ಸೋಮವಾರ, ಮೇ 23, 2022
20 °C

ಹಬ್ಬ ಮುಗಿಯಿತು: ತ್ಯಾಜ್ಯ ಉಳಿಯಿತು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಬ್ಬ ಮುಗಿಯಿತು: ತ್ಯಾಜ್ಯ ಉಳಿಯಿತು!

ಗುಲ್ಬರ್ಗ: ನವರಾತ್ರಿ ಉತ್ಸವದ ಅಂಗವಾಗಿ ನಗರದಾದ್ಯಂತ ದೇವಿಪೂಜೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದ್ದಾಯಿತು. ಈ ಸಂಭ್ರಮ, ಸಡಗರ ಕೊನೆಗೊಂಡಿದ್ದರೂ ಹಬ್ಬವು ಬಿಟ್ಟು ಹೋದ ತ್ಯಾಜ್ಯ ಮಾತ್ರ ಇನ್ನೂ ಹಾಗೇ ಉಳಿದುಕೊಂಡಿದೆ.ತಟ್ಟೆಯೊಂದರಲ್ಲಿ ಹಾಕಿದ ಮಣ್ಣಿನಲ್ಲಿ ಒಂಬತ್ತು ತರಹದ ಧಾನ್ಯದ ಬೀಜಗಳನ್ನು ನೆಟ್ಟು, ಘಟಸ್ಥಾಪನೆ ಮಾಡುತ್ತಾರೆ. ಬಳಿಕ ಇದರಲ್ಲಿ ಮೊಳಕೆಯೊಡೆದ ಸಸಿಗಳನ್ನು ಒಂಬತ್ತು ದಿನಗಳವರೆಗೆ ವಿವಿಧ ಬಗೆಯ ವಿಶೇಷ ವಿಧಾನಗಳೊಂದಿಗೆ ಪೂಜಿಸುತ್ತಾರೆ. ಹೀಗೆ ಪೂಜಿಸಲಾದ ಸಸಿಗಳನ್ನು ವಿಜಯದಶಮಿ ಹಬ್ಬದ ಮರುದಿನ ಮನೆಯಲ್ಲಿದ್ದ ಇತರೆ ಪೂಜಾಪದಾರ್ಥಗಳ ತ್ಯಾಜ್ಯಗಳೊಂದಿಗೆ ಕೆರೆಗೆ ಬಿಡುವುದು ಸಂಪ್ರದಾಯ. ಗ್ರಾಮೀಣ ಭಾಗದಲ್ಲಿ ಧಾನ್ಯದ ತ್ಯಾಜ್ಯಗಳನ್ನು ಹೊಲಗಳಲ್ಲಿ ಚೆಲ್ಲುತ್ತಾರೆ.ಪೂಜಾಪದಾರ್ಥ ಸೇರಿದಂತೆ ತ್ಯಾಜ್ಯವನ್ನು ಒಂದೇ ಕಡೆಯಲ್ಲಿ ವಿಸರ್ಜಿಸಲು ಗುಲ್ಬರ್ಗದಲ್ಲಿ ಮಹಾನಗರ ಪಾಲಿಕೆಯು ಪ್ರತ್ಯೇಕ ಹೊಂಡದ ವ್ಯವಸ್ಥೆ ಕಲ್ಪಿಸಿದೆ. ಆದರೆ ನಗರದಲ್ಲಿ ಪಾಲಿಕೆಯು ನಿಷೇಧಿಸಿರುವ ಪ್ಲಾಸ್ಟಿಕ್ ಚೀಲಗಳು ಸೇರಿದಂತೆ ಸಸಿಗಳನ್ನು ವಿಸರ್ಜನೆ ಮಾಡಿರುವುದರಿಂದ ಹೊಂಡ ಈಗ ಗಬ್ಬೆದ್ದಿದೆ.ನಗರದ ಹೃದಯ ಭಾಗದಲ್ಲಿರುವ ಶರಣಬಸವೇಶ್ವರ ಕೆರೆ ಉದ್ಯಾನ ಪಕ್ಕದಲ್ಲಿ ನಿರ್ಮಿಸಿದ ಈ ವಿಸರ್ಜನೆ ಘಟಕದ ಕಡೆಗೆ ಒಂದು ಕ್ಷಣ ಕಣ್ಣು ಹಾಯಿಸಿದರೆ ಸಾಕು; ಪರಿಸರಕ್ಕೆ ಹಾನಿ ಉಂಟುಮಾಡುವ ಅನೇಕ ತ್ಯಾಜ್ಯಗಳು ಕಂಡುಬರುತ್ತವೆ.ಈ ಹಿಂದೆ ಗಣೇಶ ಹಬ್ಬ ಮುಗಿದ ನಂತರ ಗಣೇಶ ವಿಗ್ರಹಗಳನ್ನು ಇದೇ ಘಟಕದಲ್ಲಿ ವಿಸರ್ಜಿಸಲಾಗಿತ್ತು. ಆದರೆ ಕೆರೆ ಅಭಿವೃದ್ಧಿ ಪ್ರಾಧಿಕಾರದವರು ಸೂಕ್ತ ವಿಲೇವಾರಿ ಮಾಡಿರಲಿಲ್ಲ. ಹೀಗಾಗಿ ಈ ಮೊದಲಿನ ತ್ಯಾಜ್ಯದ ಜಾಗದಲ್ಲಿ ಇದೀಗ ಸಸಿ ವಿಸರ್ಜನೆ ನಡೆಯುತ್ತಿರುವುದರಿಂದ ಈ ಘಟಕ ಮತ್ತಷ್ಟು ಹೊಲಸಾಗಿದೆ. “ಪ್ರತಿ ದಿನ ಉದ್ಯಾನದಲ್ಲಿ ವಿಹರಿಸಲು ಅನೇಕ ಜನರು ಬರುತ್ತಾರೆ. ಆದರೆ ಇಲ್ಲಿಂದ ಬೀರುವ ದುರ್ವಾಸನೆ ಜನರನ್ನು ದೂರ ಮಾಡುತ್ತಿದೆ” ಎಂದು ನಗರದ ನಿವಾಸಿ ಈಶ್ವರ ತೆಗನೂರ ಅಸಹನೆ ವ್ಯಕ್ತಪಡಿಸಿದರು.ಆದರೆ ಈ ಕೆರೆಯಲ್ಲಿಯೇ ಸಸಿ ಬಿಡುವುದು ಹಿಂದಿನಿಂದ ಬಂದಿರುವ ಸಂಪ್ರದಾಯವಾಗಿದೆ. ಉದ್ಯಾನದಲ್ಲಿ ದುರ್ವಾಸನೆ ಬರುತ್ತದೆ ಎಂಬುದು ನಿಜ; ಆದರೆ ನಮಗೆ ಬೇರೆ ದಾರಿಯಿಲ್ಲ” ಎಂದು ಸಸಿ ಚೆಲ್ಲಲು ಬಂದಿದ್ದ ಮಹಿಳೆಯೊಬ್ಬರು ಹೇಳಿದರು.ನಗರದ ಬಹುತೇಕ ಬಡಾವಣೆಯ ಜನರು ಇಲ್ಲಿಯೇ ಗಣೇಶ ವಿಗ್ರಹ, ಸಸಿ ವಿಸರ್ಜನೆ ಮಾಡುತ್ತಿರುವುದರಿಂದ ಇದರಲ್ಲಿನ ತ್ಯಾಜ್ಯವನ್ನು ಬೇಗನೇ ತೆಗೆದುಹಾಕುವುದು ಕಷ್ಟ ಎನ್ನುತ್ತಾರೆ ಉದ್ಯಾನದ ಕೆಲಸಗಾರ ಲಕ್ಷ್ಮಣ.ಗುಲ್ಬರ್ಗ ಪ್ರಾದೇಶಿಕ ಆಯುಕ್ತರಾಗಿದ್ದ ರಜನೀಶ ಗೋಯಲ್ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿಯಾಗಿದ್ದ ಡಾ. ಶಾಲಿನಿ ರಜನೀಶ ಅವರ ಕಾಳಜಿಯಿಂದಾಗಿ ಸುಂದರ ಉದ್ಯಾನವಾಗಿ ರೂಪುಗೊಂಡ ಶರಣಬಸವೇಶ್ವರ ಕೆರೆ, ಇದೀಗ ತ್ಯಾಜ್ಯ ವಸ್ತುಗಳ ಸಂಗಮವಾಗಿ ಪರಿಣಮಿಸಿದೆ.ಜನರು ಇತ್ತ ಸುಳಿಯದಂತೆ ಮಾಡಿರುವ ತ್ಯಾಜ್ಯವನ್ನು ಕೆರೆಯಿಂದ ಬೇರೆಡೆಗೆ ಸಾಗಿಸಿ, ದುರ್ವಾಸನೆ ನಿವಾರಿಸಲು ಕ್ರಮ ಕೈಗೊಳ್ಳಬೇಕೆಂಬುದು ಜನರ ಸಲಹೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.