ಸೋಮವಾರ, ಜೂನ್ 21, 2021
28 °C

ರಾಜ್ಯದಲ್ಲಿ 5 ಭಾಷೆಗಳು 2ನೇ ಪ್ರಧಾನ ಭಾಷೆ!

ಪ್ರಜಾವಾಣಿ ವಾರ್ತೆ/ ಸುಭಾಸ ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕರ್ನಾಟಕದಲ್ಲಿ ಕನ್ನಡ ಪ್ರಧಾನ ಭಾಷೆ. ಆದರೆ, ದೇಶದ ಬೇರೆ ಯಾವ ರಾಜ್ಯ­ಗಳಲ್ಲೂ ಕನ್ನಡ ಎರಡನೇ ಪ್ರಧಾನ ಭಾಷೆ­ಯಾಗಿಲ್ಲ. ಆದರೆ, ಐದು ಬೇರೆ ರಾಜ್ಯಗಳ ಭಾಷೆ ಕರ್ನಾಟಕದಲ್ಲಿ ಎರಡನೇ ಪ್ರಧಾನ ಭಾಷೆಯಾ­ಗಿರುವುದು ವಿಶೇಷ...ಹೌದು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲ­ಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಸವರಾಜ ಕೋಡಗುಂಟಿ ಅವರು ಈ ಬಗ್ಗೆ ಸಂಶೋ­ಧನೆ ನಡೆಸುತ್ತಿದ್ದು, ಆಸಕ್ತಿದಾಯಕ ಸಂಗತಿಗಳನ್ನು ಕಲೆ ಹಾಕುತ್ತಿದ್ದಾರೆ.2001ರ ಭಾರತದ ಜನಗಣತಿ ವರದಿ ಪ್ರಕಾರ ಭಾರತದಲ್ಲಿ 22 ಅನುಸೂಚಿತ ಮತ್ತು 100 ಅನುಸೂಚಿ­ತ­ವಲ್ಲದ ಒಟ್ಟು 122 ಭಾಷೆ­ಗಳು ಇವೆ. ಇಂಡೋ–ಯುರೋಪಿಯನ್–24, ದ್ರಾವಿಡ–17, ಆಸ್ಟ್ರೋ–ಏಸಿಯಾ­ಟಿಕ್–14, ಟಿಬೆಟೊ–ಬರ್ಮನ್–66 ಮತ್ತು ಸೆಮಿಟೊ–ಹೆಮಿಟಿಕ್–1 ಭಾಷೆ­ಗಳನ್ನು ಜನಗಣತಿ ವರದಿ­ಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.‘ಕನ್ನಡ ಪ್ರಧಾನ ಭಾಷೆಯಾಗಿರುವ ಕರ್ನಾ­ಟಕ ರಾಜ್ಯ ಒಟ್ಟು 5 ಭಾಷೆಗಳಿಗೆ 2ನೇ ಪ್ರಧಾನ ರಾಜ್ಯವಾಗಿದೆ. ಮರಾಠಿ (18,92,783), ತಮಿಳು (18,74,959), ತೆಲುಗು (36,98,­657), ಮಲಯಾಳಂ (7,01,673), ಗುಜ­ರಾತಿ (1,02,195) ಭಾಷೆಗಳು ಕರ್ನಾಟಕ­ದಲ್ಲಿ 2ನೇ ಪ್ರಧಾನ ಭಾಷೆಗಳಾಗಿವೆ ಹೊರ­ಹೊಮ್ಮಿವೆ’ ಎಂದು ಕೋಡಗುಂಟಿ ಹೇಳುತ್ತಾರೆ.‘ಭಾರತದ ಎಲ್ಲ ರಾಜ್ಯಗಳಲ್ಲೂ ಕನ್ನಡ ಬಳಕೆಯಲ್ಲಿದೆ. ಕರ್ನಾಟಕದಲ್ಲಿ ಕನ್ನಡ ಪ್ರಧಾನ ಭಾಷೆ. ಆದರೆ, ಯಾವುದೇ ರಾಜ್ಯದಲ್ಲಿ ಎರಡನೇ ಪ್ರಧಾನ ಭಾಷೆಯಾಗಿಲ್ಲ. ಅಂದರೆ, ಬೇರೆ ರಾಜ್ಯದಲ್ಲಿ ಆ ರಾಜ್ಯದ ಪ್ರಧಾನ ಭಾಷೆಯ ನಂತರ ಅತಿ ಹೆಚ್ಚು ಜನರನ್ನು ಹೊಂದಿರುವ ಎರಡನೇ ಭಾಷೆಯಾಗಿ ಕನ್ನಡ ಇಲ್ಲ. ತಮಿಳುನಾಡು (10,45,­238) ಮತ್ತು ಕೇರಳಗಳಲ್ಲಿ (81,­406) ಕನ್ನಡ ಮೂರನೇ ಪ್ರಧಾನ ಭಾಷೆಯಾಗಿದೆ. ಗೋವಾದಲ್ಲಿ (74,6­15) 5ನೇ ಪ್ರಧಾನ ಭಾಷೆ, ಮಹಾ­ರಾಷ್ಟ್ರ­ದಲ್ಲಿ (12,54,519) ಮತ್ತು ಆಂಧ್ರ­ಪ್ರದೇಶದಲ್ಲಿ (5,65,574) 6ನೇ ಪ್ರಧಾನ ಭಾಷೆಯಾಗಿದೆ. 10 ಸಾವಿರಕ್ಕಿಂತಲೂ ಹೆಚ್ಚು ಕನ್ನಡ ಮಾತ­ನಾಡುವವರು ಅನೇಕ ರಾಜ್ಯಗಳಲ್ಲಿ ಇದ್ದಾರೆ’ ಎಂದು ಹೇಳುತ್ತಾರೆ.‘ಕರ್ನಾಟಕದಲ್ಲಿ ಕನ್ನಡ ಮಾತನಾಡುವವರು 3,48,38,035 (ಶೇ 91.86) ಇದ್ದಾರೆ. ಇನ್ನುಳಿದಂತೆ ಉರ್ದು 55,39,910 (ಶೇ 10.48), ತೆಲುಗು 36,98,657 (ಶೇ 6.99), ಮರಾಠಿ 18,92,783 (ಶೇ 3.58), ತಮಿಳು 18,74,959 (ಶೇ 3.54), ಹಿಂದಿ 13,44,877 (ಶೇ  2.54), ಕೊಂಕಣಿ 7,6­8,­039 (ಶೇ 1.45), ಮಲಯಾಳಂ 7,01,673 (ಶೇ 1.32) ಹಾಗೂ ಗುಜರಾತಿ ಭಾಷಿಕರು 1,02,195 (ಶೇ 0.19) ಮಂದಿ ಇದ್ದಾರೆ. ಹೀಗಾಗಿ ಆರು ಕೋಟಿ ಕನ್ನಡಿಗರಲ್ಲಿ ಇತರ ಭಾಷಿಕರೂ ಇದ್ದಾರೆ ಎಂಬುದು ಗಮ­ನಾರ್ಹ’ ಎಂದು ಕೋಡಗುಂಟಿ ವಿವರಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.