎಚ್.ಕೋಡ್ಲಿ ವಂದಿಸಿದರು. ಎಂ.ವೈ.ಸುರಪುರ ಹಾಗೂ ಸಂಗಡಿಗರಿಂದ ವಚನ ಸಂಗೀತ ಕಾರ್ಯಕ್ರಮ ಜರುಗಿತು.ನಂತರ ನಡೆದ ಗೋಷ್ಠಿಯಲ್ಲಿ ಚೌಡಯ್ಯನ ವಚನಗಳಲ್ಲಿ ಲೋಕಾನುಭಾವ, ಚೌಡಯ್ಯನ ವಚನಗಳಲ್ಲಿ ಜಾನಪದೀಯ ಅಂಶಗಳು, ಶರಣಚಳವಳಿ ಮತ್ತು ಅಂಬಿಗರ ಚೌಡಯ್ಯ ವಿಷಯ ಕುರಿತು ಡಾ. ಕಾಶಿನಾಥ ಅಂಬಲಗಿ, ಡಾ. ಸಾಯಬಣ್ಣ ತಳವಾರ, ಡಾ. ಪ್ರಶಾಂತ ನಾಯಕ ಪ್ರಬಂಧ ಮಂಡಿಸಿದರು. ಎರಡನೇ ಗೋಷ್ಠಿಯಲ್ಲಿ ಅಂಬಿಗರ ಚೌಡಯ್ಯ ಮತ್ತು ಮಹಿಳೆ ಕುರಿತು ಪ್ರೊ. ವಿಜಯಶ್ರೀ ಸಬರದ, ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಕುರಿತು ಡಾ. ವಿಕ್ರಂ ವಿಸಾಜಿ,  ಚೌಡಯ್ಯನವರ ವಚನಗಳ ಭಾಷೆ, ಶೈಲಿ ಕುರಿತು ಪ್ರೊ. ಮಲ್ಲಪ್ಪ ಮಾನೆಗಾರ ಪ್ರಬಂಧ ಮಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry