ಬುಧವಾರ, ಜನವರಿ 29, 2020
28 °C

ಕಡಗಂಚಿ: ಬ್ಯಾಂಕ್‌ ದರೋಡೆ ಯತ್ನ ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ತಾಲ್ಲೂಕಿನ ಕಡಗಂಚಿ ಗ್ರಾಮದಲ್ಲಿನ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕಿಗೆ ಬುಧವಾರ ರಾತ್ರಿ ನಾಲ್ವರು ಕಳ್ಳರು ನುಗ್ಗಿ ದರೋಡೆಗೆ ಯತ್ನ ನಡೆಸಿ, ವಿಫಲರಾದ ಘಟನೆ ನಡೆದಿದೆ. ರಾತ್ರಿ  ಬ್ಯಾಂಕ್‌ನ ಹಿಂಭಾಗದ ಕಿಟಕಿಯನ್ನು ಒಡೆದು ಒಳನುಗ್ಗಿದ ಕಳ್ಳರು ಭದ್ರತಾ ಕೊಠಡಿಯ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ಅದು ಸಾಧ್ಯವಾಗದಾದಾಗ ವ್ಯವಸ್ಥಾಪಕರ ಅಲ್ಮೆರಾ ಒಡೆದು ಭದ್ರತಾ ಕೊಠಡಿಯ ಕೀಲಿಕೈಗಾಗಿ ಹುಡುಕಾಟ ನಡೆಸಿದ್ದಾರೆ. ಹೊರಗೆ ಮತ್ತು ಒಳಭಾಗದಲ್ಲಿ ಅಳವ­ಡಿಸಿದ ಎರಡೂ ಸಿ.ಸಿ ಟಿ.ವಿ ಕ್ಯಾಮೆರಾ­ಗಳನ್ನು ನಾಶಪಡಿಸಿದ್ದಾರೆ.ಬ್ಯಾಂಕಿನಲ್ಲಿದ್ದ ವಸ್ತುಗಳಿಗೆ ಧಕ್ಕೆ ಮಾಡದೇ ದರೋಡೆ ಮಾಡುವ ಪ್ರಯತ್ನ ವಿಫಲವಾದ್ದರಿಂದ ಮರಳಿ ಹೋಗಿದ್ದಾರೆ ಎನ್ನಲಾಗಿದೆ. ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ನಾಲ್ವರು ವ್ಯಕ್ತಿಗಳು ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ದರೋಡೆ ಮಾಡಲು ನಡೆಸಿದ ಪ್ರಯತ್ನ ಸೆರೆಸಿಕ್ಕಿದೆ. ಬೆಳಿಗ್ಗೆ ಬ್ಯಾಂಕ್‌ಗೆ ಬಂದ ಅಧಿ­ಕಾರಿಗಳು ಈ ಕುರಿತು ಪೊಲೀಸರಿಗೆ ಮತ್ತು ಬ್ಯಾಂಕ್‌ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರು.ಈಶಾನ್ಯ ವಲಯ ಐಜಿಪಿ ಮಹಮ್ಮದ್‌ ವಜೀರ್‌ ಅಹ್ಮದ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ ಸಿಂಗ್‌, ಡಿವೈಎಸ್‌ಪಿ ಎಸ್‌.ಎಲ್‌. ಝಂಡೇಕರ,  ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ಎಸ್‌.ಹಟ್ಟಿ ಮತ್ತು ನರೋಣಾ ಇನ್‌ಸ್ಪೆಕ್ಟರ್‌ ಮಾನಪ್ಪ ದೊರೆ ಭೇಟಿ ನೀಡಿ ಪರಿಶೀಲಿಸಿದರು. ಹುಬ್ಬಳ್ಳಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಪ್ರಾದೇಶಿಕ ಕಚೇರಿ ಅಧಿಕಾರಿ ಸುಧಾಕರ ಕುಳಾಯಿ ಮತ್ತಿತರರು ಸ್ಥಳಕ್ಕೆ ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದಿದ್ದಾರೆ.ಈ ಹಿಂದೆಯೂ ದರೋಡೆ: ಆಳಂದ – ಗುಲ್ಬರ್ಗ ಮುಖ್ಯ ರಸ್ತೆಯ­ಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿ­ಯಾದ ಈ ಶಾಖೆಯಲ್ಲಿ ಇದು ನಾಲ್ಕನೇ ಪ್ರಕರಣವಾಗಿದೆ. ಎಂಟು ತಿಂಗಳ ಹಿಂದೆ ಅಂತರರಾಜ್ಯ ಕಳ್ಳರು ಈ ಬ್ಯಾಂಕ್‌ನಲ್ಲಿ ದರೋಡೆ ಮಾಡಿದ್ದರು. ಜಿಲ್ಲೆಯಲ್ಲಿ­ಯೇ ಅತಿ ಹೆಚ್ಚು ಮೌಲ್ಯದ ದರೋಡೆ ಇದಾಗಿದ್ದು, ಒಟ್ಟು ₨ 1.36 ಕೋಟಿ ಮೌಲ್ಯದ ಹಣ ಮತ್ತು ಚಿನ್ನ ದರೋಡೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಈಗಾಗಲೇ ಬಂಧಿಸಲಾಗಿದೆ. ಅಲ್ಲದೇ, ಇನ್ನೂ ಮೂವರು ತಲೆ ಮರೆಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)