ಎಚ್‌ಕೆಡಿಬಿ ಅಧ್ಯಕ್ಷ ವಿರುದ್ಧ ದೂರು

ಸೋಮವಾರ, ಜೂಲೈ 22, 2019
27 °C

ಎಚ್‌ಕೆಡಿಬಿ ಅಧ್ಯಕ್ಷ ವಿರುದ್ಧ ದೂರು

Published:
Updated:

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಎಚ್‌ಕೆಡಿಬಿ) ನೌಕರನ ಮೇಲೆ ಹಲ್ಲೆ ನಡೆಸಿದ ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ ವಿರುದ್ಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ.ಎಚ್‌ಕೆಡಿಬಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಆಪ್ತ ಸಹಾಯಕ ಶ್ರೀಮಂತ ಪಟ್ಟೇದಾರ  ಮೇಲೆ ಅಮರನಾಥ ಪಾಟೀಲ ಹಾಗೂ ಸಂಗಡಿಗರು ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.ಘಟನೆ: ಪಟ್ಟೇದಾರ ಅವರನ್ನು ಬುಧವಾರ ಸಂಜೆ ತಮ್ಮ ಮನೆಗೆ ಕರೆಸಿಕೊಂಡ ಅಧ್ಯಕ್ಷ ಅಮರನಾಥ ಪಾಟೀಲ ಜರೆದಿದ್ದಾರೆ. ಇದನ್ನು ಪಟ್ಟೇದಾರ ಪ್ರತಿಭಟಿಸಿದಾಗ ಜಾತಿ ನಿಂದನೆ ಮಾಡಿದ ಪಾಟೀಲ ಹಾಗೂ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಗಂಭೀರ ಗಾಯಗೊಂಡ ಪಟ್ಟೇದಾರ ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಠಾಣೆಯಲ್ಲಿ ದೂರು ನೀಡಲಾಗಿದೆ.ಅಮರನಾಥ ಪಾಟೀಲ ಹಾಗೂ 15 ಸಂಗಡಿಗರ ವಿರುದ್ಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ಗುರುವಾರ ಪರಿಶಿಷ್ಟ ಜಾತಿ/ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಹಾಗೂ ಸಂಘಟಿತ ಹಲ್ಲೆ, ಉದ್ದೇಶಿತ ಹಲ್ಲೆ ಮತ್ತಿತರ ಐಪಿಸಿ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರು ಪಾಟೀಲ ಅವರ ಶೋಧದಲ್ಲಿ ತೊಡಗಿದ್ದಾರೆ. ಘಟನೆಯ ಬಳಿಕ ಅಮರನಾಥ ಪಾಟೀಲ ಸಂಪರ್ಕಕ್ಕೆ ದೊರಕುತ್ತಿಲ್ಲ ಎನ್ನಲಾಗಿದೆ. ಅಮರನಾಥ್ ಬಿಜೆಪಿ ರಾಜ್ಯ ಪ್ರಧಾನ ಕಾರ‌್ಯದರ್ಶಿಯೂ ಆಗಿದ್ದಾರೆ.ಅಮರನಾಥ ಪಾಟೀಲ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಸಾಮಾಜಿಕ ಪರಿವರ್ತನ ಆಂದೋಲನದ ನೂರಾರು ಕಾರ‌್ಯಕರ್ತರು ಬುಧವಾರ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದ್ದರು. ಬಸವೇಶ್ವರ ಆಸ್ಪತ್ರೆ ಎದುರು ಮುಖ್ಯ ರಸ್ತೆಯಲ್ಲಿ ರಸ್ತೆ ತಡೆ ನಡೆಸಿದ್ದರು. ಕ್ರಮಕ್ಕೆ ಆಗ್ರಹ: ಎಚ್.ಕೆ.ಡಿ.ಬಿ. ನೌಕರ ಶ್ರೀಮಂತ ಪಟ್ಟೇದಾರ ಮೇಲೆ ಆಗಿರುವ ಹಲ್ಲೆಯನ್ನು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಬಲವಾಗಿ ಖಂಡಿಸಿದೆ. ಪದೇ ಪದೇ ಸರ್ಕಾರಿ ನೌಕರರ ಮೇಲೆ ಆಗುತ್ತಿರುವ ಹಲ್ಲೆ ಹಾಗೂ ಅನ್ಯಾಯವನ್ನು ತಡೆಗಟ್ಟಬೇಕು. ಸರ್ಕಾರಿ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಗುಲ್ಬರ್ಗ ಘಟಕದ  ಅಧ್ಯಕ್ಷ ಅಣ್ಣಾರಾಯ ಬಿ.ನಂದಿಕೂರ, ಕೇಂದ್ರ ಸ್ಥಾನ ಕಾರ್ಯದರ್ಶಿ ಬಸವರಾಜ ಭಾಗೋಡಿ, ಕಾರ್ಯದರ್ಶಿ ಶರಣ ಬಸವನಗೌಡ ಪಾಟೀಲ್ ಹಾಗೂ ಗೌರವ ಅಧ್ಯಕ್ಷ ಕೆ.ಪ್ರಕಾಶ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry