ಶುಕ್ರವಾರ, ಮೇ 7, 2021
25 °C

17ರಿಂದ ರಾಷ್ಟ್ರೀಯ ಕನ್ನಡ ಸಂಶೋಧನಾ ಕಮ್ಮಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಂಶೋಧನಾ ಕೇಂದ್ರದ ವತಿಯಿಂದ  ಸೆ.17 ಮತ್ತು 18ರಂದು ನಗರದ ಕನ್ನಡ ಭವನದಲ್ಲಿ ರಾಷ್ಟ್ರೀಯ ಕನ್ನಡ ಸಂಶೋಧನಾ ಕಮ್ಮಟ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ ತಿಳಿಸಿದರು.ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನೀಡಲಾಗುವ 1 ಲಕ್ಷ ರೂಪಾಯಿ ಹಾಗೂ ಶಿಬಿರಾರ್ಥಿಗಳಿಂದ ಸಂಗ್ರಹಿಸಲಾದ ತಲಾ 100 ರೂಪಾಯಿ ಬಳಸಿಕೊಂಡು ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಉಪಯುಕ್ತ ಕಮ್ಮಟ ಆಯೋಜಿಸಲಾಗಿದೆ ಎಂದು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ನಾಡಿನ ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಉದ್ಘಾಟಿಸಲಿರುವ ಈ ಕಮ್ಮಟಕ್ಕೆ ಡಾ. ಮಳಲಿ ವಸಂತಕುಮಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಡಾ. ವೀರಣ್ಣ ದಂಡೆ ಅಧ್ಯಕ್ಷತೆ ವಹಿಸಲಿದ್ದಾರೆ.ಸಾಹಿತ್ಯ ಸಂಶೋಧನೆ-ಹೊಸ ಸವಾಲುಗಳು, ಹೊರಳು ಹಾದಿಯಲ್ಲಿ ಸಾಂಸ್ಕೃತಿಕ ಸಂಶೋಧನೆಗಳು, ಜಾನಪದೀಯ ಸಂಶೋಧನೆಯ ಬಹುಮುಖ ನೆಲೆಗಳು, ಭಾಷಾಶಾಸ್ತ್ರ-ಸಂಶೋಧನೆ, ಐತಿಹಾಸಿಕ ಸಂಶೋಧನೆ ಸಾಧ್ಯತೆ-ಸವಾಲುಗಳು ಎಂಬ ವಿಷಯ ಕುರಿತು ನಡೆಯಲಿರುವ 5 ಗೋಷ್ಠಿಗಳಲ್ಲಿ ಡಾ. ಬಸವರಾಜ ಸಬರದ, ಡಾ. ರಹಮತ ತರೀಕೆರೆ, ಡಾ. ಸೂರ್ಯಕಾಂತ ಸುಜ್ಯಾತ, ಡಾ. ಟಿ. ಗೋವಿಂದರಾಜು, ಡಾ. ಡಿ.ಬಿ. ನಾಯಕ, ಡಾ. ಕಿಕ್ಕೇರಿ ನಾರಾಯಣ, ಡಾ. ವಿಕ್ರಮ ವಿಸಾಜಿ, ಡಾ. ಹನುಮಾಕ್ಷಿ ಗೋಗಿ, ಪ್ರೊ. ಆರ್.ಕೆ. ಹುಡಗಿ ಪಾಲ್ಗೊಂಡು ಮಾತನಾಡಲಿದ್ದಾರೆ ಎಂದರು.18ರಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಮಭಕ್ಕೆ ಡಾ. ಡಿ.ಸಿ. ರಾಜಪ್ಪ, ಬಿಜಿ. ಪಾಟೀಲ, ಪ್ರೊ. ಬಿ.ಪಿ. ಹೂಗಾರ ಆಗಮಿಸಲಿದ್ದಾರೆ. ಕಮ್ಮಟದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳಿಗೆ ಪೆನ್, ಬ್ಯಾಗ್, ಟಿಪ್ಪಣೆ ಪುಸ್ತಕ, ಉಪಹಾರ, ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಈಗಾಗಲೇ 32 ಸಂಶೋಧಕರು ತಮ್ಮ ಹೆಸರನ್ನು ನೋಂದಾಯಿಸಿದ್ದು, ಕೇವಲ 50 ಜನ ಸಂಶೋಧಕರು ಮಾತ್ರ ಕಮ್ಮಟದಲ್ಲಿ ಭಾಗವಹಿಸಬಹುದಾಗಿದೆ ಎಂದು ವಿವರಿಸಿದರು.ಈಚೆಗೆ ಕಳಪೆ ಮಟ್ಟದ ಸಂಶೋಧನೆಗಳು ಹೆಚ್ಚಾಗುತ್ತಿವೆ ಎಂಬ ಆಪಾದನೆ ಹೋಗಲಾಡಿಸುವ ಉದ್ದೇಶದಿಂದ ಸಂಶೋಧನೆಯಲ್ಲಿ ತೊಡಗಿರುವ ಈ ಭಾಗದ ವಿದ್ಯಾರ್ಥಿಗಳಿಗೆ ಆ ನಿಟ್ಟಿನಲ್ಲಿ ಪೂರ್ವಭಾವಿ ತಯಾರಿಗಾಗಿ ಪರಿಣಾಮಕಾರಿ ಮತ್ತು ಗಂಭೀರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಅನುಕೂಲ ಕಲ್ಪಿಸುವುದಕ್ಕಾಗಿ ಈ ಪ್ರಯತ್ನ ಮಾಡಲಾಗಿದೆ ಎಂದು ಕಮ್ಮಟ ಸಂಚಾಲಕ ಡಾ. ಪ್ರಭು ಖಾನಾಪುರೆ ತಿಳಿಸಿದರು.

ದೌಲತರಾಯ ಮಾಲಿಪಾಟೀಲ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.