ಶುಕ್ರವಾರ, ಮೇ 29, 2020
27 °C

ಭಕ್ತಿ ಮಧ್ಯೆ ಸಾಗಿದ ಬ್ರಹ್ಮೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಕ್ತಿ ಮಧ್ಯೆ ಸಾಗಿದ ಬ್ರಹ್ಮೋತ್ಸವ

ಕಾಳಗಿ: ವಿಸ್ಮಯ ಬತ್ತದ ಬೆಳೆಗೆ ಹೆಸರಾದ ತಿರುಮಲ ತಿರುಪತಿ ಹಾಥೀರಾಮಜೀ ಮಠದ ಸುಗೂರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಪ್ರಾರಂಭವಾದ ದ್ವಿತೀಯ ಬ್ರಹ್ಮೋತ್ಸವ ಸಂಭ್ರಮ ಅಪಾರ ಸದ್ಭಕ್ತರ ಶ್ರದ್ಧೆ, ಭಕ್ತಿಯ ಮಧ್ಯೆ ಬಹು ವಿಜೃಂಭಣೆಯಿಂದ ಸಾಗಿತ್ತು. ನಾಡಹಬ್ಬ ದಸರಾ ಸಂದರ್ಭದಲ್ಲಿ ನಡೆಯುವ ಬ್ರಹ್ಮೋತ್ಸವದಲ್ಲಿ ಗರುಡ ಪಂಚಮಿ ಉದಯ ದಿನವಾಗಿದ್ದ ಶನಿವಾರ ಬೆಳಿಗ್ಗೆ ಮೂಲಪುರುಷ ವೆಂಕಟೇಶ್ವರಸ್ವಾಮಿಗೆ ಅಭಿಷೇಕ ನೆರವೇರಿತು. ಅರ್ಜುನದಾಸ ಮಹಾಂತವಾರು ಅವರ ಸಾನಿಧ್ಯದಲ್ಲಿ ಯಾಗಾಶಾಲಾ ಪ್ರವೇಶ, ಕಲಸ ಸ್ಥಾಪನೆ, ಅಗ್ನಿ ಪ್ರತಿಷ್ಠಾ ಮತ್ತು ಗಣಪತಿ ಹೋಮ ನಡೆಯಿತು.  ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎನ್.ಧರ್ಮಸಿಂಗ್ ಧ್ವಜ ಸ್ತಂಭ, ಗರುಡ ಮೂರ್ತಿ ಮತ್ತು ಬಲಿ ಪೀಠ ಪ್ರತಿಷ್ಠಾಪನೆ ಮಾಡುವ ಮೂಲಕ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಿದರು.  ತದನಂತರ ಹೋಮ, ಧ್ವಜಾರೋಹಣ ಆಂಕರಾರ್ಪಣ ಜರುಗಿತು.

 

ರಾತ್ರಿ ಪ್ರದಕ್ಷಿಣೆಗೈದ ಗರುಡ ವಾಹನ, ಶಯನಾ ಸೇವಾ ಭಕ್ತಿ-ಭಾವದ ಸಂಪನ್ನತೆಗೆ ಹೆಸರಾಯಿತು. ಬ್ರಹ್ಮೋತ್ಸವದ ಒಂದೊಂದು ಸ್ತರಗಳಲ್ಲಿ ಷಷ್ಟಿ ಉದಯ ಭಾನುವಾರದಂದು ವಾಸ್ತು ಪೂಜಾ, ಪಲ್ಲಕ್ಕಿಯಲ್ಲಿ ಮೋಹಿನಿ ಉತ್ಸವ, ಶೇಷವಾಹನ, ಶಯನಾ ಸೇವೆ ಭಕ್ತರನ್ನು ಆಕರ್ಷಿಸಿತು.  ಸಪ್ತಮಿ ಉದಯ ಸೋಮ-ವಾರ ದಿನ ಶ್ರೀನಿವಾಸ ಕಲ್ಯಾಣೋತ್ಸವ, ಹನುಮಾನವಾಹನ ನೋಡುಗರಿಗೆ ಚಕಿತಗೊಳಿಸಿತು.ಅಷ್ಟಮಿ ಉದಯ ಮಂಗಳವಾರದ ಸಿಂಹ ವಾಹನ ಮೆರವಣಿಗೆ ಸರ್ವರನ್ನು ಕೈ ಮಾಡಿ ಕರೆಯುವಂತಿತ್ತು. ನವಮಿ ಉದಯ ಬುಧವಾರ ಜರುಗಿದ ಸೂರ್ಯ ವಾಹನ, ಹೋಮ, ಚಂದ್ರ ವಾಹನ, ಶಯನಾ ಸೇವೆಯು ನವರಾತ್ರಿಯ ವೈಭವ ಮರುಕಳಿಸಿತು. ದಶಮಿ ಉದಯ ಗುರುವಾರ ನೆರವೇರಿದ ಅಭಿಷೇಕ, ಹೋಮ ಮತ್ತು ಪುಷ್ಪೋತ್ಸವ, ಬನ್ನಿಪೂಜೆ, ಅಶ್ವವಾಹನದ ಸಂಭ್ರಮ ವಿಜಯದಶಮಿಗೆ ಕಳೆ ಚೆಲ್ಲಿ ಸರ್ವರಲ್ಲಿನ ಭಕ್ತಿ-ಭಾವಕ್ಕೆ  ಸಂಭ್ರಮ ಸೃಷ್ಟಿಯಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.