5

‘ಎಲ್ಲಾ ಭಾಷೆಯ ಚಿತ್ರಗಳಲ್ಲಿ ನಟಿಸಲು ಇಷ್ಟ’

Published:
Updated:
ಶೋಭಿತಾ ಧುಲಿಪಾಲ

ಇಮ್ರಾನ್‌ ಹಶ್ಮಿ ಅವರ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೀರಿ. ಹೇಗನ್ನಿಸುತ್ತಿದೆ?

ಈ ಸಿನಿಮಾದ ಕತೆ ಆಸಕ್ತಿ ಕೆರಳಿಸುವಂತಿದ್ದು, ಕುತೂಹಲಕಾರಿಯಾಗಿದೆ. ನನ್ನ ಪಾತ್ರವೂ ಅಷ್ಟೇ. ಈ ಚಿತ್ರದ ಚಿತ್ರೀಕರಣ ಮಾರಿಷಸ್‌ನಲ್ಲಿ ನಡೆಯುತ್ತಿದೆ. ನನ್ನ ಪಾತ್ರವನ್ನು ನಾನು ಸಂಪೂರ್ಣ ಎಂಜಾಯ್‌ ಮಾಡಿಕೊಂಡು ನಟಿಸುತ್ತಿದ್ದೇನೆ. ನಟನೆ ವಿಷಯಕ್ಕೆ ಬಂದರೆ ನಾನು ಇನ್ನೂ ಕಲಿಯುವುದು ಸಾಕಷ್ಟಿದೆ. ಚಿತ್ರೀಕರಣಕ್ಕೆ ಹೋಗುವ ಮೊದಲು ನಾನು ಹೋಂವರ್ಕ್‌ ಮಾಡಿಕೊಳ್ಳುತ್ತೇನೆ. ಈ ಚಿತ್ರ ಸ್ಪಾನಿಷ್‌ ಚಿತ್ರ ‘ದ ಬಾಡಿ’ ರಿಮೇಕ್‌. ಇಮ್ರಾನ್‌ ಹಶ್ಮಿ ಹಾಗೂ ರಿಷಿ ಕಪೂರ್‌ ಅವರಂತಹ ಪ್ರಸಿದ್ಧ ನಟರೊಂದಿಗೆ ನಟಿಸುವ ಅವಕಾಶ ಸಿಕ್ಕಿದೆ. ಚಿತ್ರದ ಕತೆಯ ಬಗ್ಗೆ ಚಿತ್ರತಂಡವೇ ಶೀಘ್ರದಲ್ಲಿ ಮಾಹಿತಿ ನೀಡಲಿದೆ. ಚಿತ್ರಕ್ಕೆ ಇನ್ನೂ ಹೆಸರಿಡಬೇಕಾಗಿದೆ. 

ನಿರ್ದೇಶಕ ಜೀತು ಜೋಸೆಫ್‌ ಅವರ ಜೊತೆ ಕೆಲಸ ಮಾಡಿದ ಅನುಭವ?

ಜೀತು ಜೋಸೆಫ್‌ ಅವರು ಅತ್ಯಂತ ತೀಕ್ಷ್ಣ ಹಾಗೂ ಪ್ರಾಮಾಣಿಕ ವ್ಯಕ್ತಿ. ಅವರ ಜೊತೆ ಕೆಲಸ ಮಾಡುವುದೇ ದೊಡ್ಡ ಅನುಭವ. ಈ ಹಿಂದೆ ನಾನು ಅನೇಕ ಬಾರಿ ಜೀತು ಜೊಸೆಫ್‌ ಅವರನ್ನು ಭೇಟಿ ಮಾಡಿದ್ದೆ. ಈಗ ಅವರ ಚಿತ್ರದಲ್ಲೇ ನಟಿಸಲು ಖುಷಿಯಾಗುತ್ತಿದೆ. 

ನೀವು ಮುಖ್ಯಪಾತ್ರದಲ್ಲಿ ನಟಿಸಿರುವ ಮಲಯಾಳಂ ಸಿನಿಮಾ ‘ಮೂಥನ್‌’ನಲ್ಲಿ ಬಗ್ಗೆ ಹೇಳಿ.

ಭಾವನಾತ್ಮಕವಾಗಿ ನನಗೆ ತುಂಬಾ ಹತ್ತಿರವಾದ ಸಿನಿಮಾವಿದು. ಇದರಲ್ಲಿ ನಾನು ರೋಸಿ ಎಂಬ ಸೆಕ್ಸ್‌ ವರ್ಕರ್‌ ಮಹಿಳೆಯ ಪಾತ್ರದಲ್ಲಿ ನಟಿಸಿದ್ದೇನೆ. ಪಾತ್ರದ ತಯಾರಿಗಾಗಿ ಮುಂಬೈನ ಕಾಮಾಟಿಪುರ ರೆಡ್ ಲೈಟ್ ಏರಿಯಾಕ್ಕೆ ಹೋಗಿ ಅಲ್ಲಿರುವ ಸೆಕ್ಸ್ ವರ್ಕರ್ಸ್ ಜೊತೆ ಮಾತನಾಡಿ, ಅವರಿಂದ ಮಾಹಿತಿಗಳನ್ನು ಸಂಗ್ರಹಿಸಿದ್ದೆ. ಹಲವಾರು ಮಹಿಳೆಯರನ್ನು ಭೇಟಿ ಮಾಡಿ ಅವರ ಕಷ್ಟ-ನೋವುಗಳ ಬಗ್ಗೆ ತಿಳಿದುಕೊಂಡೆ. ಬೆಂಕಿಯಲ್ಲಿ ಅರಳಿದ ಹೂವಿನಂತಹ ಪಾತ್ರ ನನ್ನದು. ಸಿನಿಮಾಕ್ಕಾಗಿ ಕಲಾವಿದರ ಆಯ್ಕೆ ಮಾಡುವಾಗ ನಿರ್ದೇಶಕ ಗೀತು ಮೋಹನ್‌ದಾಸ್‌ ಈ ಪಾತ್ರಕ್ಕೆ ನಾನು ನಟಿಸಬಹುದಾ? ಎಂದು ಅನುಮಾನ ವ್ಯಕ್ತಪಡಿಸಿದ್ದರು. ಅನಂತರ ರೋಸಿ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದರು.

ಈ ಸಿನಿಮಾದಲ್ಲಿ ಗೀತು ಮೋಹನ್‌ದಾಸ್‌ ಹಾಗೂ ನಟ ನಿವಿನ್‌ ಪೌಲಿ ಜೊತೆಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಈ ಸಿನಿಮಾ ‘ಅತ್ಯುತ್ತಮ ಚಿತ್ರಕತೆ’ ಎಂಬ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ. ನಿವಿನ್‌ ಪೌಲಿ ಕೂಡ ಅಷ್ಟೇ, ಒಬ್ಬ ಅತ್ಯುತ್ತಮ ನಟ. ಈ ಚಿತ್ರಕ್ಕಾಗಿ ಮುಂಬೈನ ಕಾಮಾಟಿಪುರದಲ್ಲೇ ಚಿತ್ರೀಕರಣ ನಡೆಸಲಾಗಿದೆ. ಅಲ್ಲಿರುವ ವೇಶ್ಯಾಗೃಹಗಳಲ್ಲಿ ಅಲ್ಲಿನ ಮಹಿಳೆಯರ ನಿಜ ಜೀವನದ ಅರಿವಾಯಿತು. ನನ್ನೊಳಗೆ ನಾನು ಗಟ್ಟಿಯಾಗುತ್ತಾ ಹೋದೆ. ಈ ಸಂದರ್ಭಗಳಲ್ಲಿ ನನಗೆ ಗೀತು ಮೋಹನ್‌ದಾಸ್‌ ಹಾಗೂ ನಿವಿನ್‌ ಪೌಲಿ ಹಾಗೂ ಇಡೀ ಚಿತ್ರತಂಡವೇ ನನ್ನನ್ನು ಚೆನ್ನಾಗಿ ನೋಡಿಕೊಂಡಿತು.

ತೆಲುಗಿನಲ್ಲಿ ನಿಮ್ಮ ಮೊದಲ ಸಿನಿಮಾ ‘ಗೂಢಚಾರಿ’ ಬಗ್ಗೆ ಹೇಳಿ

ತೆಲುಗಿನಲ್ಲಿ ನಾನು ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ನಟಿಸಿದ ‘ಗೂಢಚಾರಿ’ ಸಿನಿಮಾ ಮುಂದಿನ ಆಗಸ್ಟ್‌ 3ರಂದು ಬಿಡುಗಡೆಯಾಗಲಿದೆ. ನನ್ನ ಮಾತೃಭಾಷೆ ಸಿನಿಮಾದಲ್ಲಿ ನಾನು ನಟಿಸುತ್ತಿರುವ ಮೊದಲ ಚಿತ್ರವೂ ಇದೇ. 2016ರಲ್ಲಿ ಬಿಡುಗಡೆಯಾದ ‘ಕ್ಷಣಂ’ ಚಿತ್ರತಂಡವೇ ಈ ಚಿತ್ರವನ್ನೂ ನಿರ್ಮಿಸಿದೆ. ನನ್ನ ಪಾತ್ರ ವಿಭಿನ್ನವಾಗಿದೆ ಎಂದಷ್ಟೇ ಹೇಳಬಲ್ಲೆ. 

ಚಿತ್ರಕ್ಕೆ ಸಹಿ ಮಾಡುವ ಮುಂಚೆ ಯಾವುದಕ್ಕೆ ಪ್ರಾಮುಖ್ಯತೆ ನೀಡುತ್ತೀರಿ?

ನಾನು ನಿರ್ದೇಶಕನ ನಟಿ. ಹೀಗಾಗಿ ಚಿತ್ರಕತೆ ಹಾಗೂ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಆದ್ಯತೆ. ಸಣ್ಣ ಪಾತ್ರವಾಗಿದ್ದರೂ  ಆ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಎಷ್ಟು ಪ್ರಭಾವ ಬೀರಬಹುದು ಎಂದು ಯೋಚಿಸುತ್ತೇನೆ.

ನಿಮ್ಮ ಫಿಟ್‌ನೆಸ್‌ ಗುಟ್ಟೇನು?

ಆರೋಗ್ಯಕರ ಆಹಾರ ಸೇವನೆ ಮತ್ತು ಹೆಚ್ಚು ನೀರು ಕುಡಿಯುತ್ತೇನೆ. ನಟನಾ ಕ್ಷೇತ್ರದಲ್ಲಿರುವುದರಿಂದ ಫಿಟ್‌ನೆಸ್‌ ಬಗ್ಗೆ ಯೋಚನೆ ಮಾಡಲೇಬೇಕು. ಓದುವುದು ನನ್ನ ನೆಚ್ಚಿನ ಹವ್ಯಾಸ. ತುಂಬಾ ಓದುತ್ತೇನೆ. ತುಂಬ ನಗುತ್ತೇನೆ. ಇದೂ ಎರಡೂ ಕೆಲಸ ಮಾಡಿದೆ ಎಂದೆನ್ನಿಸುತ್ತದೆ. ಮಾನಸಿಕವಾಗಿ ಫಿಟ್‌ ಆಗಿರಲು ಇದು ಸಹಾಯ ಮಾಡುತ್ತದೆ. 

ಕನ್ನಡ ಸಿನಿಮಾದಲ್ಲಿ ನಟಿಸುತ್ತೀರಾ?

ಖಂಡಿತಾ, ಎಲ್ಲಾ ಭಾಷೆಯ ಚಿತ್ರಗಳಲ್ಲೂ ನಟಿಸಲು ನಾನು ಇಷ್ಟಪಡುತ್ತೇನೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಈಚೆಗೆ ಉತ್ತಮ, ಪ್ರಯೋಗಾತ್ಮಕ ಚಿತ್ರಗಳು ಬರುತ್ತಿವೆ. ಕತೆ, ನಿರೂಪಣೆ ಶೈಲಿ ಬದಲಾಗಿವೆ. ಇಂತಹ ಉತ್ತಮ ಚಿತ್ರಗಳ ಭಾಗವಾಗುವುದಕ್ಕೆ ನನಗೆ ಭಾಷೆಯ ಹಂಗಿಲ್ಲ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !