ಭಾನುವಾರ, ಮೇ 22, 2022
29 °C

ರಾಜಕೀಯದ ಹೊಲಸು: ಕಮರಿದ ಕನಸು

ವಿಶೇಷ ವರದಿ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: `ನಾನು ಕೆಲಸಕ್ಕೆ ರಾಜೀನಾಮೆ ನೀಡಿದರೆ ಜನ ತಪ್ಪಿತಸ್ಥೆ ಎಂದುಕೊಳ್ಳುತ್ತಾರೆ. ಅದಕ್ಕಾಗಿ ಕೆಲಸ ಬಿಡುವುದಿಲ್ಲ.~ ಎಂದು ತಾಯಿಗೆ ಹೇಳಿದ್ದ ಅಭಿವೃದ್ಧಿ ಕನಸಿನ ಮಂದಾಕಿನಿ ಭಾನುವಾರ ಜೀವನಕ್ಕೇ ಗುಡ್‌ಬೈ ಹೇಳಿ ಹೋದರು. ಪಂಚಾಯಿತಿ ರಾಜಕೀಯದ ಉರುಳಿಗೆ ಕೊರಳೊಡ್ಡಿ ಬಲಿಯಾದರು.ಇದು ತಮ್ಮ ಮನೆಯ ಫ್ಯಾನಿನ ನೇಣಿಗೆ ಶರಣಾದ ಸಣ್ಣೂರ ಗ್ರಾಮದ ಪಿಡಿಒ ಮಂದಾಕಿನಿ(23)ಯ ದುರಂತ ಅಂತ್ಯ. ಭ್ರಷ್ಟಾಚಾರ ಹಾಸುಹೊದ್ದ ರಾಜಕಾರಣಿಗಳ ಕರಾಳತೆಗೆ ಹಿಡಿದ ಕೈಗನ್ನಡಿ. ಇದು ಕೇವಲ ಮಂದಾಕಿನಿಯೊಬ್ಬಳ ಸಮಸ್ಯೆಯಲ್ಲ, ಪಂಚಾಯತ್ ರಾಜ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ತಳಮಟ್ಟದ ಅಧಿಕಾರಿಗಳ ತಳಮಳ. ಮುದ್ದಿನ ಮಗಳು:
ಬಿ.ಶ್ಯಾಮಸುಂದರ ನಗರದ ಸಣ್ಣ ಗುತ್ತಿಗೆದಾರ ಶಂಕರ ಯಕಲೂರ ಹಾಗೂ ಛಾಯಾ ಅವರ ಮುದ್ದಿನ ಮಗಳು. ತಂದೆ ಎಂಟು ತಿಂಗಳ ಹೃದಯಾಘಾತದಿಂದ ಮೃತಪಟ್ಟಿದ್ದರು. ಇಬ್ಬರು ಅಣ್ಣಂದಿರು. ಒಬ್ಬ ಶಿಕ್ಷಕ. ಇನ್ನೊಬ್ಬ ವಿಮಾ ಏಜೆಂಟ್. ನೆಮ್ಮದಿಯ ಸಂಸಾರ.ಬಿಎ ಪದವಿ ಪೂರೈಸಿದ ಮಂದಾಕಿನಿಗೆ ಬೌದ್ಧದಮ್ಮದಲ್ಲಿ ಒಲವು. ಆದರ್ಶ ಬದುಕಿನ ಹಂಬಲ. ನಾಗಪುರಕ್ಕೆ ಹೋಗಿ ಒಂದು ವರ್ಷ ತರಬೇತಿ ಪಡೆದಿದ್ದಳು. ಸಮಾನತೆ, ಪ್ರಾಮಾಣಿಕತೆ, ನಿಷ್ಠುರ ಸೇವೆಯ ಕನಸು ಚಿಗುರೊಡೆದಿತ್ತು. ಬಿಇಡಿಗೆ ಸೇರಿದ್ದ ಆಕೆ, ಒಂದೂವರೆ ವರ್ಷದ ಹಿಂದೆ ಪಿಡಿಒ ಆಗಿ ನೇಮಕಗೊಂಡಳು.  ಮೊದಲ ಕಾರ್ಯಕ್ಷೇತ್ರವೇ ಸಣ್ಣೂರು. ಸಣ್ಣೂರ ಗ್ರಾಪಂ: ಸಣ್ಣೂರ ಗ್ರಾಮ ಪಂಚಾಯಿತಿಯಲ್ಲಿ ಎರಡು ಗುಂಪುಗಳು. ಅವುಗಳ ನಡುವೆ  ಆಗಾಗ್ಗೆ ತಿಕ್ಕಾಟ ತಾರಕಕ್ಕೇರುತ್ತದೆ. ಇತ್ತೀಚೆಗೆ ಆಡಳಿತವೂ ಬದಲಾಗಿತ್ತು. ಈ ಒತ್ತಡಗಳ ನಡುವೆಯೂ ಮಂದಾಕಿನಿ ನಿಷ್ಠುರವಾಗಿದ್ದಳು ಎಂದು ಸ್ಥಳೀಯರು ಹೇಳುತ್ತಾರೆ. ಅವ್ಯವಹಾರ ಆರೋಪದ ಮೇಲೆ ಕರ ಸಂಗ್ರಹಕಾರ ವಾಸುದೇವ ಜಾಧವ್ ಎಂಬಾತನನ್ನು ಗ್ರಾಪಂ ಆಡಳಿತವು ಅಮಾನತುಗೊಳಿಸಿತ್ತು. ಆತ ಆದೇಶ ರದ್ದುಗೊಳಿಸುವಂತೆ ಮಂದಾಕಿನಿಗೆ ದುಂಬಾಲು ಬಿದ್ದ. ಈ ನಡುವೆ ನಕಲಿ ಬಿಲ್ ಪಾಸ್ ಮಾಡಲು ಕೆಲವರ ಒತ್ತಡವೂ ಇತ್ತು. ಆಕೆ ಸಮ್ಮತಿಸಿರಲಿಲ್ಲ ಎನ್ನುತ್ತಾರೆ ಸಂಬಂಧಿ  ಸೂರ್ಯಕಾಂತ ನಿಂಬಾಳ್ಕರ್. ಹೀಗಾಗಿ ಜಗದೀಶ ಪಾಟೀಲ, ಮಾಜಿ ಅಧ್ಯಕ್ಷ ಬಸವರಾಜ ಹಕ್ಕಿ ಹಾಗೂ ವಾಸುದೇವ ಫೋನ್ ಮೂಲಕ, ಕಚೇರಿಗೆ ಬಂದು ಕಿರುಕುಳ ನೀಡುತ್ತಿದ್ದರು. ವಾಸುದೇವನನ್ನು ಬೆಂಬಲಿಸಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರೊಬ್ಬರು ಪತ್ರವೂ ನೀಡಿದ್ದರು. ಕೆಲ ಮುಖಂಡರು ಲಾಬಿ ನಡೆಸಿದ್ದರು. ಆಕೆ ಇದನ್ನು ಸಹೋದ್ಯೋಗಿ, ಸಂಬಂಧಿಕರ ಜೊತೆ ಹೇಳಿಕೊಂಡಿದ್ದಳು ಎನ್ನಲಾಗಿದೆ.ಇವರು ಮಂದಾಕಿನಿ ವಿರುದ್ಧವೇ ಅವ್ಯವಹಾರದ ಆರೋಪ ಹೊರಿಸಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರು. ಇದನ್ನು ಅರಿತ ಸಂಬಂಧಿಕರು ಆಕೆಗೆ ಧೈರ್ಯ ಹೇಳಿದ್ದರು. ಮಗಳ ನೋವನ್ನು ಕಂಡ ತಾಯಿ `ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಿಡು~ ಎಂದು ಬೇಸರದಿಂದ ನುಡಿದಿದ್ದರು.ರಾಜೀನಾಮೆ: ಭಾನುವಾರ ಮಂದಾಕಿನಿ ತಾಯಿ ಬುದ್ಧವಿಹಾರಕ್ಕೆ ಹೋಗಿದ್ದರು. ಮನೆಯಲ್ಲಿ ಯಾರೂ ಇರಲಿಲ್ಲ. ಸಂಜೆ ನಾಲ್ಕು ಗಂಟೆಗೆ ಮನೆಗೆ ಯಾರೋ ಬಂದು ಹೋಗಿದ್ದಾರೆ ಎಂದು ಪಕ್ಕದ ಮನೆಯವರು ಹೇಳುತ್ತಾರೆ. ಸಂಜೆ ಆರು ಗಂಟೆಯ ಸುಮಾರಿಗೆ ತಾಯಿ ಮನೆಗೆ ಬಂದಾಗ ಬಾಗಿಲು ಹಾಕಿತ್ತು. ಕಿಟಕಿಯಿಂದ ನೋಡಿದಾಗ ಮಂದಾಕಿನಿ  ಬಾರದ ಲೋಕಕ್ಕೆ ಹೋಗಿದ್ದರು.ಉಳಿದವರು: ಬಹುತೇಕ ಪಿಡಿಒಗಳು ಕಿರುಕುಳದ ರಾಜಕೀಯ ಕರಿನೆರಳಲ್ಲಿ ನಲುಗುತ್ತಿದ್ದಾರೆ. ಇನ್ನಾದರೂ ಅವರ ಕೂಗು ಶಾಸಕರಿಗೆ, ಜಿಪಂ ಸದಸ್ಯರಿಗೆ, ಪ್ರಮುಖ ಪಕ್ಷಗಳ ಮುಖಂಡರಿಗೆ ಕೇಳಿಸಲಿ ಎಂಬುದು ಪ್ರಜ್ಞಾವಂತರ ಆಶಯ. `ಅಧಿಕಾರಿ~ ಅಸುನೀಗಿದ್ದಾಳೆ. ಹೀಗಾದರೆ `ಅಭಿವೃದ್ಧಿ~? 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.