ರಸ್ತೆಯಲ್ಲಿ ಕೊಚ್ಚೆ ನೀರು, ಹೈರಾಣಾದ ನಾಗರಿಕರು

7
ನಗರಸಭೆ, ಆರೋಗ್ಯ ಇಲಾಖೆ ಅಧಿಕಾರಿಗಳ ಧೋರಣೆಗೆ ಸಾರ್ವಜನಿಕರ ಆಕ್ರೋಶ, ಹದಗೆಟ್ಟ ಮ್ಯಾನ್‌ಹೋಲ್ ಸರಿಪಡಿಸುವಂತೆ ಆಗ್ರಹ

ರಸ್ತೆಯಲ್ಲಿ ಕೊಚ್ಚೆ ನೀರು, ಹೈರಾಣಾದ ನಾಗರಿಕರು

Published:
Updated:
5ನೇ ವಾರ್ಡ್‌ನ ಮುಖ್ಯರಸ್ತೆಯಲ್ಲಿ ಆಗಾಗ ಉಕ್ಕಿ ಹರಿಯುವ ಮ್ಯಾನ್‌ಹೋಲ್

ಚಿಕ್ಕಬಳ್ಳಾಪುರ: ನಗರದ 5ನೇ ವಾರ್ಡ್‌ನ ಮುಖ್ಯರಸ್ತೆಯಲ್ಲಿ ಬಾಲಕಿಯರ ವಸತಿ ನಿಲಯದ ಬಳಿ ಹಾದು ಹೋಗಿರುವ ಒಳಚರಂಡಿ ಮಾರ್ಗದ (ಯುಜಿಡಿ) ಮ್ಯಾನ್‌ಹೋಲ್‌ ಹಾನಿಗೊಂಡಿದ್ದು, ರಸ್ತೆಯಲ್ಲಿ ಆಗಾಗ ಕೊಚ್ಚೆ ನೀರು ಉಕ್ಕಿ ಹರಿದು ಸುತ್ತಮುತ್ತಲಿನ ವಾತಾವರಣ ಅಧ್ವಾನಗೊಳಿಸುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸುತ್ತಿದೆ.

ನಗರದಿಂದ ದಿನ್ನೆ ಹೊಸಹಳ್ಳಿ, ಹನುಮಂತಪುರ, ಅಂಕಣಗೊಂದಿ, ಹೊಸುರು, ಸೂಸೆಪಾಳ್ಯಕ್ಕೆ ಸಂಪರ್ಕಿಸುವ ಈ ರಸ್ತೆ ತ್ಯಾಜ್ಯ ನೀರಿನಿಂದ ದಿನೇ ದಿನೇ ಕೊಚ್ಚೆಗುಂಡಿಯಾಗುತ್ತಿರುವುದು ಸ್ಥಳೀಯರಿಗೆ ತಲೆನೋವಾಗಿದೆ. ಸದ್ಯ ಈ ದಾರಿಯಲ್ಲಿ ಸಂಚರಿಸುವವರು ಮೂಗು ಮುಚ್ಚಿ ಅಸಹ್ಯಪಟ್ಟು ಓಡಾಡುವ ಸನ್ನಿವೇಶ ನಿರ್ಮಾಣಗೊಂಡಿದೆ.

ರಸ್ತೆಯ ಎರಡು ಬದಿಯಲ್ಲಿ ಚರಂಡಿ ಇಲ್ಲ. ಮಳೆಗಾಲದಲ್ಲಿ ಅಧ್ವಾನಗೊಳ್ಳುವ ಈ ಮುಖ್ಯ ರಸ್ತೆಯಲ್ಲಿ ಮ್ಯಾನ್‌ಹೋಲ್‌ನಿಂದ ಶೌಚಾಲಯದ ನೀರು ರಸ್ತೆ ಮೇಲೆ ಹರಿದು, ದುರ್ವಾಸನೆಗೆ ನಾಗರಿಕರು ಬೇಸತ್ತು ಹೊಗುತ್ತಿದ್ದಾರೆ. ಸತತ ಹರಿಯುವ ತ್ಯಾಜ್ಯ ನೀರಿನಿಂದ ಸೊಳ್ಳೆಗಳ ಕಾಟ ಮಿತಿ ಮೀರಿದೆ. ಈ ಸಮಸ್ಯೆ ಬಗೆಹರಿಸಲು ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ನಾಗರಿಕರಲ್ಲಿ ಅಸಮಾಧಾನ ಉಂಟು ಮಾಡಿದೆ.

‘ಕಳೆದ ಮೂರು ತಿಂಗಳಿನಿಂದ ಬಾಲಕಿಯರ ವಸತಿ ನಿಲಯದ ಬಳಿ ಇರುವ ಒಳಚರಂಡಿ ತ್ಯಾಜ್ಯದ ನೀರು ಸೋರಿಕೆಯಾಗುತ್ತಿದೆ. ಈ ಬಗ್ಗೆ ನಗರಸಭೆ ಆಯುಕ್ತರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇನ್ನೂ ಸ್ಥಳೀಯ ಸದಸ್ಯರು ನಮಗೂ ಈ ರಸ್ತೆಗೆ ಸಂಬಂಧವಿಲ್ಲ ಎಂಬುದಾಗಿ ಹೇಳುತ್ತಾರೆ. ಹೀಗಾದರೆ ನಾವು ಯಾರಲ್ಲಿ ಈ ಸಮಸ್ಯೆ ಬಗ್ಗೆ ಹೇಳಿಕೊಳ್ಳುವುದು ತಿಳಿಯತ್ತಿಲ್ಲ’ ಎನ್ನುತ್ತಾರೆ 5ನೇ ವಾರ್ಡ್ ನಿವಾಸಿ ಶ್ರೀನಿವಾಸ್‌.

‘ಜನರ ತೆರಿಗೆ ಹಣದಲ್ಲಿ ಸಂಬಳ ಎಣಿಸಿಕೊಳ್ಳುವ ಅಧಿಕಾರಿಗಳು ತಮ್ಮ ಕರ್ತವ್ಯದ ಬಗ್ಗೆ ಅರಿತುಕೊಳ್ಳಬೇಕು. ಚುನಾವಣೆ ಸಮಯದಲ್ಲಿ ಮನೆ ಬಾಗಿಲಿಗೆ ಕೈ ಮುಗಿದು ಬರುವ ರಾಜಕಾರಣಿಗಳು ತೋರುವ ಜವಾಬ್ದಾರಿ ಸಿಟ್ಟು ತರಿಸುತ್ತದೆ. ಇನ್ನೂ ಸ್ವಚ್ಛತೆಯ ಬಗ್ಗೆ ಪಾಠ ಮಾಡುವ ಆರೋಗ್ಯ ಇಲಾಖೆ ಅಧಿಕಾರಿಗಳು ಕೇವಲ ಆಸ್ಪತ್ರೆಗಳಿಗೆ ಸೀಮಿತರಾಗಿದ್ದಾರೆ’ ಎಂದು ದೂರಿದರು.

‘ಕಳೆದ ಎರಡು ವರ್ಷಗಳಿಂದ ಮುಖ್ಯರಸ್ತೆಯಲ್ಲಿನ ಅನೇಕ ಮ್ಯಾನ್‌ಹೋಲ್‌ಗಳು ಹಾನಿಗೊಂಡಿದ್ದವು. ಅದರಲ್ಲಿ ಕೆಲವೊಂದನ್ನು ಮಾತ್ರ ರಿಪೇರಿ ಮಾಡಿದರು. ಇದೀಗ ಒಂದು ಮ್ಯಾನ್‌ಹೋಲ್‌ ಸಂಪೂರ್ಣ ಹಾಳಾಗಿದ್ದು, ನಿತ್ಯ ಓಡಾಡುವ ವಾಹನ ಸವಾರರಿಗೆ ಈ ರಸ್ತೆ ಅಸಹ್ಯಕರ ವಾತಾವರಣ ಸೃಷ್ಟಿ ಮಾಡುತ್ತಿದೆ. ನಗರಸಭೆಯವರು ಮಳೆಗಾಲಕ್ಕೂ ಮುನ್ನ ಈ ಭಾಗದ ಮ್ಯಾನ್‌ಹೋಲ್‌ಗಳ ಸಮಸ್ಯೆಗಳನ್ನು ಸರಿಪಡಿಸಿ, ಶಾಶ್ವತ ಪರಿಹಾರ ಒದಗಿಸಬೇಕು’ ಎಂದು ಸ್ಥಳೀಯ ನಿವಾಸಿ ಮಂಜುನಾಥ್‌ ಆಗ್ರಹಿಸಿದರು.

‘ಪ್ರತಿ ಮಳೆಗಾಲದಲ್ಲಿ ಮುಖ್ಯರಸ್ತೆಯ ತಗ್ಗು ಪ್ರದೇಶದಲ್ಲಿರುವ ಅನೇಕ ಮ್ಯಾನ್‌ಹೋಲ್‌ಗಳು ತುಂಬಿ ಸುಮಾರು ಅರ್ಧ ಕಿಲೋ ಮೀಟರ್‌ ನಷ್ಟು ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯುತ್ತದೆ. ಇದರಿಂದ ವಿದ್ಯಾರ್ಥಿಗಳು, ನಾಗರಿಕರು ಹೈರಣಾಗುತ್ತಲೇ ಇದ್ದಾರೆ. ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ’ ಎಂದು ಸ್ಥಳೀಯ ನಿವಾಸಿ ನಾರಾಯಣಸ್ವಾಮಿ ಆರೋಪಿಸಿದರು.

‘ಈ ರಸ್ತೆಯ ಮೂಲಕ ಶಾಲೆಗಳಿಗೆ ತೆರಳಲು ವಿದ್ಯಾರ್ಥಿಗಳು ಅಂಜುತ್ತಾರೆ. ಇಷ್ಟೊಂದು ಸಮಸ್ಯೆ ಇದ್ದರೂ ಶಾಸಕರು ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಕಣ್ಣು ಹಾಯಿಸದಿರುವುದು ದುರಂತ. ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಅಧಿಕಾರಿಗಳು ಭಾಷಣ ಮಾಡುವುದನ್ನು ಬಿಟ್ಟು, ಈ ಭಾಗಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು’ ಎಂದು ಸ್ಥಳೀಯ ನಿವಾಸಿ ಲೋಕೇಶ್ ಅಸಮಾಧಾನ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !