ಕಾಲುವೆ ನವೀಕರಣ, ಕೂಡಿಬಂದ ಕಾಲ

ಸೋಮವಾರ, ಜೂಲೈ 22, 2019
26 °C

ಕಾಲುವೆ ನವೀಕರಣ, ಕೂಡಿಬಂದ ಕಾಲ

Published:
Updated:

ಚಿಂಚೋಳಿ: ಬರದ ನಾಡಿನ ಕಲ್ಪವೃಕ್ಷ ಎಂದೇ ಪ್ರಸಿದ್ಧಿ ಪಡೆದ ಜಿಲ್ಲೆಯ ಯಶಸ್ವಿ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆಗೆ ಹೊಂದಿದ ತಾಲ್ಲೂಕಿನ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಮುಖ್ಯ ಕಾಲುವೆ ಹಾಗೂ ವಿತರಣಾ ಕಾಲುವೆಗಳ ನವೀಕರಣಕ್ಕೆ ಕಾಲ ಕೂಡಿ ಬಂದಿದೆ.5223 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಗುರಿ ಹೊಂದಿದ ಯೋಜನೆಯ ಬಲದಂಡೆ ಕಾಲುವೆ 14 ಕೀ.ಮೀ ಉದ್ದವಿದ್ದು, 14 ವಿತರಣಾ ಕಾಲುವೆಗಳು ಮತ್ತು ಎಡದಂಡೆ ಕಾಲುವೆ 21 ಕೀ.ಮೀ ಉದ್ದವಿದ್ದು, 24 ವಿತರಣಾ ಕಾಲುವೆಗಳನ್ನು ಹೊಂದಿದೆ.ಸಧ್ಯ ಮುಖ್ಯ ಕಾಲುವೆಗಳು ಹಾಗೂ ವಿತರಣಾ ಕಾಲುವೆಗಳು ಸಂಪೂರ್ಣ ಶಿಥಿಲಗೊಂಡು 2 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಯುವುದು ದುರ್ಲಭವಾಗಿತ್ತು. ಹೀಗಾಗಿ ಯೋಜನೆಗೆ ಕಾಯಕಲ್ಪ ನೀಡಿ ರೈತರ ಜಮೀನಿಗೆ ಸಮರ್ಪಕ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ಇಲ್ಲಿನ ಸಾವಿರಾರು ರೈತರ ಬೇಡಿಕೆಯಾಗಿತ್ತು.ಹೀಗಾಗಿ ಅನ್ನದಾತರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಸರ್ಕಾರದಿಂದ 14.29 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ, ಎಂಜಿನಿಯರ್‌ಗಳು ಅಂದಾಜು ಪಟ್ಟಿ ತಯಾರಿಸಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರವೇ ಕಾಮಗಾರಿಗಳು ಪ್ರಾರಂಭವಾಗಲಿವೆ ಎಂದು ಶಾಸಕ ಸುನೀಲ ವಲ್ಯ್‌ಪುರ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಗುಣಮಟ್ಟದ ಕಾಮಗಾರಿಗಾಗಿ ರೈತರು ಸದಾ ಕಣ್ಗಾವಲಿರಿಸಿ ಅನುದಾನ ಸದುಪಯೋಗಪಡಿಸಿಕೊಳ್ಳುವ ಮೂಲಕ ಕಾಲುವೆಯ ಕೊನೆಯ ಭಾಗದ ರೈತರ ಜಮೀನಿಗೂ ನೀರು ಹರಿಯುವಂತಾಗಬೇಕೆಂಬುದು ತಮ್ಮ ಬಯಕೆಯಾಗಿದೆ ಎಂದು ಸುನೀಲ ವಲ್ಯ್‌ಪುರ ತಿಳಿಸಿದ್ದಾರೆ.ಎಡದಂಡೆ ಹಾಗೂ ಬಲದಂಡೆಯ 35 ಕೀ.ಮೀ ಕಾಲುವೆಗೆ ಮತ್ತು 38 ವಿತರಣಾ ಕಾಲುವೆಗಳಿಗೆ ಸ್ಟ್ರಕ್ಚರ್, ಸಿ.ಸಿ ಲೈನಿಂಗ್ ಹಾಗೂ ಅಕ್ವಡಕ್ಟ್ ನಿರ್ಮಾಣ ಮಾಡಲು ಯೋಜಿಸಲಾಗಿದೆ.ಚಂದ್ರಂಪಳ್ಳಿ ನೀರಾವರಿ ಯೋಜನೆ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರ ಕನಸಿ ಕೂಸಾಗಿದ್ದು, 1973ರಲ್ಲಿ ಕಾಮಗಾರಿ ಪೂರ್ಣಗೊಂಡು 1975ರಲ್ಲಿ ರೈತರಿಗೆ ಸಮರ್ಪಿಸಲಾಗಿದೆ, ಅಂದಿನಿಂದ ಇಂದಿನವರೆಗೆ ಕಾಯಕಲ್ಪಕ್ಕಾಗಿ ಕಾಯುತ್ತಿತ್ತು. ಕಾಲುವೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿ ನೀರು ವ್ಯರ್ಥ ಪೋಲಾಗುತ್ತಿತ್ತು.ರಾಷ್ಟ್ರೀಯ ನೀರು ನಿರ್ವಹಣೆ ಯೋಜನೆ ಅಡಿಯಲ್ಲಿ 1988-93 ಅವಧಿಯಲ್ಲಿ 1.6 ಕೋಟಿ ರೂ. ವೆಚ್ಚದಲ್ಲಿ ನವೀಕರಣದ ಸ್ವಲ್ಪ ಕಾಮಗಾರಿ ನಡೆಸಲಾಗಿತ್ತು.ಇದಕ್ಕೆ ಯೋಜನೆ ವ್ಯಾಪ್ತಿಯ 12 ನೀರು ಬಳಕೆದಾರರ ಸಹಕಾರ ಸಂಘಗಳು ಸಹಮತ ವ್ಯಕ್ತಪಡಿಸಿವೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಗುರುವಾರ ಚಂದ್ರಂಪಳ್ಳಿಯಲ್ಲಿ ಸುಪರಿಟೆಂಡಿಂಗ್ ಎಂಜಿನಿಯರ್ ಬಿ.ಎನ್ ಪನೆರಾಜು ಅಧ್ಯಕ್ಷತೆಯಲ್ಲಿ ಸಹಕಾರ ಸಂಘಗಳ ಅಧ್ಯಕ್ಷರ ಹಾಗೂ ಯೋಜನಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಲ್ ಹುನ್ನತ್ತಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ ಮೇದಾ ಹಾಗೂ ಎಂಜಿನಿಯರ್ ಮತ್ತು ರೈತರು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.ಅಚ್ಚುಕಟ್ಟು ಪ್ರದೇಶದ ರೈತರ ಜಮೀನಿಗೆ ನೀರು ಹರಿಸಬೇಕೆ ಬೇಡವೇ ಎಂಬ ಬಗ್ಗೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತಿರ್ಮಾನಿಸಬೇಕು ಆದರೆ ಸಮಿತಿಯ ಯಾವೊಬ್ಬ ಸದಸ್ಯರನ್ನು ಅಧಿಕಾರಿಗಳು ಸಭೆಗೆ ಕರೆದಿಲ್ಲ ಹೀಗಾಗಿ ಸಮಿತಿಯನ್ನೇ ಕತ್ತಲಲ್ಲಿ ಇರಿಸಲಾಗಿದೆ ,ಎಂದು ಸಮಿತಿ ಸದಸ್ಯ ಚಿಂಚೋಳಿಯ ಅಶೋಕ ಪಾಟೀಲ ದೂರಿದ್ದಾರೆ.

     

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry