ಭಾನುವಾರ, ಜನವರಿ 26, 2020
31 °C

‘ಪ್ರತಿಭೆ ಹೊರ ಹಾಕಲು ಮಾನವ ಹಕ್ಕು ಸಹಕಾರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ‘ವ್ಯಕ್ತಿಯು ತನ್ನ ಪ್ರತಿಭೆ­ಯನ್ನು ಹೊರ ಹಾಕಲು ಮಾನವ ಹಕ್ಕು­ಗಳು ಸಹಾಯಕವಾಗಿವೆ’ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲ­ಸಚಿವ ಡಾ.ಚಂದ್ರಕಾಂತ ಯಾತನೂರ ಹೇಳಿದರು. ನಗರದ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಶೇಠ ಶಂಕರಲಾಲ ಲಾಹೊಟಿ ಕಾನೂನು ಮಹಾವಿದ್ಯಾಲ­ಯದಲ್ಲಿ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ ಕಾರ್ಯಕ್ರಮ­ವನ್ನು ಉದ್ಘಾಟಿಸಿ ಮಾತನಾಡಿದರು.ಹಕ್ಕುಗಳು ಯಾರಿಂದಲೂ ಕೇಳಿ ಪಡೆಯುವಂತಹವಲ್ಲ. ಅವು ನಿಸರ್ಗ­ದತ್ತವಾಗಿ ಬಂದಿವೆ. ಮಾನವ ಹಕ್ಕು­ಗಳ ಪಾಲನೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯ­ಪಟ್ಟರು. ಭಾರತ ವಿಜ್ಞಾನ ಮತ್ತು ತಂತ್ರ­ಜ್ಞಾನ­ದಲ್ಲಿ ಎಷ್ಟೇ ಮುಂದುವರೆದರೂ ಬಡತನ ಕಡಿಮೆಯಾಗಿಲ್ಲ. ಶಾಲಾ–ಕಾಲೇಜು, ಮನೆ, ಕಚೇರಿ ಒಟ್ಟಾರೆ ಎಲ್ಲ ಕ್ಷೇತ್ರಗಳಲ್ಲೂ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದನ್ನು ನಾವು ಕಾಣುತ್ತೇವೆ. ಇದನ್ನು ತಡೆಗಟ್ಟಲು ಹಕ್ಕುಗಳ ಬಗ್ಗೆ ಜಾಗೃತಿ ಹೊಂದ­ಬೇಕಾದ ಅವಶ್ಯವಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಲಿಂಗರಾಜ ಎಂ.­ಕೋಣಿನ ಮಾತನಾಡಿ, ಪ್ರತಿಯೊಬ್ಬರು ಸಮಾಜದಲ್ಲಿ ಗೌರವಯುತವಾಗಿ ಬಾಳಲು ಹಕ್ಕುಗಳು ಸಹಕಾರಿ­ಯಾಗಿವೆ ಎಂದು ಹೇಳಿದರು. ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಅಧ್ಯಕ್ಷ ಅಪ್ಪಾರಾವ್ ಅಕ್ಕೊಣೆ, ಅರುಣಕುಮಾರ ಲೊಯಾ, ಎಂ.ಭಾಗ್ಯಲಕ್ಷ್ಮಿ, ಸಿದ್ರಾಮಪ್ಪ ಬಮನಾಳಕರ ಇದ್ದರು.

ಪ್ರತಿಕ್ರಿಯಿಸಿ (+)