ಜುಲೈ 27 ರಿಂದ ಮಕ್ಕಳ ಚಲನಚಿತ್ರೋತ್ಸವ

6

ಜುಲೈ 27 ರಿಂದ ಮಕ್ಕಳ ಚಲನಚಿತ್ರೋತ್ಸವ

Published:
Updated:
ಮಕ್ಕಳ ಚಲನಚಿತ್ರೋತ್ಸವದ ಪೂರ್ವಭಾವಿ ಸಭೆಯಲ್ಲಿ ಉಪಭಾಗಾಧಿಕಾರಿ ಬಿ.ಶಿವಸ್ವಾಮಿ ಮಾತನಾಡಿದರು.

ಚಿಕ್ಕಬಳ್ಳಾಪುರ: ‘ಮಕ್ಕಳಲ್ಲಿ ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸಿ ಸೃಜನಶೀಲತೆಯನ್ನು ಬೆಳೆಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಚಲನ ಚಿತ್ರಮಂದಿರಗಳಲ್ಲಿ ಜುಲೈ 27 ರಿಂದ ಆಗಸ್ಟ್ 2ರ ವರೆಗೆ ಮಕ್ಕಳ ಚಲನಚಿತ್ರೋತ್ಸವ ಏರ್ಪಡಿಸಲಾಗುತ್ತಿದೆ’ ಎಂದು ಉಪಭಾಗಾಧಿಕಾರಿ ಬಿ.ಶಿವಸ್ವಾಮಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಚಲನಚಿತ್ರೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.  ‘ಜಿಲ್ಲೆಯ ಆರು ತಾಲ್ಲೂಕಿನ 14 ಚಲನ ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 8 ರಿಂದ 10ರ ವರೆಗೆ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. 2 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಒಬ್ಬ ವಿದ್ಯಾರ್ಥಿಗೆ ₨15 ಶುಲ್ಕ ನಿಗದಿಪಡಿಸಲಾಗಿದೆ’ ಎಂದರು.

‘ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹತ್ತಿರದ ಚಿತ್ರ ಮಂದಿರಗಳಿಗೆ ಭೇಟಿ ನೀಡಿ ಆಸನದ ವ್ಯವಸ್ಥೆಯನ್ನು ಪರಿಶೀಲಿಸಿ ತಾಲ್ಲೂಕಿನಲ್ಲಿರುವ ಶಾಲಾ ಮಕ್ಕಳ ಸಂಖ್ಯೆಗನುಗುಣವಾಗಿ ವೇಳಾ ಪಟ್ಟಿ ಸಿದ್ಧಪಡಿಸಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿನ ಚಿತ್ರಮಂದಿರಗಳ ಮಾಲೀಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿ ವರದಿ ನೀಡಬೇಕು. ಮಕ್ಕಳ ಚಲನ ಚಿತ್ರೋತ್ಸವ ಪ್ರದರ್ಶನವನ್ನು ಜಿಲ್ಲೆಯಲ್ಲಿ ಆರು ದಿನ ನಡೆಸಲು ನಿಗದಿಪಡಿಸಲಾಗಿದೆ. ಅದಕ್ಕೆ ಪೂರ್ವ ನಿಯೋಜಿತ ರೂಪುರೇಷೆಗಳನ್ನು ಸಿದ್ದ ಪಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ಜುಲೈ 27 ರಂದು ಬೆಳಿಗ್ಗೆ ಚಿಕ್ಕಬಳ್ಳಾಪುರದ ಕೃಷ್ಣ ಚಿತ್ರಮಂದಿರದಲ್ಲಿ ಹಾಗೂ ವಿವಿಧ ತಾಲ್ಲೂಕುಗಳ ಆಯ್ದ ಚಿತ್ರಮಂದಿರದಲ್ಲಿ ತಹಶೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಲನಚಿತ್ರೋತ್ಸವವನ್ನು ಉದ್ಘಾಟಿಸಬೇಕು. ಪ್ರತಿ ಚಿತ್ರಮಂದಿರದಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಪ್ರಥಮ ಚಿಕಿತ್ಸಾ ವ್ಯವಸ್ಥೆ ಹಾಗೂ ಅಗ್ನಿ ಅನಾಹುತ ಎದುರಿಸುವ ವ್ಯವಸ್ಥೆ ಮಾಡಿಕೊಂಡಿರಬೇಕು’ ಎಂದು ತಹಶೀಲ್ದಾರ್‌ಗಳಿಗೆ ಸೂಚಿಸಿದರು.

ತಹಶೀಲ್ದಾರ್ ನರಸಿಂಹಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಣ್ಣರೆಡ್ಡಿ ಹಾಗೂ ಚಲನ ಚಿತ್ರಮಂದಿರದ ಮಾಲೀಕರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !