ಭಾನುವಾರ, ಜನವರಿ 19, 2020
25 °C
ಕಂದಾಯ ಲೋಕೋಪಯೋಗಿ ಪೊಲೀಸ್ ಇಲಾಖೆ ಶಾಮೀಲು

ಅಕ್ರಮ ಮರಳು ತಡೆಯಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ‘ರಾಜ್ಯ ಮತ್ತು ಜಿಲ್ಲೆಯಲ್ಲಿ ಮರಳು ಸಾಗಾಟ ನಿಂತಿದೆ. ಆದರೆ, ಚಿತ್ತಾಪುರದಲ್ಲಿ ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಶಾಮೀಲಿನಿಂದಾಗಿ ಅಕ್ರಮ ಮರಳು ಸಾಗಾಟ ರಾಜಾರೋಷವಾಗಿ ಹಗಲಿ­ರುಳು ನಡೆಯುತ್ತಿದೆ’ ಎಂದು ಮಾಜಿ ಶಾಸಕ ವಾಲ್ಮೀಕ ನಾಯಕ ಆರೋಪಿಸಿದ್ದಾರೆ.ಶುಕ್ರವಾರ ಸುದ್ದಿಗಾರರೊಂದಿಗೆ ಮಾತ­ನಾಡಿದ ಅವರು, ‘ಆಡಳಿತ ಮತ್ತು ಅಧಿಕಾರಿಗಳ ನೆರವಿಲ್ಲದೆ ಅಕ್ರಮ ಮರಳು ಸಾಗಾಟ ಮಾಡಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಯಿಂದ ಪರವಾನಿಗೆ ಪಡೆದುಕೊಂಡಿದ್ದೇವೆ ಎಂದು ಕೆಲವರು ನಿರ್ಭಯವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ. ಅದನ್ನು ನೋಡಿಯೂ ನೋಡದಂತೆ ಅಧಿಕಾರಿ ವರ್ತಿಸುತ್ತಿದ್ದಾರೆ’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.‘ಬಡವರು ಮನೆ ಕಟ್ಟಲು ಮರಳು ತೆಗೆದುಕೊಂಡು ಹೋಗುತ್ತಿದ್ದರೆ ಅಧಿಕಾರಿ­ಗಳು ಅದನ್ನು ತಡೆದು ಅವರ ವಿರುದ್ಧ ಕ್ರಮ ಜರುಗಿಸಿ ದಂಡ ವಿಧಿ­ಸುತ್ತಿದ್ದಾರೆ. ಅಮಾಯಕರನ್ನು ಜೈಲಿಗೆ ಕಳಿಸುತ್ತಿದ್ದಾರೆ. ಮರಳನ್ನು ಹಗಲು ದರೋಡೆ ಮಾಡುತ್ತಿರುವವವರ ವಿರುದ್ಧ ಕ್ರಮ ತೆಗೆದುಕೊಳ್ಳದೆ, ಪರಿಶೀಲನೆಯೂ ಮಾಡದೆ ಮೂಕ ಪ್ರೇಕ್ಷಕರಂತ್ತಿದ್ದಾರೆ’ ಎಂದು ಅವರು ಅಧಿಕಾರಿಗಳ ವಿರುದ್ಧ ವಾಕ್‌ಸಮರ ನಡೆಸಿದರು.‘ಕಂದಾಯ ಇಲಾಖೆಯ ಸಹಾ­ಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಗಮನ ಹರಿಸಿ ಅಕ್ರಮ ಮರಳು ಸಾಗಾಟ ತಡೆಯಬೇಕು. ಇಲ್ಲವಾದರೆ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಮತ್ತು ಉಗ್ರ ಹೋರಾಟ ನಡೆಸಲಾಗುವುದು’ ಎಂದು ಮಾಜಿ ಶಾಸಕ  ವಾಲ್ಮೀಕ ಎಚ್ಚರಿಸಿದ್ದಾರೆ.ಅಭಿವೃದ್ಧಿ ಕುಂಠಿತ: ‘ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಕುಂಠಿತ­ಗೊಂಡಿವೆ. ಲೋಕೋಪಯೋಗಿ, ಪಂಚಾಯಿತಿ ರಾಜ್, ಭೂಸೇನಾ ನಿಗಮ ಮತ್ತು ತಾಂಡಾ ಅಭಿವೃದ್ಧಿ ನಿಗಮದ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳು ಕಳೆದ 8 ತಿಂಗಳಿನಿಂದ ನನೆಗುದಿಗೆ ಬಿದ್ದಿವೆ. ಈ ಹಿಂದೆ ಮಂಜೂರಿ­ಯಾಗಿರುವ ಶಾಸಕರ ಅನು­ದಾನದ ಕಾಮಗಾರಿಗಳನ್ನು ಅಧಿಕಾರಿ­ಗಳು ಮಾಡಿಸುತ್ತಿಲ್ಲ. ನನ್ನ ಬಳಿ ಅಧಿಕೃತ ದಾಖಲೆಗಳಿವೆ’ ಎಂದು ಅವರು ಹೇಳಿದರು.‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಕೇಳುವ ಹಕ್ಕು ನೀಡಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತ­ಗೊಂಡಾಗ ಮಾಜಿ ಶಾಸಕನಾಗಿ ಕೇಳುವ ಹಕ್ಕು ನನಗೂ ಇದೆ. ಆದರೆ, ಕ್ಷೇತ್ರದ ಶಾಸಕ ಪ್ರಿಯಾಂಕ್, ಚುನಾವಣೆ­ಯಲ್ಲಿ ವಾಲ್ಮೀಕಗೆ ಜನರು ಕಪಾಳ ಮೋಕ್ಷ ಮಾಡಿದ್ದಾರೆ. ಅವರಿಗೆ ಕೇಳುವ ನೈತಿಕ ಹಕ್ಕಿಲ್ಲ ಎಂದು ಹಗುರ­ವಾಗಿ ಮಾತನಾಡಿದ್ದಾರೆ. ಇದು ಅವ­ರಿಗೆ ಶೋಭೆ ತರುವುದಿಲ್ಲ. ನನಗಿಂತ ಮುಂಚೆ ಕ್ಷೇತ್ರದ ಜನರು ಅವರನ್ನು ಸೋಲಿಸಿ ಕಪಾಳ ಮೋಕ್ಷ ಮಾಡಿದ್ದರು’ ಎಂದು ಖಾರವಾಗಿ ನುಡಿದರು.ಬಿಜೆಪಿ ಯುವ ಅಧ್ಯಕ್ಷ ತಮ್ಮಣ್ಣ ಡಿಗ್ಗಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಾಲಾಜಿ ಬುರಬುರೆ, ಚಂದ್ರು ಕಾಳಗಿ, ನಾಗರಾಜ ಹೂಗಾರ, ಅಶೋಕ ಸೂರ್ಯವಂಶಿ ಇದ್ದರು

ಪ್ರತಿಕ್ರಿಯಿಸಿ (+)