ವೈದ್ಯೆ, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

7
ವೆನ್ಲಾಕ್‌ ಆಸ್ಪತ್ರೆಯಲ್ಲಿ ಅವ್ಯವಹಾರ ಆರೋಪ

ವೈದ್ಯೆ, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

Published:
Updated:

ಮಂಗಳೂರು: ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 2011 ಮತ್ತು 2012ರಲ್ಲಿ ಕೈಗವಸು, ಬಟ್ಟೆ ಮತ್ತು ಹಾಸಿಗೆ ಸಾಮಾಗ್ರಿ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ಆಸ್ಪತ್ರೆಯ ಹಿಂದಿನ ಅಧೀಕ್ಷಕಿ ಡಾ.ಸರೋಜಾ ಮತ್ತು ಪ್ರಥಮ ದರ್ಜೆ ಸಹಾಯಕಿ ಕೆ.ಬಿ.ಸುಮಾ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಿ, ತನಿಖೆ ಆರಂಭಿಸಿದೆ.

ಆಸ್ಪತ್ರೆಯಲ್ಲಿ ವಿವಿಧ ಸಾಮಾಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ವಿಶ್ವನಾಥ ಎಂಬುವವರು ಎಸಿಬಿಗೆ ದೂರು ಸಲ್ಲಿಸಿದ್ದರು. ಈ ಕುರಿತು ಪ್ರಾಥಮಿಕ ತನಿಖೆ ನಡೆಸಿದಾಗ, ಶಸ್ತ್ರಚಿಕಿತ್ಸೆ ವೇಳೆ ಬಳಸುವ ಕೈಗವಸುಗಳ ಖರೀದಿಯಲ್ಲಿ ₹ 10,86,780, ಲಿನೆನ್‌ ಬಟ್ಟೆ ಖರೀದಿಯಲ್ಲಿ ₹ 45,500 ಮತ್ತು ಹಾಸಿಗೆ ಸಾಮಾಗ್ರಿ ಖರೀದಿಯಲ್ಲಿ ₹ 10,000 ಅವ್ಯವಹಾರ ನಡೆದಿರುವುದು ಪತ್ತೆಯಾಗಿತ್ತು.

‘ಡಾ.ಸರೋಜಾ ಮತ್ತು ಕೆ.ಬಿ.ಸುಮಾ ವಿರುದ್ಧದ ಆರೋಪಗಳಲ್ಲಿ ಮೇಲ್ನೋಟಕ್ಕೆ ಸತ್ಯಾಂಶವಿದೆ ಎಂಬುದು ಪ್ರಾಥಮಿಕ ತನಿಖೆ ವೇಳೆ ಕಂಡುಬಂದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ತನಿಖಾ ವರದಿಯನ್ನು ಸಲ್ಲಿಸಿ, ಆರೋಪಿತರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಅನುಮತಿ ಪಡೆಯಲಾಗಿದೆ. ಶನಿವಾರ ಇಬ್ಬರ ವಿರುದ್ಧವೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ– 1988ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಡಿವೈಎಸ್‌ಪಿ ಸುಧೀರ್ ಎಂ.ಹೆಗಡೆ ತನಿಖೆ ನಡೆಸುತ್ತಿದ್ದಾರೆ’ ಎಂದು ಎಸಿಬಿ ಪಶ್ಚಿಮ ವಲಯ ಎಸ್‌ಪಿ ಎನ್‌.ಎಸ್‌.ಶೃತಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !