228 ಶಿರಸ್ತೇದಾರ ಹುದ್ದೆ ಉನ್ನತೀಕರಣ

ಬುಧವಾರ, ಜೂಲೈ 17, 2019
30 °C

228 ಶಿರಸ್ತೇದಾರ ಹುದ್ದೆ ಉನ್ನತೀಕರಣ

Published:
Updated:

ಗುಲ್ಬರ್ಗ: ರಾಜ್ಯದ 176 ತಹಸೀಲ್ದಾರ್ ಕಚೇರಿಯ ತಲಾ ಒಂದು ಶಿರಸ್ತೇದಾರರ ಮತ್ತು 52 ಉಪ ವಿಭಾಗಾಧಿಕಾರಿಗಳ ಕಚೇರಿಗಳಲ್ಲಿರುವ ತಲಾ ಒಂದು ವ್ಯವಸ್ಥಾಪಕರ/ ಶಿರಸ್ತೇದಾರರ ಹುದ್ದೆ ಸೇರಿದಂತೆ ಒಟ್ಟು 228 ಶಿರಸ್ತೇದಾರರ ಹುದ್ದೆಗಳನ್ನು ಗ್ರೇಡ್-ಬಿ ತಹಸೀಲ್ದಾರ್ ಹುದ್ದೆಗೆ ಉನ್ನತೀಕರಿಸಿ ರಾಜ್ಯ ಸರ್ಕಾರ ಜೂನ್ 3 ರಂದು ಆದೇಶ ಹೊರಡಿಸಿದೆ ಎಂದು ಗುಲ್ಬರ್ಗ ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ರಜನೀಶ್ ಗೋಯಲ್ ತಿಳಿಸಿದ್ದಾರೆ.ಇದರಿಂದ ಗುಲ್ಬರ್ಗ ವಿಭಾಗದ ಆರು ಜಿಲ್ಲೆಗಳ 31 ತಹಶೀಲ್ದಾರ್ ಕಚೇರಿಯ ತಲಾ ಒಂದು ಶಿರಸ್ತೇದಾರರ ಮತ್ತು 10 ಉಪ ವಿಭಾಗಾಧಿಕಾರಿಗಳ ಕಚೇರಿಗಳಲ್ಲಿರುವ ತಲಾ ಒಂದು ವ್ಯವಸ್ಥಾಪಕರ/ಶಿರಸ್ತೇದಾರರ ಹುದ್ದೆ ಸೇರಿದಂತೆ ಒಟ್ಟು 40 ಶಿರಸ್ತೇದಾರರ ಹುದ್ದೆಗಳನ್ನು ಗ್ರೇಡ್-ಬಿ ತಹಸೀಲ್ದಾರ್ ಹುದ್ದೆಗೆ ಉನ್ನತೀಕರಿಸಿದಂತಾಗಿದೆ. ರಾಜ್ಯ ಸರ್ಕಾರ ಈ ವ್ಯವಸ್ಥೆಯಿಂದ ಕಂದಾಯ ಇಲಾಖೆಯಲ್ಲಿ ಎಲ್ಲ ಕೆಲಸ ಕಾರ್ಯಗಳು ಸುಗಮ ಮತ್ತು ತೀವ್ರಗತಿಯಲ್ಲಿ ನಿರ್ವಹಿಸಲು ಅನುವು ಮಾಡಿಕೊಟ್ಟಿದೆ.ತಾಲ್ಲೂಕು ಹಾಗೂ ಉಪ ವಿಭಾಗ ಮಟ್ಟದ ಕಚೇರಿಗಳಲ್ಲಿ ಭೂಮಿ, ಚುನಾವಣೆ, ಕಾನೂನು ಮತ್ತು ಸುವ್ಯವಸ್ಥೆ, ನೈಸರ್ಗಿಕ ವಿಕೋಪ, ಸಾಮಾಜಿಕ ಭದ್ರತಾ ಯೋಜನೆಗಳು, ಜನನ-ಮರಣ ದಾಖಲೆ, ಶಿಷ್ಟಾಚಾರ, ನ್ಯಾಯಾಲಯ ಪ್ರಕರಣ, ಭೂ ಸ್ವಾಧೀನ, ಆಹಾರ, ಮುಜರಾಯಿ, ರಾಷ್ಟ್ರೀಯ ಹಬ್ಬಗಳ ಆಚರಣೆ, ಸರ್ಕಾರಿ ಆಸ್ತಿ ಸಂರಕ್ಷಣೆ ಮತ್ತಿತರ ಕಾರ್ಯ ಚಟುವಟಿಕೆಗಳನ್ನು ಒಬ್ಬ ಅಧಿಕಾರಿಯಿಂದ ನಿರ್ವಹಿಸುವುದು ಅಧಿಕ ಒತ್ತಡ ಮತ್ತು ಹೊರೆಯ ಕೆಲಸವಾಗುವುದು.ಈ ಕಚೇರಿಗಳ ಎಲ್ಲ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ಮತ್ತು ಕಾರ್ಯ ಒತ್ತಡವನ್ನು ಕಡಿಮೆಗೊಳಿಸಲು ಅನುವಾಗುವಂತೆ ಪತ್ರಾಂಕಿತ ಅಧಿಕಾರಿಗಳ ಹುದ್ದೆ ಅವಶ್ಯಕವಾಗಿದೆ. ತಾಲ್ಲೂಕಿನ ತಹಸೀಲ್ದಾರರ ಹಾಗೂ ಉಪ ವಿಭಾಗ ಮಟ್ಟದ ಕಚೇರಿಗಳಲ್ಲಿರುವ ಒಂದು ಶಿರಸ್ತೇದಾರ್ ಹುದ್ದೆಯನ್ನು ಗ್ರೇಡ್-ಬಿ ತಹಸೀಲ್ದಾರ್ ಹುದ್ದೆಗೆ ಉನ್ನತೀಕರಿಸುವುದು ಸೂಕ್ತವೆಂದು ಪ್ರಾದೇಶಿಕ ಆಯುಕ್ತರು ಸಲ್ಲಿಸಿದ ಪ್ರಸಾವನೆಯನ್ನು ಸರ್ಕಾರ ಮನ್ನಿಸಿ ರಾಜ್ಯದಲ್ಲಿ 228 ಶಿರಸ್ತೇದಾರರ ಹುದ್ದೆಗಳನ್ನು ಗ್ರೇಡ್-ಬಿ ತಹಸೀಲ್ದಾರ್ ಹುದ್ದೆಗೆ ಉನ್ನತೀಕರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry