ಗುರುವಾರ , ಮೇ 19, 2022
20 °C

ಕುರುಬ ಗಲ್ಲಿಯತ್ತ ಹರಿದೀತೇ ಚಿತ್ತ..?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳಗಿ: ಆರು ವಾರ್ಡ್‌ಗಳು, ಇಪ್ಪತ್ತು ಜನ ಪ್ರತಿನಿಧಿಗಳು ಹೊಂದಿರುವ ಇಲ್ಲಿನ ಗ್ರಾಮ ಪಂಚಾಯತಿ 2ನೇ ಬ್ಲಾಕ್‌ನಲ್ಲಿ ಬರುವ ಕುರುಬ ಗಲ್ಲಿಯ ಕಡೆಗೆ ಗಮನ ಹರಿಸುವುದರಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ ಆರೋಪಿಸಿದೆ. ಕುರುಬ ಗಲ್ಲಿಯು ಇಡೀ ಊರಿಗೆ ಹಳೆಯದಾಗಿರುವಂಥದ್ದು. ಗ್ರಾಮ ಹುಟ್ಟಿದಾಗಿನಿಂದಲೂ ಇದಕ್ಕೆ ಅಗತ್ಯ ಸೌಲಭ್ಯಗಳು ದೊರಕದೆ ತೀರಾ ಹಿಂದುಳಿದಿದೆ ಎಂದು ಸಂಘ ಆಪಾದಿಸಿದೆ.ಕುಡಿಯುವ ನೀರು ಒದಗಿಸುವ `ಕುರುಬ ಬಾವಿ~ಯಲ್ಲಿ ಬಚ್ಚಲು, ಕೊಳಚೆ ನೀರು ಒಳನುಗ್ಗುತ್ತಿದ್ದು ನೀರೆಲ್ಲ ಹೊಲಸಾಗಿ ರೋಗಾಣು ಹುಟ್ಟಿಕೊಳ್ಳುತ್ತಿವೆ. ಸುತ್ತಲೂ ಮುಳ್ಳಿನ ಗಿಡಗಳೆದ್ದು ಯಾರೂ ಬಾವಿಯತ್ತ ಸುಳಿಯದ ಸ್ಥಿತಿ ನಿರ್ಮಾಣವಾಗಿದೆ.ನಡೆದಾಡಲು ಭಯ!: ಊರೆಲ್ಲ ಸಿಮೆಂಟ್ ರಸ್ತೆಗಳಾದರೂ ಈ ಗಲ್ಲಿ ಪ್ರವೇಶಿಸುವ ಮತ್ತು ಒಳ ರಸ್ತೆಗಳೆಲ್ಲ ಹಿಂದಿನ ಸ್ಥಿತಿಯಲ್ಲಿಯೇ ಇವೆ. ಎಲ್ಲಿ ನೋಡಿದರಲ್ಲಿ ಚರಂಡಿ ನೀರು, ಬದಿಗೆಲ್ಲ ಮುಳ್ಳಿನ ಗಿಡಗಂಟಿ. ಹಾವು ಇತರ ವಿಷಜಂತುಗಳ ಕಾಟ ಹೆಚ್ಚಾಗಿದೆ. ಕಸಗೂಡಿಸುವವರು ಒಂದು ದಿನವೂ ಇಲ್ಲಿ ಕಾಲಿಟ್ಟಿಲ್ಲ. ಕೆಸರುರಾಶಿ ಮತ್ತು ಜಾಲಿಮುಳ್ಳಿನ ರಾಶಿಯೊಂದಿಗೆ ತುಂಬಿಕೊಂಡಿರುವ ಈ ರಸ್ತೆಯಲ್ಲಿ ಓಡಾಡುವುದೆಂದರೆ ಜನತೆ ಭಯಪಡುವಂತಾಗಿದೆ!ಬೀದಿ ಕಂಬಗಳಿಗೆ ಅಲ್ಲಲ್ಲಿ ಕಾಣುವ ವಿದ್ಯುತ್ ಬಲ್ಬ್‌ಗಳು ಬೆಳಕು ನೀಡುತ್ತಿಲ್ಲ. ಕತ್ತಲಿನಿಂದಾಗಿ ಅನೇಕ ವೃದ್ಧರು ಹಾಗೂ ಮಹಿಳೆಯರು ದಾರಿಯಲ್ಲಿ ಎಡವಿ ಬಿದ್ದ ಘಟನೆಗಳು ಸಂಭಸಿವೆ.ಮಹಿಳೆಯರಿಗೆ ಇರಬೇಕಾದ ಶೌಚಾಲಯ ಇಲ್ಲಿಲ್ಲ; ಹೀಗಾಗಿ `ಬಯಲೇ ಎಲ್ಲದಕ್ಕೂ..~ ಎಂಬ ದಯನೀಯ ಸನ್ನಿವೇಶವಿದೆ. ನಾನಾ ಸೌಲಭ್ಯಗಳ ಕೊರತೆಯಲ್ಲಿ ನಲಗುತ್ತಿರುವ ಈ ಗಲ್ಲಿಯ ಕಡೆಗೆ ಕೇವಲ ಚುನಾವಣೆ ಬಂದಾಗ ಮಾತ್ರ ಬರುವ ಜನನಾಯಕರು ಉಳಿದ ಸಮಯದಲ್ಲಿ `ಕ್ಯಾರೇ~ ಎನ್ನುವುದಿಲ್ಲ ಎಂಬ ಗೋಳು ಇಲ್ಲಿನ ನಿವಾಸಿಗಳದು.ಹೋರಾಟದ ಎಚ್ಚರಿಕೆ: ಹೀಗಾಗಿ ದಿನಗಳೆದಂತೆ ಗಲ್ಲಿಯ ವಾತಾವರಣ ಹದಗೆಡುತ್ತಿದೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರತೊಡಗಿದೆ. ಅಧಿಕಾರಿಗಳು ತಕ್ಷಣ ಈ ಕಡೆಗೆ ಗಮನಹರಿಸಿ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಬೇಕು. ಈ ಹಿಂದಿನಂತೆ ವಿಳಂಬ ಧೋರಣೆ ಅನುಸರಿಸಿದರೆ ಪ್ರತಿಭಟನೆ- ಹೋರಾಟ ಮಾಡಬೇಕಾಗುತ್ತದೆ ಎಂದು ಸಂಘದ ಗೌರವಾಧ್ಯಕ್ಷ ರವಿ ಹೂಗೊಂಡ, ಅಧ್ಯಕ್ಷ ಶಾಂತಕುಮಾರ ಪಾಟೀಲ, ಮಲ್ಲಿಕಾರ್ಜುನ ದಿಗವಾಲ್ ಎಚ್ಚರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.