ಮುಲಾರಪಟ್ಣ: ಸಂಪರ್ಕ ರಸ್ತೆಗೆ ನಿರಂತರ ತೊಡಕು

7
ಜುಲೈ 2ರಂದು ಪೂರ್ಣಗೊಳಿಸುವುದು ಅಸಾಧ್ಯ: ಗುತ್ತಿಗೆದಾರ

ಮುಲಾರಪಟ್ಣ: ಸಂಪರ್ಕ ರಸ್ತೆಗೆ ನಿರಂತರ ತೊಡಕು

Published:
Updated:
ಬಂಟ್ವಾಳ ತಾಲ್ಲೂಕಿನ ಮುಲಾರಪಟ್ಣ ಪಲ್ಗುಣಿ ಸೇತುವೆ ಬಳಿ ತೂಗುಸೇತುವೆ ಸಂಪರ್ಕ ರಸ್ತೆ ರಸ್ತೆ ಕಾಮಗಾರಿ ವೀಕ್ಷಿಸಲು ಶನಿವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಬಂಟ್ವಾಳ: ತಾಲ್ಲೂಕಿನ ಅರಳ ಮತ್ತು ಮಂಗಳೂರು ತಾಲ್ಲೂಕಿನ ಮುತ್ತೂರು ಗ್ರಾಮ ಸಂಪರ್ಕಿಸುವ ಮುಲಾರಪಟ್ಣ  ಸೇತುವೆ ಕುಸಿದು ವಾರ ಕಳೆದರೂ ಇಲ್ಲಿನ ತೂಗುಸೇತುವೆ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಒಂದಿಲ್ಲೊಂದು ತೊಡಕು ಕಾಣಿಸಿಕೊಳ್ಳುತ್ತಿದೆ.

ಮುಲಾರಪಟ್ಣ ಜುಮಾಮಸೀದಿ ಮತ್ತು ಕೊಟ್ಟದಡ್ಕ ದೈವಸ್ಥಾನ ಬಳಿ ಫಲ್ಗುಣಿ ನದಿ ತೀರದಲ್ಲಿ ಬಡಗಬೆಳ್ಳೂರು ಗ್ರಾಮ ವ್ಯಾಪ್ತಿಯಲ್ಲಿರುವ ತೂಗು ಸೇತುವೆ ಸಂಪರ್ಕಿಸಲು ಈ ಹಿಂದೆ ಮರಳುಗಾರರು ನಿರ್ಮಿಸಿದ್ದ ತಾತ್ಕಾಲಿಕ ರಸ್ತೆಯನ್ನು ಮತ್ತೆ ಕೆಂಪು ಕಲ್ಲು ಹಾಸುವ ಮೂಲಕ ಎತ್ತರಗೊಳಿಸಿ ಸಿಮೆಂಟ್ ಮಿಶ್ರಿತ ಜೆಲ್ಲಿ ಹಾಸುವ ಕಾಮಗಾರಿ ಕಳೆದ ನಾಲ್ಕೈದು ದಿನಗಳಿಂದ ಭರದಿಂದ ನಡೆಯುತ್ತಿತ್ತು.  ಗುರುವಾರ ಸುರಿದ ಭಾರಿ ಮಳೆಗೆ ಮತ್ತೆ ನೆರೆ ನೀರು ನುಗ್ಗಿ ರಸ್ತೆ ಕಾಮಗಾರಿಗೆ ಅಡ್ಡಿಯಾಗಿತ್ತು. ಈಗಾಗಲೇ ಸ್ಥಳೀಯ ನಿವಾಸಿಗಳಾದ ಸುಂದರ ಶೆಟ್ಟಿ, ಭೋಜ ಶೆಟ್ಟಿ, ಗೋಪಾಲ ಶೆಟ್ಟಿ, ಸಂಜೀವ ಶೆಟ್ಟಿ, ಬ್ರಿಜೇಶ ಶೆಟ್ಟಿ ಮತ್ತಿತರ ಜಮೀನಿನ ಬಳಿ ಬಂಟ್ವಾಳ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು ಅವರು ಎರಡೆರಡು ಬೃಹತ್ ಗಾತ್ರದ ಸಿಮೆಂಟ್ ಪೈಪ್ ಅಳವಡಿಸಿ ಮೋರಿ ನಿರ್ಮಿಸಿದ್ದಾರೆ. ರಸ್ತೆ ಕಾಮಗಾರಿ ತ್ವರಿತಗೊಳಿಸಲು ಸ್ಥಳೀಯರ ಸಹಕಾರ ದೊರೆತರೆ ಮಾತ್ರ ಸಾಧ್ಯ. ಜುಲೈ 2ರಂದು ಪೂರ್ಣಗೊಳಿಸುವುದು ಅಸಾಧ್ಯ ಎಂದು ಗುತ್ತಿಗೆದಾರ ರಹಿಮಾನ್ ವಳವೂರು ಅಳಲು ತೋಡಿಕೊಂಡಿದ್ದಾರೆ.

ಮುತ್ತೂರು ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಶೇಕಡ 70ರಷ್ಟು ಮಂದಿ ವಿದ್ಯಾರ್ಥಿಗಳು ಮುಲಾರಪಟ್ನ ಸೇತುವೆಯನ್ನೇ ಅವಲಂಬಿಸಿದ್ದಾರೆ. ಇದರಿಂದಾಗಿ ಮಂಗಳೂರು ಕ್ಷೇತ್ರಶಿಕ್ಷಣಾಧಿಕಾರಿ ಲೋಕೇಶ್ ಅವರ ಸೂಚನೆಯಂತೆ ಜುಲೈ 2ರವರೆಗೆ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದ್ದು, ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಲಿದೆ. ಇನ್ನೊಂದೆಡೆ ಬಹುತೇಕ ವಿದ್ಯಾರ್ಥಿಗಳಿಗೆ ತೂಗುಸೇತುವೆ ಸಂಚಾರ ಬಗ್ಗೆ ಭೀತಿ ವ್ಯಕ್ತಪಡಿಸುತ್ತಿದ್ದು, ಇದಕ್ಕಾಗಿ ತೂಗುಸೇತುವೆ ತನಕ ಮಕ್ಕಳ ಪೋಷಕರನ್ನು ಕೂಡಾ ಬರುವಂತೆ ವಿನಂತಿಸಲಾಗಿದೆ ಎಂದು ಮುಖ್ಯಶಿಕ್ಷಕ ಸಿಪ್ರಿಯಾನ್ ಡಿಸೋಜ ಪ್ರತಿಕ್ರಿಯಿಸಿದ್ದಾರೆ.

ಮನವಿ: ಇದೇ ವೇಳೆ ತೂಗುಸೇತುವೆಯಲ್ಲಿ ಸಂಚರಿಸುವ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಕೆಲವೊಂದು ಕಿಡಿಗೇಡಿಗಳು ಮೊಬೈಲ್‌ನಲ್ಲಿ ಸೆಲ್ಫಿ ತೆಗೆಯುವ ಮೂಲಕ ಅವರ ಭಾವಚಿತ್ರ ಸೆರೆ ಹಿಡಿದು ಕಿರುಕುಳ ನೀಡುತ್ತಿದ್ದಾರೆ. ಇದಕ್ಕಾಗಿ ಎರಡು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ಮುತ್ತೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹರಿಯಪ್ಪ ಅವರು ಜಿಲ್ಲಾಧಿಕಾರಿ ಮತ್ತು ಸಚಿವರಿಗೆ ಮನವಿ ಸಲ್ಲಿಸಿದರು.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೈ.ಉಮೇಶ ಭಟ್, ಸಹಾಯಕ ಎಂಜಿನಿಯರ್ ಅರುಣ್ ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಅರಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಂಗಮ್ಮ, ಉಪಾಧ್ಯಕ್ಷ ಅಗ್ಗೊಂಡೆ ಜಗದೀಶ ಆಳ್ವ, ಸದಸ್ಯ ಎಂ.ಬಿ.ಆಶ್ರಫ್, ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ರಾಯಿ, ಮಾಜಿ ಅಧ್ಯಕ್ಷ ರಝಾಕ್ ಕುಕ್ಕಾಜೆ, ರೈತ ಮೋರ್ಚಾ ಮುಖಂಡ ನಂದರಾಮ ರೈ  ಇದ್ದರು.

ರಸ್ತೆ ಪೂರ್ಣ:   3 ವರ್ಷಗಳ ಹಿಂದೆ ಬಡಗಬೆಳ್ಳೂರು ಮತ್ತು ಮುತ್ತೂರು ಗ್ರಾಮ ಸಂಪರ್ಕಿಸಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಿಮರ್ಾಣಗೊಂಡ ತೂಗುಸೇತುವೆ ಇನ್ನೊಂದು ಬದಿಯಲ್ಲಿ ಮುತ್ತೂರು ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ನಡೆದಿದ್ದು, ಭಾನುವಾರ ಸಂಜೆಯೊಳಗೆ ಸಿಮೆಂಟ್ ಮಿಶ್ರಿತ ಜೆಲ್ಲಿ ಹಾಸುವ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅರಳ ಕನ್ಸ್ಟ್ರಕ್ಷನ್ಸ್ ಸಂಸ್ಥೆ ಗುತ್ತಿಗೆದಾರ ರಂಜನ್ ಕುಮಾರ್ ತಿಳಿಸಿದ್ದಾರೆ. -ಮೋಹನ್ ಕೆ.ಶ್ರೀಯಾನ್ ರಾಯಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !