ಸಮರ್ಪಕ ಮಳೆ: ಚೇತರಿಸಿಕೊಂಡ ಬೆಳೆ

7

ಸಮರ್ಪಕ ಮಳೆ: ಚೇತರಿಸಿಕೊಂಡ ಬೆಳೆ

Published:
Updated:
ಸಮರ್ಪಕ ಮಳೆ: ಚೇತರಿಸಿಕೊಂಡ ಬೆಳೆ

ವಿಶೇಷ ವರದಿ

ಗುಲ್ಬರ್ಗ:
ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿ ಬಿತ್ತನೆ ಮಾಡಿರುವ ರೈತರ ಮೊಗದಲ್ಲಿ ಸಂತಸ ಮೂಡಿದೆ. ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಯು ಬೆಳೆಗೆ ಪೂರಕವಾಗಿದ್ದು, ಈ ಸಲ ಒಳ್ಳೆಯ ಇಳುವರಿಯ ನಿರೀಕ್ಷೆ ಉಂಟಾಗಿದೆ.ಈ ತಿಂಗಳ ಆರಂಭ ಹಾಗೂ ಕೊನೆಯ ವಾರದಲ್ಲಿ ಸುರಿದ ಮಳೆಯು ತೀವ್ರ ಚೇತರಿಕೆಗೆ ಕಾರಣವಾಗಿದೆ. ಕೆಲವೆಡೆ ತಡವಾಗಿ ಬಿತ್ತನೆಯಾದ ಅಲ್ಪಾವಧಿ ಬೆಳೆಗೂ ಮಳೆಯಿಂದ ಪ್ರಯೋಜನವಾಗಿದೆ.ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 5.6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು, ಶೇ 89ರಷ್ಟು (4,98,825 ಹೆ.) ಬಿತ್ತನೆ ಪೂರ್ಣಗೊಂಡಿದೆ. ಆರಂಭದಲ್ಲಿ ಸುರಿದ ಮಳೆಗೆ ಹೆಸರು, ಉದ್ದು, ಹೆಸರು ಬಿತ್ತನೆ ಚುರುಕಾಗಿ ನಡೆಯಿತಾದರೂ, ನಂತರ ಮಳೆ ಇಲ್ಲದೇ ಬೆಳೆ ಹಾನಿಯಾಯಿತು. ಇದರಿಂದ ರೈತರು ಬೇರೆ ದಾರಿಯಲ್ಲದೇ ತೊಗರಿಯತ್ತ ಗಮನ ಹರಿಸಿದ್ದರು.ಜಿಲ್ಲೆಯ ಮುಖ್ಯ ವಾಣಿಜ್ಯ ಬೆಳೆ ತೊಗರಿಯನ್ನು ಆಗಸ್ಟ್ ಕೊನೆಯವರೆಗೆ 3,55,767 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಸುಮಾರು ಆರು ತಿಂಗಳ ಅವಧಿಯ ಈ ಬೆಳೆ ಬಿತ್ತನೆ ಈಗಲೂ ಕೆಲವೆಡೆ ಮುಂದುವರಿದಿದೆ.ಈ ಪೈಕಿ ಗುಲ್ಬರ್ಗ ತಾಲ್ಲೂಕಿನಲ್ಲಿ ಹೆಚ್ಚು- ಅಂದರೆ 67,152 ಹೆ. ಬಿತ್ತನೆಯಾಗಿದ್ದರೆ, ಚಿಂಚೋಳಿ ತಾಲ್ಲೂಕಿನಲ್ಲಿ ಕಡಿಮೆ (42,480 ಹೆ.) ಬಿತ್ತನೆಯಾಗಿದೆ. ಉಳಿದಂತೆ ಆಳಂದ- 44867, ಚಿತ್ತಾಪುರ- 49100, ಜೇವರ್ಗಿ- 54740, ಸೇಡಂ ತಾಲ್ಲೂಕಿನಲ್ಲಿ 46730 ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆಯಾಗಿದೆ.ಬಿತ್ತನೆಯಾದ ಬಳಿಕ ಒಂದು ತಿಂಗಳಿಗೂ ಹೆಚ್ಚು ಕಾಲ ಮಳೆಯಿಲ್ಲದೇ ರೈತರು ಕಳವಳದಲ್ಲಿದ್ದರು. ಈ ಚಿಂತೆಯನ್ನು ದೂರ ಮಾಡುವಂತೆ ಆಗಸ್ಟ್ ತಿಂಗಳಲ್ಲಿ ಮಳೆರಾಯ ಆಗಮಿಸಿದ್ದಾನೆ. ಈ ತಿಂಗಳಲ್ಲಿ ಸರಾಸರಿ 167 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಅದಕ್ಕಿಂತ ಶೇ 13ರಷ್ಟು ಜಾಸ್ತಿ (190 ಮಿ.ಮೀ) ಪ್ರಮಾಣ ಮಳೆ ಸುರಿದಿರುವುದು ತೊಗರಿ ಬೆಳವಣಿಗೆಗೆ ನೆರವಾಗಲಿದೆ.ಚಿಂಚೋಳಿ ಹಾಗೂ ಸೇಡಂನ ಕೆಲವು ಭಾಗಗಳಲ್ಲಿ ಮಾತ್ರ ಅತಿ ಹೆಚ್ಚು ಮಳೆಯಿಂದ ತುಸು ಹಾನಿ ಉಂಟಾಗಿರುವುದನ್ನು ಬಿಟ್ಟರೆ, ಉಳಿದಂತೆ ತೊಂದರೆಯೇನೂ ಇಲ್ಲ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಅಭಿಮತ.ಇಲಾಖೆ ಬದ್ಧ: ಜಿಲ್ಲೆಯಲ್ಲಿ 18,306 ಕ್ವಿಂಟಲ್ ಬಿತ್ತನೆ ಬೀಜ ಅಗತ್ಯವಿದ್ದು, 20,005 ಕ್ವಿಂಟಲ್ ದಾಸ್ತಾನು ಇದೆ. ಈ ಪೈಕಿ ಈವರೆಗೆ 2794 ಕ್ವಿಂಟಲ್ ಬೀಜ ವಿತರಿಸಲಾಗಿದೆ. ಆಗಸ್ಟ್ ಕೊನೆಯ ವಾರದವರೆಗೆ 54,325 ಟನ್ ರಸಗೊಬ್ಬರದ ಅಗತ್ಯವಿದ್ದು, ಇದನ್ನು ಸೇವಾ ಸಹಕಾರ ಸಂಘಗಳ ಮೂಲಕ ವಿತರಿಸಲಾಗುತ್ತಿದೆ.“ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆ ಉದ್ಭವಿಸಿಲ್ಲ. ರೈತರಿಗೆ ಅಗತ್ಯ ಪ್ರಮಾಣದಷ್ಟು ಬೀಜ ಹಾಗೂ ಗೊಬ್ಬರ ವಿತರಿಸಲು ಇಲಾಖೆ ಬದ್ಧವಾಗಿದೆ” ಎಂದು ಜಂಟಿ ಕೃಷಿ ನಿರ್ದೇಶಕ ಎಂ.ಚಂದ್ರಶೇಖರ `ಪ್ರಜಾವಾಣಿ~ಗೆ ತಿಳಿಸಿದರು.ಕಳೆದ ಎರಡು ದಿನಗಳಿಂದ ಮಳೆ ಬಿಡುವು ಕೊಟ್ಟಿದ್ದು, ಕಳೆ ತೆಗೆಯುವ ಕೆಲಸ ಭರದಿಂದ ಸಾಗಿರುವುದು ಗ್ರಾಮೀಣ ಪ್ರದೇಶದಲ್ಲಿ ಕಂಡುಬರುತ್ತಿದೆ. ಅಲ್ಪಾವಧಿ ಬೆಳೆಗಳು ಹೂವು ಬಿಡುವ ಹಂತದಲ್ಲಿದ್ದರೆ, ಕೆಲವು ಬೆಳೆಗಳು ಕಾಯಿ ಬಿಡುವ ಹಂತದಲ್ಲಿವೆ. ಕಳೆದ ವರ್ಷ ಬರ- ಪ್ರಾಕೃತಿಕ ಹಾನಿ ಅನುಭವಿಸಿದ್ದ ರೈತರು ಈ ಸಲವಾದರೂ ಅಂಥ ಪರಿಸ್ಥಿತಿ ಬಾರದಿರಲಿ ಎಂದು ಮೊರೆಯಿಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry