ಮಂಗಳವಾರ, ಮಾರ್ಚ್ 9, 2021
23 °C
ಕಾಂಗ್ರೆಸ್‌ ಬೆಂಬಲಿತ ಗ್ರಾಪಂ ನೂತನ ಸದಸ್ಯರ ಅಭಿನಂದನಾ ಸಮಾರಂಭ

‘ಜನರ ನಂಬಿಕೆ ಉಳಿಸಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಜನರ ನಂಬಿಕೆ ಉಳಿಸಿಕೊಳ್ಳಿ’

ಕಲಬುರ್ಗಿ: ‘ಜನರು ಅಭಿವೃದ್ಧಿಯ ದೃಷ್ಟಿಯಿಂದ ಕಾಂಗ್ರೆಸ್‌ ಬೆಂಬಲಿತ ಸದಸ್ಯರಿಗೆ ಮತ ಹಾಕಿದ್ದಾರೆ. ಅವರ ನಂಬಿಕೆಗೆ ಅನುಗುಣವಾಗಿ ಗ್ರಾಮದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಯತ್ನಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಅಲ್ಲಮ ಪ್ರಭು ಪಾಟೀಲ ಹೇಳಿದರು.ನಗರದ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಕ್ಷಿಣ ಮತಕ್ಷೇತ್ರದ ಗ್ರಾಮಗಳ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ ಬೆಂಬಲಿತ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.‘ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಮತಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಅಭ್ಯರ್ಥಿಗಳು ಮೂರು ಬಾರಿ ಸೋಲು ಅನುಭವಿಸಿದ್ದಾರೆ. ಆದರೆ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ  ಜಯ ಸಾಧಿಸಿದ್ದು ಪಕ್ಷದ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆ. ಈ ಕ್ಷೇತ್ರದಲ್ಲಿ ನಿರೀಕ್ಷಿತ ಗೆಲುವು ಸಾಧಿಸಲಾಗಿದೆ’ ಎಂದು ಹೇಳಿದರು.‘ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರಿಗೆ ₨1ಕ್ಕೆ ಅಕ್ಕಿ, ಹಲವು ‘ಭಾಗ್ಯ’ ಯೋಜನೆಗಳನ್ನು ಜಾರಿಮಾಡಿದ್ದು, ಬಡತನಮುಕ್ತ ರಾಜ್ಯ ನಿರ್ಮಾಣ ಮಾಡಲು ಪಣತೊಟ್ಟಿದೆ. ಜನರೂ ಕಾಂಗ್ರೆಸ್‌ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಗಮನಿಸುತ್ತಿದ್ದಾರೆ. ಇದರಿಂದ ಈ ನಿಟ್ಟಿನಲ್ಲಿ ನೀವು ಸಾಗಬೇಕು’ ಎಂದು ಚುನಾಯಿತ ಸದಸ್ಯರಿಗೆ ಕಿವಿಮಾತು ಹೇಳಿದರು.‘ರಾಜಕೀಯದಲ್ಲಿ ಬೆಳೆಯಬೇಕಾದರೆ ಜನರ ಬೆಂಬಲ, ಆಶೀರ್ವಾದ ಅಗತ್ಯ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದ ಸದಸ್ಯರು ಗ್ರಾಮದ ಸಮಸ್ಯೆಗಳ ಕುರಿತು ಪಕ್ಷದ ಪ್ರಮುಖರ ಜತೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿಯೂ ನಿಮಗೆ ಸಹಾಯ ಮಾಡಲು ಸಿದ್ಧ’ ಎಂದು ಭರವಸೆ ನೀಡಿದರು.ಚುನಾಯಿತ ಸದಸ್ಯ ಪವನಕುಮಾರ ವಳಕೇರಿ ಮಾತನಾಡಿ, ‘ಜನರು ಕಾಂಗ್ರೆಸ್‌ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಅವರ ಆಶಯಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.

ದಕ್ಷಿಣ ಮತಕ್ಷೇತ್ರದ ಹಲವು ಗ್ರಾಮಗಳ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ 120ಕ್ಕೂ ಅಧಿಕ ಸದಸ್ಯರನ್ನು ಗೌರವಿಸಲಾಯಿತು.ದಶರಥ ಒಂಟಿ, ಕೈಲಾಸರಾವ ಪಾಳಿ, ದೇವೇಂದ್ರಪ್ಪ ಮರತೂರ, ಮಲ್ಲಿಕಾರ್ಜುನ ಟೆಂಗಳಿ, ಶರಣು ಮೋದಿ, ಸಂಜಯ್‌ ಸಿಂಗ್‌, ಸಂತೋಷಕುಮಾರ ದಣ್ಣೂರ, ಪಾಲಿಕೆ ಉಪಮೇಯರ್‌ ಶರಣಮ್ಮ ನಾಯಿಕೋಡಿ  ಉಪಸ್ಥಿತರಿದ್ದರು. ನೀಲಕಂಠರಾವ್‌ ಮೂಲಗಿ ಸ್ವಾಗತಿಸಿದರು. ವಿಜಯಕುಮಾರ ತೇಗಲತಿಪ್ಪಿ ನಿರೂಪಿಸಿದರು.ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಸಿದ್ಧತೆ ನಡೆಸಬೇಕು. ಅಲ್ಲಿಯೂ ಕಾಂಗ್ರೆಸ್‌ ಕಹಳೆ ಮೊಳಗಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮವಹಿಸಿ

ಅಲ್ಲಮಪ್ರಭು ಪಾಟೀಲ,
ವಿಧಾನ ಪರಿಷತ್‌ ಸದಸ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.