ಅಬ್ಬರದ ಮಳೆ: ಬೆರಗಾದ ಜನತೆ

7

ಅಬ್ಬರದ ಮಳೆ: ಬೆರಗಾದ ಜನತೆ

Published:
Updated:
ಅಬ್ಬರದ ಮಳೆ: ಬೆರಗಾದ ಜನತೆ

ಕಾಳಗಿ: ಪಟ್ಟಣ ಸೇರಿದಂತೆ ಸುತ್ತಲಿನ ಎಲ್ಲೆಡೆ ಗುರುವಾರ ಸುರಿದ ಅಬ್ಬರದ ಮಳೆಗೆ ಜನಜೀವನ ತಲ್ಲಣಗೊಂಡಿದೆ. ಮೂರ‌್ನಾಲ್ಕು ದಿನಗಳಿಂದ ಆಗಾಗ ಬರುತ್ತಿದ್ದ ಮಳೆ ಗುರುವಾರ ಸಾಯಂಕಾಲ ಏಕಾಏಕಿ ಧರೆಗಿಳಿದ ದೃಶ್ಯ ನೋಡಿದ ಜನತೆ ಬೆರಗುಗೊಂಡಿದ್ದರು ಎನ್ನಲಾಗಿದೆ.ಹೊಲದ ಕೆಲಸಕ್ಕೆ ತೆರಳಿದ ಕೃಷಿಕರು ಹಸಿ ಮೈಯಿಂದ ಗಡಗಡ ನಡಗುತ್ತ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದದನ್ನು ನೋಡಿದರೆ ಎಂಥವರ ಮನಸು ಕರಗುವಂತಿದ್ದವು. ಶಾಲೆ ಬಿಡುವ ಸಮಯ ಸಮೀಪಕ್ಕೆ ಬರುತ್ತಿದ್ದಂತೆ ರಭಸವಾಗಿ ಬಂದ ಮಳೆ ಶಾಲಾ ಸಮಯ ಮುಗಿದರೂ ಮಕ್ಕಳಿಗೆಲ್ಲ ಶಾಲೆಯಲ್ಲೇ ಕೂಡಿಹಾಕುವ ಪ್ರಸಂಗ ಸೃಷ್ಟಿಸಿತ್ತು.ಚರಂಡಿ ವ್ಯವಸ್ಥೆ ಸರಿಯಿಲ್ಲದ ಕಡೆಗಳಲೆಲ್ಲ ಮತ್ತು ವಾರ್ಡ್ ನಂ.4ರಲ್ಲಿ ಮನೆಮಾರು ಎನ್ನದೆ ಕಂಡ ಕಂಡಲೆಲ್ಲ ಹರಿದ ನೀರಿಗೆ ನಿಯಂತ್ರಣವೇ ಇಲ್ಲದಂತಾಗಿತ್ತು. ಸಿಮೆಂಟ್ ರಸ್ತೆಗಳೆಲ್ಲ ಚರಂಡಿ ನೀರು ಮತ್ತು ಮಳೆ ನೀರಿನಲ್ಲಿ ಮುಚ್ಚಿಹೋಗಿ ಎಲ್ಲ ನೀರು ಒಂದೇ ಆಗಿ ಮನೆ, ಹೋಟೆಲ್, ಅಂಗಡಿಗಳ ಒಳ ನುಗ್ಗಿದ್ದವು.ಪೊಲೀಸ್ ಠಾಣೆ, ಸರ್ಕಾರಿ ಪಿಯು ಕಾಲೇಜು, ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ, ಶಿವಬಸವೇಶ್ವರ ಶಾಲೆಯ ಮೈದಾನಗಳು ಮಳೆ ನೀರಿನಿಂದ ತುಂಬಿ ತುಳುಕಾಡುತ್ತಿದ್ದವು. ಬಜಾರ್‌ದ ಮರಗಮ್ಮದೇವಿ ಗುಡಿ, ಬಸ್‌ನಿಲ್ದಾಣ, ಪಲ್ಲೆಕಟ್ಟೆ, ಚಾವಡಿ ಕಟ್ಟೆ, ಮುತ್ತ್ಯಾನ ಕಟ್ಟೆ ಸ್ಥಳಗಳಲೆಲ್ಲ ಕೊಳಚೆ ನೀರಿನ ಗಬ್ಬು ವಾಸನೆ ಬೀರತೊಡಗಿದ್ದವು.ಗ್ರಾಮಾಡಳಿತ ನಿರ್ಲಕ್ಷ್ಯ: ಇಲ್ಲಿನ ವಾರ್ಡ್ ನಂ.4ರಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಅನೇಕ ವರ್ಷ ಕಳೆದಿವೆ. ಹಲವು ಮನೆಗಳು ಹಾಗೂ ಹೋಟೆಲ್‌ಗಳಿಂದ ಹರಿಯುವ ಕೊಳಚೆ ನೀರು ರಾಜಾರೋಷವಾಗಿ ರಸ್ತೆಯ ಮೇಲೆ ರಾರಾಜಿಸುತ್ತವೆ. ಮಳೆ ಬಂದಾಗಲೆಲ್ಲ ಮಳೆ ನೀರಿನೊಂದಿಗೆ ಬೆರೆಯುವ ಈ ನೀರು ಸಿಕ್ಕ ಸಿಕ್ಕವರ ಮನೆಗಳಿಗೆ ದಾಳಿ ಮಾಡಿ ಕಲುಷಿತ ವಾತಾವರಣ ಹುಟ್ಟು ಹಾಕುತ್ತಿವೆ. ಸೊಳ್ಳೆಗಳಿಗೆ ಮತ್ತು ಸಾಂಕ್ರಾಮಿಕ ರೋಗಗಳಿಗೆ ಪ್ರೇರೇಪಿಸುತ್ತಿರುವ ಈ ಅವ್ಯವಸ್ಥೆ ವಿವಿಧ ರೋಗಗಳ ಹರಡುವಿಕೆಯ ದಾರಿ ಅನುಸರಿಸುವಂತೆ ಮಾಡಿದೆ.ಈ ಕುರಿತು ವಾರ್ಡಿನ ಜನತೆ ಅನೇಕ ಸಲ ಗ್ರಾಮ ಪಂಚಾಯತಿಗೆ ಲಿಖಿತ ಪತ್ರ ಬರೆದು ಉಂಟಾಗಿರುವ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ನೋವಿನಿಂದ ಹೇಳುತ್ತಾರೆ ಭೀಮಯ್ಯ ಗುತ್ತೇದಾರ, ರಮೇಶ ಗುತ್ತೇದಾರ, ಕೃಷ್ಣಯ್ಯ ಗುತ್ತೇದಾರ, ಮೈಲಾರಿ ಶರಗಾರ, ನಿಂಗೋಜಿ ಶರಗಾರ, ರಾಮಣ್ಣ ಕಣ್ಣಿ, ಹಣಮಂತ ಗುರಮಠಕಲ್, ರುಕ್ಮಣ್ಣ ಶರಗಾರ, ಜಾನಿಮಿಯಾ ಬಳಗಾರ, ಚಂದಮ್ಮ ಜಂಬಗಿ, ಪುಷ್ಯಮ್ಮ ಸೇಗೂರ, ನಿರ್ಮಲಾ ಜಂತಿ, ಕಾಶಪ್ಪ ಗುತ್ತೇದಾರ ಮೊದಲಾದವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry